ಬೆಂಗಳೂರು: ವಿದ್ಯಾರ್ಥಿ ಹಿತಕ್ಕೆ ಧಕ್ಕೆ ತರುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 3ನೇ ರಾಷ್ಟ್ರೀಯ ಶಿಕ್ಷಣ ನೀತಿ ಇದಾಗಿದ್ದು, ಶಿಕ್ಷಣ ಗುಣಮಟ್ಟ ಹೆಚ್ಚಳ, ಅದರಲ್ಲಿರುವ ನ್ಯೂನತೆಗಳನ್ನು ಹೋಗಲಾಡಿಸಲು ಪೂರಕ. ಸಾಕಷ್ಟು ಪೂರ್ವತಯಾರಿ ಮಾಡಿ, 6 ವರ್ಷಕ್ಕಿಂತ ಹೆಚ್ಚು ಸಮಯ ಸಮಾಲೋಚನೆ ಬಳಿಕ ಜಾರಿಗೊಳಿಸಲಾಗಿದೆ. ಅದರ ಅನುಷ್ಠಾನ ಆಗಿ 3 ವರ್ಷಗಳಾಗಿದ್ದು, 2020ರಲ್ಲಿ ಕ್ರಿಯಾ ಯೋಜನೆಯನ್ನು ಸಚಿವ ಸಂಪುಟ ಒಪ್ಪಿದೆ ಎಂದು ವಿವರಿಸಿದರು. ಅದರ ಆಧಾರದಲ್ಲೇ ಅನುಷ್ಠಾನ ಕಾರ್ಯ ನಡೆದಿದೆ ಎಂದರು.
ಶಿಕ್ಷಣದ ವಿಚಾರದಲ್ಲಿ ವಿನಾಕಾರಣವಾಗಿ ಗೊಂದಲ ನಿರ್ಮಿಸಲಾಗುತ್ತಿದೆ. ರಾಜ್ಯ ಶಿಕ್ಷಣ ನೀತಿ ಸಂಬಂಧ ತಾತ್ಕಾಲಿಕ ವರದಿ ನೀಡಿದ್ದು, 4 ವರ್ಷದ ಪದವಿ ಕೋರ್ಸ್ ಬೇಕಿಲ್ಲ; 3 ವರ್ಷದ ಡಿಗ್ರಿಯೇ ಇರಲಿ ಎಂಬ ಸಲಹೆ, ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ಅನ್ನು ರದ್ದು ಮಾಡುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಇದೆ ಎಂದು ವಿವರಿಸಿದರು.
4 ವರ್ಷದ ಪದವಿ ಕೋರ್ಸ್ ವಿದ್ಯಾರ್ಥಿ ಆಯ್ಕೆ ಆಧರಿತವಾಗಿ ಇರುತ್ತದೆ. ವಿಶ್ವಮಟ್ಟದಲ್ಲಿ 4 ವರ್ಷದ ಪದವಿ ಕೋರ್ಸ್ ಇದೆ. ಬೇರೆ ದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ತೆರಳುವವರಿಗೆ 4 ವರ್ಷದ ಪದವಿ ಓದಿರಬೇಕಾಗುತ್ತದೆ. ಡಾಕ್ಟರೇಟ್ ಪ್ರೋಗ್ರಾಂಗೆ ತೆರಳಲು ಇದರ ಅವಶ್ಯಕತೆ ಇದೆ ಎಂದು ವಿವರಿಸಿದರು. ಇಲ್ಲಿಯೇ ಮಾಸ್ಟರ್ಸ್ ಮಾಡುವುದಾದರೆ ಒಂದು ವರ್ಷ ಮಾತ್ರ ಸಾಕು ಎಂದು ತಿಳಿಸಿದರು.
ಸುದೀರ್ಘ ಅಧ್ಯಯನಕ್ಕೂ ಅವಕಾಶ ಇದೆ. ಪ್ರತಿಭಾ ಹೆಚ್ಚಳಕ್ಕೂ ಇದು ಪೂರಕ ಎಂದು ವಿವರ ನೀಡಿದರು. ತಂತ್ರಜ್ಞಾನ, ಕೌಶಲ್ಯತೆ, ಗುಣಮಟ್ಟದ ಜ್ಞಾನ ಒಳಗೊಂಡ ಪರಿಪೂರ್ಣ ಶಿಕ್ಷಣ ಒದಗಿಸಲು ನಾವು ಮುಂದಾಗಿದ್ದೆವು. ವಿಶ್ವಮಟ್ಟದಲ್ಲಿ ಸ್ಪರ್ಧೆಗೆ ಪೂರಕ ಶಿಕ್ಷಣ ನೀಡಲು ಮುಂದಾಗಿದ್ದೆವು ಎಂದು ತಿಳಿಸಿದರು.
ಈ ಕಾಲಘಟ್ಟದಲ್ಲಿ 4 ವರ್ಷದ ಪದವಿ ಶಿಕ್ಷಣ ಅತ್ಯಂತ ಅವಶ್ಯಕ. ಕೆಲವೊಂದು ಸಂಸ್ಥೆಗಳು ಇದಕ್ಕೆ ಪೂರಕ ವ್ಯವಸ್ಥೆಗಳನ್ನೂ ಹೊಂದಿವೆ. ಸಂಶೋಧನೆ ಸಹಿತ ಹಾಗೂ ಸಂಶೋಧನೆ ರಹಿತ ಹಾನರ್ಸ್ ಮಾಡಲು ಅವಕಾಶವಿದೆ ಎಂದ ಅವರು, ಅರ್ಧದಲ್ಲೇ ಕಲಿಕೆ ಕೈಬಿಟ್ಟ ವಿದ್ಯಾರ್ಥಿಗಳು ಅವರ ನೆರವಿಗೆ ಬರುವ ಕಾರ್ಯವನ್ನು ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ವ್ಯವಸ್ಥೆ ಮಾಡಲಿದೆ. ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಶನ್ ಫ್ರೇಮ್ವರ್ಕ್ (ಎನ್ಎಸ್ಕ್ಯುಎಫ್) ಮೂಲಕ ಅರ್ಧದಲ್ಲೇ ಕಲಿಕೆ ಕೈಬಿಟ್ಟ ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಅಳೆಯಲು ಅವಕಾಶವಿದೆ ಎಂದು ತಿಳಿಸಿದರು.
ಬದುಕು ಕಟ್ಟಿಕೊಳ್ಳಲು ಪೂರಕ ಮತ್ತು ಉದ್ಯೋಗಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲಾಗಿದೆ. ಕಲಿಕೆಯಲ್ಲಿ ಇವುಗಳಿಗೆ ಅವಕಾಶ ಕೊಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು. ಮಲ್ಟಿ ಎಂಟ್ರಿ, ಮಲ್ಟಿ ಎಕ್ಸಿಟ್ ಕೈಬಿಡುವ ಮೂಲಕ ಸರಕಾರ ಮನ ಬಂದಂತೆ ನಡೆದುಕೊಳ್ಳುತ್ತಿದೆ. ಇವರ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ, ವಿದೇಶಗಳಲ್ಲಿ ಓದುತ್ತಾರೆ. ಬದಲಾದ ಶಿಕ್ಷಣ ವ್ಯವಸ್ಥೆಯಿಂದ ಪಬ್ಲಿಕ್ ವಿವಿ ಮತ್ತು ಸರಕಾರಿ ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಅನ್ಯಾಯ ಆಗಲಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.