ಬೆಂಗಳೂರು: ಆದರಣೀಯ ಪ್ರಧಾನಿ ನರೇಂದ್ರ ಮೋದಿಜೀ ಅವರ ನಾಯಕತ್ವವನ್ನು ಇಡೀ ದೇಶವೇ ಮೆಚ್ಚುತ್ತಿದೆ. ದೇಶದಾದ್ಯಂತ ಮೋದಿಜೀ ಅವರ ಪರ ವಾತಾವರಣ ನಿರ್ಮಾಣವಾಗಿದೆ. 400ಕ್ಕೂ ಹೆಚ್ಚು ಸ್ಥಾನಗಳನ್ನು ಎನ್ಡಿಎ ಪಡೆಯಬೇಕೆಂಬ ಸಂಕಲ್ಪ ಮೋದಿಯವರದು. ಅದು ಜನಸಾಮಾನ್ಯರ ಅಭಿಪ್ರಾಯ ಕೂಡ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸಂಸದರಾದ ಶ್ರೀಮತಿ ಸುಮಲತಾ ಅಂಬರೀಷ್, ಕೊಪ್ಪಳ ಕ್ಷೇತ್ರದ ಮಾಜಿ ಸಂಸದ ಎಸ್.ಶಿವರಾಮೇಗೌಡ, ವಿಜಯಪುರ ಜಿಲ್ಲೆ ಯುವ ನಾಯಕ, ಸಚಿವ ಶಿವಾನಂದ ಪಾಟೀಲರ ಕುಟುಂಬದವರಾದ ಹರ್ಷ ಗೌಡ ಶಿವಶರಣ ಪಾಟೀಲ್, ಮಾಜಿ ಕ್ರಿಕೆಟ್ ಪಟು ದೊಡ್ಡಗಣೇಶ್, ಗಾಯತ್ರಿ ತಿಮ್ಮಾರೆಡ್ಡಿ, ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಶ್ರೀನಿವಾಸ್, ತುಕಾರಾಂಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಪ್ರಭುರಾಜ ಎಸ್ ಪಾಟೀಲ, ಗಂಗಾವತಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೀರಭದ್ರಗೌಡ ಮೊದಲಾದವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಮೋದಿ ಮತ್ತೊಮ್ಮೆ ಎಂಬ ವಾತಾವರಣವಿದೆ. ಮೋದಿ ಪರ ಅಲೆಯನ್ನು ಗಮನಿಸಿದ ಕಾಂಗ್ರೆಸ್ಸಿನ ಯಾವುದೇ ಸಚಿವರು ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲು ಮುಂದಾಗಿಲ್ಲ ಎಂದು ತಿಳಿಸಿದರು.
ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರಿದ್ದಾರೆ. ಅವರಿಗೆ ಹೃತ್ಪೂರ್ವಕ ಸ್ವಾಗತ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ಅವರದೇ ಆದ ಪ್ರಭಾವ ಸುಮಲತಾ ಅವರಿಗೆ ಇದೆ ಎಂದು ಅಭಿಪ್ರಾಯಪಟ್ಟರು. ಇಡೀ ರಾಜ್ಯಕ್ಕೆ ಇದರಿಂದ ದೊಡ್ಡ ಶಕ್ತಿ ಲಭಿಸಿದಂತಾಗಿದೆ ಎಂದರು. ಕೊಪ್ಪಳದ ಮಾಜಿ ಸಂಸದ ಎಸ್.ಶಿವರಾಮೇಗೌಡ ಅವರಿಗೆ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪ್ರಭಾವ ಇದೆ ಎಂದರು. ಇತರ ಮುಖಂಡರನ್ನೂ ಅವರು ಸ್ವಾಗತಿಸಿದರು.
28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಗೆಲುವಿನ ಸಂಕಲ್ಪ ನಮ್ಮದು. ಪಕ್ಷ ಸೇರ್ಪಡೆಯು ನಮ್ಮ ಬಲ ಹೆಚ್ಚಿಸಿದೆ. ಅವರ ಸೇವೆಯನ್ನು ಪಕ್ಷಕ್ಕೆ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸುಮಲತಾ ಅಂಬರೀಷ್ ಅವರು ಮಾತನಾಡಿ, ಬಿಜೆಪಿಯ ಹಿರಿಯರಿಂದ ಮಾರ್ಗದರ್ಶನ ಲಭಿಸಿದೆ. ಅದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು. ಅದೇ ನನಗೆ ಸ್ಫೂರ್ತಿ ಎಂದ ಅವರು, ಪ್ರಧಾನಿ ಮೋದಿಜೀ ಅವರ ನಾಯಕತ್ವ, ಪರಿಕಲ್ಪನೆ, ಅವರ ಕನಸುಗಳು, ಸಂಕಲ್ಪವು ಹೊಸ ಸ್ಫೂರ್ತಿ, ತಿಳುವಳಿಕೆಗೆ ಕಾರಣವಾಗಿದೆ ಎಂದು ನುಡಿದರು.
ಬಿಜೆಪಿ ಸೇರುವುದು ಉತ್ತಮ ಆಯ್ಕೆ ಅನಿಸಿದೆ. ಇಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಸಹಕಾರವನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಮುಂದಾದರು ಎಂದು ತಿಳಿಸಿದರು. ಇವತ್ತು ಅದರ ಪುನರ್ ಉದ್ಘಾಟನೆ ಆಗಿದೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡಬೇಕು ಎಂದು ಆಶಿಸಿದರು.
ನುಡಿದಂತೆ ನಡೆಯುವ ನಾಯಕತ್ವ ಮೋದಿಜೀ ಅವರದು. 2047ರವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡಲು ಸಹಕರಿಸಬೇಕಿದೆ. ನನಗೆ ನನ್ನ ಭವಿಷ್ಯಕ್ಕಿಂತ ನನ್ನ ದೇಶ, ಜಿಲ್ಲೆ, ರಾಜ್ಯ ಪ್ರಮುಖ. ಬಿಜೆಪಿ ಸೇರುವುದು ಅತ್ಯಂತ ಹೆಮ್ಮೆ- ಸಂಸಸ ತಂದಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.