ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಕೊಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ, ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳನ್ನು ಸಮರ್ಪಕವಾಗಿ ಕೊಡುವುದರಲ್ಲಿ ವಿಫಲವಾಗಿದೆ. ನುಡಿದಂತೆ ನಡೆದಿಲ್ಲ; ನಡೆದಂತೆ ನುಡಿಯುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಇದ್ದು, ಬೆಂಗಳೂರಿನಲ್ಲಿ ಟ್ಯಾಂಕರ್ ಗಳ ದೊಡ್ಡ ಮಾಫಿಯಾ ಇದೆ. ಸರಕಾರ ನಿಗದಿಪಡಿಸಿದ ದರಕ್ಕೆ ಟ್ಯಾಂಕರ್ ನೀರು ಪೂರೈಕೆ ಆಗುತ್ತಿಲ್ಲ. ಟ್ಯಾಂಕರ್ ಮಾಲೀಕರು ಸರಕಾರದ ಮಾತನ್ನು ಕೇಳುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು. ಇದಕ್ಕೆ ಪರಿಹಾರವನ್ನು ಸರಕಾರ ಒದಗಿಸಿಲ್ಲ ಎಂದು ಟೀಕಿಸಿದರು.
ಸರಕಾರ ನೀಡುವ ಪರಿಹಾರಧನಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ರಾಜ್ಯದ ಸಚಿವರು ಉಲ್ಲೇಖಿಸುತ್ತಾರೆ. ಇದು ರೈತವಿರೋಧಿ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಎಂದು ಅವರು ನುಡಿದರು. ಬಿಜೆಪಿ ಮಾಡಿದ ಮತ್ತು ಕೇಂದ್ರದ ನರೇಂದ್ರ ಮೋದಿಜೀ ಅವರ ಸರಕಾರ ಮಾಡಿದ ಕೆಲಸಗಳನ್ನು ತಾವು ಮಾಡಿದ್ದಾಗಿ ತಿಳಿಸಿ ಕಾಂಗ್ರೆಸ್ ಪ್ರಚಾರ ಗಿಟ್ಟಿಸುತ್ತಿದೆ ಎಂದು ದೂರಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 4 ಲಕ್ಷಕ್ಕೂ ಹೆಚ್ಚು ಮನೆಗಳನ್ನು ವಿತರಿಸಿದ್ದಾಗಿ ಈಚೆಗೆ ದೊಡ್ಡ ಕಾರ್ಯಕ್ರಮ ಮಾಡಿ ತಿಳಿಸಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಿರ್ಮಿಸಿ ಕೊಟ್ಟ ಮನೆಗಳನ್ನು ತಾವು ಕೊಟ್ಟಿದ್ದಾಗಿ ಡಂಗೂರ ಸಾರುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಸರಕಾರವು ಗ್ಯಾರಂಟಿಗಳನ್ನು ಸರಿಯಾಗಿ ನಿರ್ವಹಿಸದೆ ಚೂರುಪಾರು ಗ್ಯಾರಂಟಿಗಳನ್ನು ಕೊಟ್ಟಿದ್ದಲ್ಲದೆ ಬೇರೆ ಯಾವ ಕೆಲಸವನ್ನೂ ಈ ಸರಕಾರ ಮಾಡಿಲ್ಲ; ದಬ್ಬಾಳಿಕೆಯ ಮೂಲಕ ಅದು ಕೆಲಸ ಮಾಡುತ್ತಿದೆ. ಅಂಗನವಾಡಿ, ಆಶಾ ಕಾರ್ಯಕರ್ತರನ್ನು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸುವ ದೊಡ್ಡ ಷಡ್ಯಂತ್ರವನ್ನು ಈ ಸರಕಾರ ಮಾಡಿದೆ ಎಂದು ತಿಳಿಸಿದರು. ಕೇಂದ್ರ ಸರಕಾರದ ಸೋಲಾರ್ ರೂಫ್ ಯೋಜನೆಗೆ ರಾಜ್ಯ ಸರಕಾರ ಒಂದೇ ಒಂದು ಪೈಸೆ ನೀಡದೇ ಇದ್ದರೂ ಕೂಡ ಆ ಯೋಜನೆಯನ್ನು ತಾವು ಮಾಡಿದ್ದಾಗಿ ಕರಪತ್ರ ಹಂಚುತ್ತಿದ್ದಾರೆ ಎಂದು ಟೀಕಿಸಿದರು.
ಇವರು ಒಂದೇ ಒಂದು ಜನಪರ ಕೆಲಸ ಮಾಡಿಲ್ಲ. ಬರಿಯ ಸುಳ್ಳು ಹೇಳುತ್ತ, ಸುಳ್ಳೇ ಬಂಡವಾಳ ಮಾಡಿಕೊಂಡು, ನರೇಂದ್ರ ಮೋದಿಯವರು ಮಾಡಿದ, ಬಿಜೆಪಿ ಸರಕಾರ ಮಾಡಿದ್ದ ಕೆಲಸಗಳÀನ್ನು ತಾವು ಮಾಡಿದ್ದಾಗಿ ಡಂಗೂರ ಸಾರುವ ಸುಳ್ಳು ಬೊಗಳೆ ಸರಕಾರ ರಾಜ್ಯದಲ್ಲಿದೆ ಎಂದು ದೂರಿದರು.
ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ, ವೆಂಕಟೇಶ ದೊಡ್ಡೇರಿ, ಡಾ.ನರೇಂದ್ರ ರಂಗಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.