ಬೆಂಗಳೂರು: ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರು ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು, ತಮ್ಮ ವೈಫಲ್ಯ ಮರೆ ಮಾಚುವುದಕ್ಕಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 14 ಸಾರಿ ಬಜೆಟ್ ಮಂಡಿಸಿದ್ದಾಗಿ ಹೇಳುವ ಸಿದ್ದರಾಮಯ್ಯನವರ ಬಜೆಟ್, ಫಿಸ್ಕಲ್ ರೆನ್ಸಾನ್ಸಿಬಿಲಿಟಿ ಆ್ಯಕ್ಟ್ ಅನ್ನು ಉಲ್ಲಂಘಿಸಿದೆ. ಇದಕ್ಕಾಗಿ ಇಲ್ಲಿನವರೆಗೆ ಅವರು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ; ಸ್ಪಷ್ಟೀಕರಣವನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು.
12,522 ಕೋಟಿ ಮೊತ್ತದ ಕೊರತೆ ಬಜೆಟ್ ಮಂಡಿಸಿದ್ದರು. ಬಜೆಟ್ ಕಂಡಿಕೆ 369ರಲ್ಲಿ 2023-24ರಲ್ಲಿ ರಾಜಸ್ವ ಜಮೆ 2,38,410 ಕೋಟಿ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಇಲ್ಲಿನವರೆಗೆ ಎಷ್ಟು ಸಂಗ್ರಹಿಸಿದ್ದಾರೆ? ಎಂದು ಕೇಳಿದರಲ್ಲದೆ, ಡಿಸೆಂಬರ್ ಅಂತ್ಯಕ್ಕೆ 1,61,477 ಕೋಟಿ ಸಂಗ್ರಹಿಸಿದ್ದಾರೆ. ಬಜೆಟ್ ನಿಗದಿತ ಗುರಿಯ ಕೇವಲ ಶೇ 67ರಷ್ಟನ್ನು ಮಾತ್ರ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಹಣಕಾಸು ಇಲಾಖೆಯ ಪ್ರತಿಗಳನ್ನೂ ಅವರು ನೀಡಿದರು.
ಕಳೆದ ವರ್ಷ ಇದೇ ಅವಧಿಗೆ ಬಜೆಟ್ನ ಗುರಿಗೆ ಶೇ 82ರಷ್ಟು ತೆರಿಗೆ ಸಂಗ್ರಹವಾಗಿತ್ತು. ಇವರು ಈಗ ಶೇ 15ರಷ್ಟು ಹಿಂದೆ ಇದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೂ ಕೇಂದ್ರ ಸರಕಾರಕ್ಕೂ ಏನು ಸಂಬಂಧ, ಇದಕ್ಕೂ ಮೋದಿಯವರಿಗೆ ಏನು ಸಂಬಂಧ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಸರಕಾರದಲ್ಲಿ ಈಗ ಸರಕಾರಿ ಅಧಿಕಾರಿಗಳಿಗೆ ಸಂಬಳ ನೀಡಲು ಖಜಾನೆಯಲ್ಲಿ ದುಡ್ಡಿಲ್ಲ. ತಮ್ಮ ತಪ್ಪನ್ನು ಮರೆಮಾಚಲಿಕ್ಕಾಗಿ ಈ ರೀತಿ ಮಾತನಾಡುತ್ತಾರೆ. ಹಾಲಿನ ಪ್ರೋತ್ಸಾಹಧನ ಕೊಟ್ಟಿಲ್ಲ. ಯಡಿಯೂರಪ್ಪ ಅವರ ಈ ಕ್ರಮದಿಂದ ಹಾಲಿನ ಉತ್ಪಾದನೆ 85 ಲಕ್ಷ ಲೀಟರ್ಗೆ ಏರಿತ್ತು. ಸಿದ್ದರಾಮಯ್ಯನವರ ಸರಕಾರ ಜುಲೈನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹಾಲಿನ ಪ್ರೋತ್ಸಾಹಧನ ಕೊಟ್ಟಿಲ್ಲ. ಇದಕ್ಕೂ ಕೇಂದ್ರ ಸರಕಾರಕ್ಕೆ ಏನು ಹೊಂದಾಣಿಕೆ ಎಂದು ಕೇಳಿದರು. ಹಾಲು ಉತ್ಪಾದಕರಿಗೆ 617 ಕೋಟಿ ರೂ. ಬಿಡುಗಡೆ ಮಾಡಬೇಕಿದೆ ಎಂದು ತಿಳಿಸಿದರು. ಸಿದ್ದರಾಮಯ್ಯನವರೇ, ನೀವು ಬಜೆಟ್ನಲ್ಲಿ ಘೋಷಿಸಿದಂತೆ ಯಾಕೆ ಹಣ ಸಂಗ್ರಹಿಸಲು ಆಗಿಲ್ಲ? ಎಂದು ಪ್ರಶ್ನಿಸಿದರು.
ಎರಡನೆಯದಾಗಿ ಸಿದ್ದರಾಮಯ್ಯನವರು ಅದೇ ಬಜೆಟ್ನಲ್ಲಿ ಕೇಂದ್ರ ಸರಕಾರದಿಂದ ತಮಗೆ ಎಷ್ಟು ಬರಬೇಕೆಂದು ಹೇಳಿಕೊಂಡಿದ್ದಾರೆ. ಕೇಂದ್ರದ ತೆರಿಗೆ ಪಾಲಿನ ರೂಪದಲ್ಲಿ 37,252 ಕೋಟಿ ಮತ್ತು ಕೇಂದ್ರ ಸಹಾಯಧನದ ರೂಪದಲ್ಲಿ 13,005 ಕೋಟಿ ಬರಬೇಕಿದೆ ಎಂದಿದ್ದಾರೆ. ಸಿದ್ದರಾಮಯ್ಯನವರು ಸದನದಲ್ಲಿ ಬಳಸುವ ಅಂಕಿಅಂಶವೇ ಬೇರೆ, ಅಲ್ಲಿ ತಪ್ಪು ಮಾಹಿತಿ ಕೊಟ್ಟರೆ ಸದನಕ್ಕೆ ತಪ್ಪು ಮಾಹಿತಿ ಕೊಟ್ಟ ಹಾಗಾಗುತ್ತದೆ. ನೀವು ನಿಮ್ಮ ಬಜೆಟ್ ಗುರಿ ಮುಟ್ಟಬೇಕಲ್ಲವೇ ಎಂದು ಕೇಳಿದರು.
85,818 ಕೋಟಿ ಸಾಲದ ಕುರಿತು ಬಜೆಟ್ ವೇಳೆ ಸಿದ್ದರಾಮಯ್ಯನವರು ತಿಳಿಸಿದ್ದರು. ಆದರೆ, ಈ ಸಾರಿ ಒಂದು ಲಕ್ಷ ಕೋಟಿಗಿಂತ ಹೆಚ್ಚು ಸಾಲ ಮಾಡುವ ಅನಿವಾರ್ಯತೆ ಇದೆ ಎಂದು ಬಜೆಟ್ ಮಂಡಿಸುವ ದಿನವೇ ಸಿದ್ದರಾಮಯ್ಯನವರಿಗೆ ಖಾತ್ರಿ ಇತ್ತು. 2.38 ಲಕ್ಷ ಕೋಟಿ ಸಂಗ್ರಹಿಸುವುದಾಗಿ ಹೇಳಿದಾಗಲೇ ಅವರಿಗೆ ಅಷ್ಟು ಸಾಮಥ್ರ್ಯ ಇಲ್ಲ ಎಂದು ಗೊತ್ತಿತ್ತು ಎಂದು ತಿಳಿಸಿದರು. ಹೆಚ್ಚು ಸಾಲದ ಅಪಕೀರ್ತಿಗೆ ಗುರಿ ಆಗಬಾರದು ಎಂದು ಕಡಿಮೆ ಸಾಲವನ್ನು ತೋರಿಸಿದ್ದರು ಎಂದು ಹೇಳಿದರು.
ಸಾಲ ಇಲ್ಲದೇ ಈ ಸರಕಾರ ನಡೆಸಲು ಸಾಧ್ಯವೇ ಇಲ್ಲ ಎಂಬ ಅನಿವಾರ್ಯ ಸ್ಥಿತಿಗೆ ಸಿದ್ದರಾಮಯ್ಯನವರು ತಲುಪಿದ್ದಾರೆ. ಜನರ ಮೇಲೆ ಆರೋಪಕ್ಕೆ ಗುರಿ ಆಗಬಾರದೆಂದು ಕೇಂದ್ರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
4 ಲಕ್ಷ ಕೋಟಿ ಬರಬೇಕು. ಇಷ್ಟು ಸಂಗ್ರಹ ಆಗಲಿದೆ; 15ನೇ ಹಣಕಾಸು ಆಯೋಗದಿಂದ ನಮಗೆ ಅನ್ಯಾಯ ಆಗಿದೆ ಎನ್ನುವ ಸಿದ್ದರಾಮಯ್ಯನವರು ಇದನ್ನು ಯಾರ ಮುಂದೆ ಹೇಳುತ್ತಿದ್ದಾರೆ? ಎಂದು ಕೇಳಿದರು. ನಾವು ಒಕ್ಕೂಟ ವ್ಯವಸ್ಥೆಯಡಿ ಇದ್ದೇವೆ. ಇದೇ ಮಾತನ್ನು ಸದನದಲ್ಲಿ ಹೇಳಿದರೆ ಸಂವಿಧಾನದ ವಿರೋಧಿ ಆಗಿ ಪ್ರಿವಿಲೆಜ್ ಮೂವ್ ಆಗುತ್ತದೆ. 15ನೇ ಹಣಕಾಸು ಆಯೋಗವನ್ನು ಒಪ್ಪಿಕೊಂಡಾಗಿದೆ. ಹಣಕಾಸು ಹಂಚಿಕೆ ಸಂಬಂಧ ಆಯೋಗದ ಮಾರ್ಗಸೂಚಿಯನ್ನು ನೀವೇ ಒಪ್ಪಿಕೊಂಡ ಮೇಲೆ ಬಜೆಟ್ ಮಂಡಿಸಿದ್ದೀರಿ. ಈಗ 15ನೇ ಹಣಕಾಸು ಆಯೋಗದ ಕುರಿತು ಆರೋಪ ಮಾಡುವುದು ಸರಿಯೇ ಎಂದು ಕೇಳಿದರು.
ಟ್ರೈನ್ ಹೋದ ಮೇಲೆ ಟಿಕೆಟ್ಗಾಗಿ ಸಿದ್ದರಾಮಯ್ಯನವರು ಬೇಡಿಕೆ ಮಂಡಿಸುತ್ತಿದ್ದಾರೆ. 15ನೇ ಹಣಕಾಸು ಆಯೋಗದವರು ಕರ್ನಾಟಕಕ್ಕೆ ಬಂದಿದ್ದರು. ಆಗ ನೀವೇ ಮುಖ್ಯಮಂತ್ರಿಗಳಾಗಿ ಇದ್ದಿರಿ. ಆಗ ಯಾಕೆ ಬೇಡಿಕೆ ಮಂಡಿಸಲಿಲ್ಲ ಎಂದು ಪಿ.ರಾಜೀವ್ ಅವರು ಪ್ರಶ್ನೆಯನ್ನು ಮುಂದಿಟ್ಟರು.
ನಿಮಗೇನಾದರೂ ಅನ್ಯಾಯ ಆಗುವುದಿದ್ದರೆ ಆಗಲೇ ಆ ಆಯೋಗದ ಮುಂದೆ ನೀವು ಅದನ್ನು ಮಂಡಿಸಬೇಕಿತ್ತು. ಆಗ ಸಿಎಂ ಆಗಿ ಗಪ್ಚುಪ್ ಆಗಿ ನೀವು ಕೂತವರು. ಇವತ್ತು ಸಂಸತ್ತಿನಲ್ಲಿ ಹಣಕಾಸು ಮಸೂದೆ ಅನುಮತಿ ಪಡೆದ ಬಳಿಕ, 15ನೇ ಹಣಕಾಸು ಆಯೋಗವನ್ನು ಒಪ್ಪಿಕೊಂಡ ನಂತರ ಈಗ ಆರೋಪ ಮಾಡುತ್ತಿದ್ದೀರಿ? ಇದು ಸಂವಿಧಾನ ವಿರೋಧಿ ಅಲ್ಲವೇ ಎಂದು ಕೇಳಿದರು.
ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷೆ ಮಾಲವಿಕಾ, ರಾಜ್ಯ ವಕ್ತಾರರಾದ ಸುರಭಿ ಅವರು ಈ ಸಂದರ್ಭದಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.