ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಅಧಿಕಾರಿಗಳ ಸರಕಾರವಾಗಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಕ್ಷೇಪಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಮನ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರವು ನಿಷ್ಕ್ರಿಯವಾಗಿದ್ದು, ಕಾರ್ಯಾಂಗವನ್ನು ಅಧಿಕಾರಿಗಳೇ ಮುನ್ನಡೆಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಕನ್ನಡದ ಅಸ್ಮಿತೆ ಎನಿಸಿದ ನಾಡಗೀತೆ ಹಾಡುವಂತಿಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದನ್ನು ಖಂಡಿಸಿದರು.
ಸಿದ್ದರಾಮಯ್ಯನವರ ಮಾತು ಮತ್ತು ಕೃತಿಗೆ ಸಂಬಂಧವಿಲ್ಲ ಎಂದು ಬಹಳ ಸ್ಪಷ್ಟವಾಗಿದೆ. ನಾಡಗೀತೆ, ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗುತ್ತಿದೆ. ಜ್ಞಾನದೇಗುಲ ವಿಚಾರದಲ್ಲೂ ಇಂಥದ್ದೇ ಆದೇಶ ಮಾಡಲಾಗಿತ್ತು. ಮಣಿವಣ್ಣನ್ ಆತ್ಮಸಾಕ್ಷಿ ಇಲ್ಲದ ಅಧಿಕಾರಿ; ವಿಷಯ ತಿಳಿದೂ ಇಂಥ ಆಜ್ಞೆ ಮಾಡಿದ್ದಾರೆ ಎಂದು ಟೀಕಿಸಿದರು. ಸರಕಾರಕ್ಕೆ ಬದ್ಧತೆ ಇದ್ದರೆ, ಸದೃಢ ಸರಕಾರವಾಗಿದ್ದರೆ ಮಣಿವಣ್ಣನ್ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅವರು ಆಗ್ರಹಿಸಿದರು.
ಪರಿಣಾಮಕಾರಿ, ಜನಪರ ಸರಕಾರ ಇದಾಗಿದ್ದರೆ ಮಣಿವಣ್ಣನ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ ಅವರು, ಸರಕಾರ ಬದುಕಿದೆ ಎಂದು ಗೊತ್ತಾಗಬೇಕಿದ್ದರೆ ಸಿದ್ದರಾಮಯ್ಯನವರು ಈ ಅಧಿಕಾರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಇದು ಯಡವಟ್ಟು ಗಿರಾಕಿ ಸರಕಾರ. ಯಡವಟ್ಟನ್ನು ಮಾಡುತ್ತಲೇ ಇದ್ದಾರೆ. ಇವತ್ತು ಮತ್ತೊಮ್ಮೆ ನಾಡಗೀತೆ ವಿಚಾರದಲ್ಲಿ ಎರಡನೇ ತಪ್ಪು ಮಾಡಿದ್ದಾರೆ. ಈ ತಪ್ಪಿನಿಂದ ಹೊರಕ್ಕೆ ಬರಲಿ ಎಂದು ಅವರು ತಿಳಿಸಿದರು.
ಮೂರನೆಯದು ಕೇರಳ. ಯಾರದೋ ದುಡ್ಡು. ನೀವಂತೂ ನಿಮ್ಮ ಜೀವಮಾನದಲ್ಲಿ ಯಾವತ್ತೂ ತೆರಿಗೆ ಕಟ್ಟಿಲ್ಲ. ತೆರಿಗೆದಾರರ ದುಡ್ಡಿನಲ್ಲಿ ನಿಮಗೆ ಅನುಕೂಲಗಳು ಸಿಕ್ಕಿವೆ. ನಮ್ಮ ರಾಜ್ಯದಲ್ಲಿ ಕೊಡಬೇಕಾದ ಪರಿಹಾರವನ್ನು ಪಕ್ಕದ ರಾಜ್ಯದ ವಯನಾಡಿನಲ್ಲಿ ಕೊಡಲು ಏನಿದೆ? ಇದಕ್ಕೆ ಯಾವ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ವಯನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾಗಿ ಮೃತರಿಗೆ ಇಲ್ಲಿಂದ ಪರಿಹಾರ ಕೊಡಬೇಕಿದ್ದರೆ ಕಾಂಗ್ರೆಸ್ ಪಕ್ಷ ಬಡವಾಗಿದೆಯೇ? ಕಾಂಗ್ರೆಸ್ ಪಕ್ಷದಲ್ಲಿರುವ ನೀವು, ನಿಮ್ಮ ಅಭಿಮಾನಿಗಳು, ಹಿತೈಷಿಗಳು ಹಾಕಿದ ಹಣ ಬಳಸಿ ಕೊಟ್ಟಿದ್ದರೆ ಮೆಚ್ಚಬಹುದಿತ್ತು ಎಂದು ವ್ಯಂಗ್ಯವಾಗಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.