ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಮಾತ್ರವಲ್ಲ ಇಡೀ ಸರಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ- ನೆಮ್ಮದಿಯ ಭರವಸೆ ಲಭಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸರಕಾರ ಎಚ್ಚತ್ತುಕೊಳ್ಳಲು ಇನ್ನೆಷ್ಟು ಬಾಂಬ್ ಬ್ಲಾಸ್ಟ್ ಆಗಬೇಕು? ಈ ಸರಕಾರ ಯಾಕೆ ಕಣ್ಮುಚ್ಚಿ ಕುಳಿತಿದೆ? ಯಾರನ್ನು ಓಲೈಸುತ್ತಿದೆ? ಎಫ್ಎಸ್ಎಲ್ ವರದಿ ಬಿಡುಗಡೆ ಮಾಡದೆ ಇರಲು ಸರಕಾರದ ಮೇಲೆ ಸೋನಿಯಾ ಗಾಂಧಿ- ರಾಹುಲ್ ಗಾಂಧಿಯವರ ಒತ್ತಡ ಇದೆಯೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮನಸ್ಸನ್ನು ಪೂರ್ತಿ ಕಲ್ಮಶ ಮಾಡುವ ಕಡೆಗೆ ಹೋಗುತ್ತಿದೆ ಎಂದು ಆರೋಪಿಸಿದರು. ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧ ರಾಜ್ಯದ ಹೃದಯವಿದ್ದಂತೆ. ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಅಕ್ಷಮ್ಯ ಎಂದು ತಿಳಿಸಿದರು.
ಅಲ್ಪಸಂಖ್ಯಾತರು ತಮಗೆ ಮತ ಹಾಕಿದರೆ ಸಾಕು; ಬಹುಸಂಖ್ಯಾತರನ್ನು ಬಗ್ಗು ಬಡಿಯುತ್ತೇವೆ ಎಂಬ ನೀತಿ ಕಾಂಗ್ರೆಸ್ ಪಕ್ಷದ್ದು ಎಂದು ಅವರು ತಿಳಿಸಿದರು. ನೀವೇನಾದರೂ ಮಾಡಿ; ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಭೆ ಮಾಡಿ. ಮೈಸೂರಿನಲ್ಲಿ ಅವರ ಶಾಸಕರ ಹತ್ಯೆ ಪ್ರಯತ್ನ ಮಾಡಿದರೂ ಏನೂ ಮಾಡುವುದಿಲ್ಲ ಎಂಬ ಕರ್ನಾಟಕದ ಕಾಂಗ್ರೆಸ್ ಮನಸ್ಥಿತಿ ಗಂಡಾಂತರ ತರುವಂತಿದೆ ಎಂದು ಆಕ್ಷೇಪ ಸೂಚಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರೆಂಬ ಇಲಿಗಳು ಬಿಲಕ್ಕೆ ಬಂದು ಹುಲಿಗಳಾಗಿವೆ. ನಮ್ಮನ್ನೇನೂ ಮಾಡುವುದಿಲ್ಲ ಎಂಬ ಮನಸ್ಥಿತಿ ಭಯೋತ್ಪಾದಕರದ್ದಾಗಿದೆ. ಇದು ದೊಡ್ಡ ಆಘಾತ ತಂದಿದೆ ಎಂದು ವಿವರಿಸಿದರು. ಸರಕಾರವು ಅವರ ಬಗ್ಗೆ ಸಹಾನುಭೂತಿ ತೋರುವುದು ಆಘಾತಕಾರಿ ವಿಚಾರ ಎಂದು ತಿಳಿಸಿದರು.
ರಾಜ್ಯ ಸರಕಾರವು ಕೋಮುವಾದದ ಕಡೆ ವಾಲುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರದಿಂದ ಅಲ್ಪಸಂಖ್ಯಾತರ ಓಲೈಕೆಯ ಪ್ರವೃತ್ತಿ ಮುಂದುವರೆದಿದೆ. ಅಲ್ಪಸಂಖ್ಯಾತರ ಬಗ್ಗೆ ಬರುವ ವಿಷಯಗಳನ್ನು ಕಾಂಗ್ರೆಸ್ಸಿಗರು ನಿರಂತರವಾಗಿ ಮುಚ್ಚಿಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಬಾಂಬ್ ಸ್ಫೋಟದ ಆರೋಪಿಗಳನ್ನು ಅಮಾಯಕರು, ಮೈ ಬ್ರದರ್ಸ್ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಟೀಕಿಸಿದರು. ವಿಧಾನಸೌಧದಲ್ಲಿ ಕೆಲದಿನಗಳ ಹಿಂದೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ‘ಆ ರೀತಿ ಹೇಳಿಲ್ಲ; ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ‘ಫಾರೆನ್ಸಿಕ್ ವರದಿಯಲ್ಲಿ ಹಾಗೆ ಆಗಿಲ್ಲ ಎಂದು ಬರಲಿದೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಾಧ್ಯಮಗಳು ‘ಘೋಷಣೆ ಕೂಗಿದ್ದು ನಿಜ’ ಎಂದು ಪ್ರಕಟಿಸಿದರೂ ಕಾಂಗ್ರೆಸ್ನವರು ಅದನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಆಗಿದೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹೋಗಿ, ‘ಇದು ಬಿಸಿನೆಸ್ ರೈವಲ್ರಿ; ತಿಂಡಿ ವಿಚಾರದಲ್ಲಿ ಒಳಜಗಳ’ ಎಂದಿದ್ದರು. ಈಗ ಅದು ಭಯೋತ್ಪಾದಕರ ಕೃತ್ಯ ಎಂದು ಗೊತ್ತಾಗಿದೆ. ಆದರೂ ಅದನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.