ಬೆಂಗಳೂರು: ಪಿಂಕ್ ಪಿಂಕ್ ಆಗಿ ಎಲ್ಲರನ್ನೂ ಆಕರ್ಷಿಸುವ ಕಾಟನ್ ಕ್ಯಾಂಡಿ ಅಥವಾ ಬಾಂಬೆ ಮಿಠಾಯಿ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಸಿಹಿ ತಿಂಡಿಯಲ್ಲಿ ಕ್ಯಾನ್ಸರ್ ಉಂಟುಮಾಡುವ ರೋಡಮೈನ್-ಬಿ ಎಂಬ ಬಣ್ಣ ಪತ್ತೆಯಾಗಿದೆ ಎಂಬ ಕಾರಣಕ್ಕೆ ಈಗಾಗಲೇ ಇದನ್ನು ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳು ಬ್ಯಾನ್ ಮಾಡಿವೆ. ಈ ಎರಡು ರಾಜ್ಯಗಳಲ್ಲಿ ಕಾಟನ್ ಕ್ಯಾಂಡಿ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣವಾಗಿ ರದ್ದುಗೊಂಡಿದೆ.
ಕಾರ್ಸಿನೋಜೆನ್ ಆಗಿರುವ ರೋಡಮೈನ್-ಬಿ ಇರುವಿಕೆಯು ಕಾಟನ್ ಕ್ಯಾಂಡಿಯನ್ನು ತಿನ್ನುವವರಿಗೆ ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕದ ಅಧಿಕಾರಿಗಳು ರಾಜ್ಯದಲ್ಲಿ ಮಾರಾಟವಾಗುತ್ತಿರುವ ಕಾಟನ್ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ.
ಜಾತ್ರೆ, ಜನನಿಬಿಡ ಪ್ರದೇಶದಲ್ಲಿ ಹೆಚ್ಚಾಗಿ ಮಾರಲ್ಪಡುವ ಈ ಸಿಹಿ ತಿಂಡಿ ಬಾಯಿ ಇಟ್ಟ ತಕ್ಷಣ ಕರಗುತ್ತದೆ ಮತ್ತು ಇದರ ಬಣ್ಣ ಕೂಡ ಆಕರ್ಷಣೀಯವಾಗಿರುತ್ತದೆ. ಹೀಗಾಗಿ ಸಹಜವಾಗಿಯೇ ಮಕ್ಕಳು ಇದನ್ನು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ.
ಈಗಾಗಲೇ ಕಾಟನ್ ಕ್ಯಾಂಡಿ ಮಾದರಿಗಳ ಸಂಗ್ರಹವನ್ನು ಪ್ರಾರಂಭಿಸಲಾಗಿದೆ ಮತ್ತು ನಾವು ಇದನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ಫಲಿತಾಂಶ ಆಧರಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಆಹಾರ ಸುರಕ್ಷತಾ ಆಯುಕ್ತರು ಡಿ ರಂದೀಪ್ ತಿಳಿಸಿದ್ದಾರೆ.
ರೋಡಮೈನ್-ಬಿ ಎಂಬುದು ಜವಳಿ ಬಣ್ಣ. ಬಟ್ಟೆಗಳ ತಯಾರಿಕೆಗೆ ಇದನ್ನು ಬಳಸುತ್ತಾರೆ. ಆದರೆ ಇದು ಕ್ಯಾನ್ಸರ್ ಕಾರಕ. ಕಾಟನ್ ಕ್ಯಾಂಡಿಗೆ ಮಾತ್ರವಲ್ಲದೆ ಜೆಲ್ಲಿಗಳು ಮತ್ತು ಮಿಠಾಯಿಗಳಿಗೆ ಕಲರ್ಫುಲ್ ಬಣ್ಣಗಳನ್ನು ನೀಡಲು ಇದನ್ನು ಸೇರಿಸಲಾಗುತ್ತದೆ. ಕೆಲವೊಮ್ಮೆ ಮೆಣಸಿನ ಪುಡಿಗೂ ಇದನ್ನು ಬೆರೆಸಲಾಗುತ್ತದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.