ನವದೆಹಲಿ: ಲೋಕಸಭೆಯು ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣ ಮತ್ತು ಶ್ರೀ ರಾಮಲಲಾನ ಪ್ರಾಣ ಪ್ರತಿಷ್ಠೆಯ ಚರ್ಚೆಯನ್ನು ಇಂದು ಕೈಗೆತ್ತಿಕೊಂಡಿದೆ.
ಚರ್ಚೆಯನ್ನು ಆರಂಭಿಸಿದ ಬಿಜೆಪಿ ಸಂಸದ ಡಾ.ಸತ್ಯಪಾಲ್ ಸಿಂಗ್ ಅವರು ಮಾತನಾಡಿ, ಅಯೋಧ್ಯೆಯಲ್ಲಿ ಕಳೆದ ತಿಂಗಳು 22ರಂದು ನಡೆದ ಶ್ರೀರಾಮಲಲಾನ ಪ್ರಾಣ ಪ್ರತಿಷ್ಠೆ ಐತಿಹಾಸಿಕ ಘಟನೆ. ಶ್ರೀರಾಮನು ಎಲ್ಲ ಜನರಿಗಾಗಿ ಮತ್ತು ಎಲ್ಲರಿಗೂ ಸ್ಫೂರ್ತಿಯ ಮೂಲವಾಗಿದ್ದಾನೆ. ರಾಮ ಎಲ್ಲರ ಭಾವನೆ ಮತ್ತು ಅವನೊಬ್ಬ ಸಂಸ್ಕೃತಿ ಎಂದು ಹೇಳಿದರು.
ಕಾಂಗ್ರೆಸ್ ರಾಮನನ್ನು ಕಡೆಗಣಿಸಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ನ ಇಂದಿನ ಸ್ಥಿತಿಗೆ ಅದುವೇ ಕಾರಣವಾಗಿದೆ. ರಾಮಮಂದಿರವು ದೇಶದ ಕೋಟ್ಯಂತರ ಜನರ ನಂಬಿಕೆಯ ಸಾಕಾರವಾಗಿದೆ ಎಂದರು.
ಬಳಿಕ ಮಾತನಾಡಿದ ಕಾಂಗ್ರೆಸ್ನ ಗೌರವ್ ಗೊಗೊಯ್ ಅವರು, . ಮಾನವೀಯತೆಯೇ ಈ ದೇಶದ ಜನರ ದೊಡ್ಡ ಗುರುತಾಗಿದೆ. ರಾಮರಾಜ್ಯದ ಕಲ್ಪನೆಯು ಎಲ್ಲರ ಕಲ್ಯಾಣದ ಬಗ್ಗೆ ಮಾತನಾಡುವುದರಿಂದ ದೇಶದ ಹಿಂದುಳಿದವರು, ವಂಚಿತರು ಮತ್ತು ಅಲ್ಪಸಂಖ್ಯಾತರು ಪ್ರಸ್ತುತ ಸಂತೋಷವಾಗಿದ್ದಾರೆಯೇ ಎಂದು ಯೋಚಿಸಬೇಕಾಗಿದೆ. ಇಂದು ಎಸ್ಸಿ ಮತ್ತು ಎಸ್ಟಿ ಮೇಲಿನ ದೌರ್ಜನ್ಯಗಳು ಹಲವು ಪಟ್ಟು ಹೆಚ್ಚಿವೆ. ದ್ವೇಷ ಸಾಧಿಸಿದರೆ ರಾಮನ ನಿಜವಾದ ಭಕ್ತನಾಗಲು ಸಾಧ್ಯವಿಲ್ಲ. ಬಿಜೆಪಿಯವರಿಗೆ ಸಂವಿಧಾನವೇ ಮರೆತು ಹೋಗುವಷ್ಟು ದ್ವೇಷವಿದೆ ಎಂದು ಆರೋಪಿಸಿದರು.
ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು, ರಾಮ ಮಂದಿರ ನಿರ್ಮಾಣದ ಆಂದೋಲನದ ಭಾಗವಾಗಿರುವುದು ನನ್ನ ಅದೃಷ್ಟ ಎಂದು ಹೇಳಿದರು. ಗೌರವ್ ಗೊಗೊಯ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ಪೊಲೀಸ್ ಫೈರಿಂಗ್ನಲ್ಲಿ ಪ್ರಾಣ ಕಳೆದುಕೊಂಡ ಕರಸೇವಕರ ಬಗ್ಗೆಯೂ ಅವರು ಮಾತನಾಡಬೇಕಿತ್ತು ಎಂದರು.
ಸೀತಾಮಾತೆಯ ಜನ್ಮಸ್ಥಳ ಎಂದು ನಂಬಲಾದ ಸೀತಾಮರ್ಹಿಯಲ್ಲಿ ಭವ್ಯವಾದ ದೇವಾಲಯವನ್ನು ನಿರ್ಮಿಸಬೇಕು ಎಂದು ಜೆಡಿಯುನ ರಾಮ್ಪ್ರೀತ್ ಮಂಡಲ್ ಒತ್ತಾಯಿಸಿದರು.
ಬಿಜೆಪಿಯ ಪ್ರತಾಪಚಂದ್ರ ಸಾರಂಗಿ ಮಾತನಾಡಿ, ಜಾತಿ, ಮತ, ಧರ್ಮದ ಭೇದವಿಲ್ಲದೆ ಶ್ರೀರಾಮನು ದೇಶವನ್ನು ಒಗ್ಗೂಡಿಸಬಲ್ಲ ಎಂದರು.
ಶಿವಸೇನೆಯ ಡಾ.ಶ್ರೀಕಾಂತ್ ಏಕನಾಥ್ ಶಿಂಧೆ ಮಾತನಾಡಿ, ಸ್ವಾತಂತ್ರ್ಯದ ನಂತರ ರಾಮ ಮಂದಿರ ನಿರ್ಮಾಣವಾಗಬೇಕಿತ್ತು, ಚಾಲ್ತಿಯಲ್ಲಿರುವ ವಸಾಹತುಶಾಹಿ ಮನಸ್ಥಿತಿಯಿಂದಾಗಿ ಹಲವಾರು ದಶಕಗಳೇ ಬೇಕಾಯಿತು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.