ಬೆಂಗಳೂರು: ಬೆಂಗಳೂರಿನಲ್ಲಿ ಬಿಜೆಪಿ ಶಾಸಕರಿಗೆ ಕೊಟ್ಟ ಹಣವನ್ನು ಕಾಂಗ್ರೆಸ್ ಸರಕಾರವು ಹಿಂದಕ್ಕೆ ಪಡೆದು ಕಾಂಗ್ರೆಸ್ ಶಾಸಕರಿಗೆ ವರ್ಗಾಯಿಸಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ|| ಸಿ.ಎನ್. ಅಶ್ವತ್ಥನಾರಾಯಣ್ ಅವರು ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಎಂದು ಸರಕಾರ ಘೋಷಣೆ ಮಾಡಿದೆ. ಅದು ಬಾಯಿ ಮಾತಲ್ಲಷ್ಟೇ ಉಳಿದಿದೆ. ಕಳಪೆ, ಬ್ಯಾಡ್ ಬೆಂಗಳೂರನ್ನು ಸೃಷ್ಟಿಸಲಾಗುತ್ತಿದೆ ಎಂದು ಟೀಕಿಸಿದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ರಾಜಕೀಯ ಪ್ರೇರಿತವಾಗಿ ಬೆಂಗಳೂರಿನ ಅಭಿವೃದ್ಧಿಗೆ ಬಜೆಟ್ನಲ್ಲಿ ಒಂದು ರೂಪಾಯಿಯನ್ನೂ ಕೊಡದೆ ಕಡೆಗಣಿಸಿದ್ದಾರೆ ಎಂದು ಆಕ್ಷೇಪಿಸಿದರು.
ರಾಜ್ಯ ಬಿಜೆಪಿ ವತಿಯಿಂದ ರಾಜ್ಯಾದ್ಯಂತ 17 ತಂಡಗಳಿಂದ ಬರ ಪರಿಸ್ಥಿತಿ ಅಧ್ಯಯನ ನಡೆಯಲಿದೆ. ಬೆಂಗಳೂರು ನಗರದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವ ಸಂಬಂಧ ಇಂದು ನಮ್ಮ ತಂಡದ ನಾಯಕರಾದ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.
ಪಕ್ಷದ ನಗರದ ಎಲ್ಲ ಶಾಸಕರು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ನಗರಕ್ಕೆ ಸಂಬಂಧಿಸಿ ಕಳೆದ 6 ತಿಂಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ವೈಫಲ್ಯಗಳ ಕುರಿತು ಚರ್ಚಿಸಲಾಗಿದೆ. ರಸ್ತೆ ರಸ್ತೆಗಳಲ್ಲಿ ಹೊಂಡ ಗುಂಡಿಗಳಿವೆ. ಬೀದಿದೀಪಗಳಿಲ್ಲ. ಕಸ ವಿಲೇವಾರಿ ಆಗುತ್ತಿಲ್ಲ. ಉದ್ಯಾನಗಳ, ಕೆರೆಗಳ ನಿರ್ವಹಣೆ ನಡೆಯುತ್ತಿಲ್ಲ ಎಂದು ಟೀಕಿಸಿದರು.
ಮನೆ ನಿರ್ಮಾಣ ಸೇರಿ ಎಲ್ಲ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ಆಕ್ಷೇಪಿಸಿದರು. ಸಿಎಂ, ಡಿಸಿಎಂ ಅವರು ರಾಜಕೀಯ ಪ್ರೇರಿತವಾಗಿ ಪ್ರಧಾನಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಸಬರ್ಬನ್ ರೈಲು, ನೀರಾವರಿ ವಿಷಯದಲ್ಲಿ ಅವರ ಹೇಳಿಕೆಗಳು ರಾಜಕೀಯ ಪ್ರೇರಿತ ಎಂದು ಟೀಕಿಸಿದರು.
ಬರ ಸೇರಿ ಎಲ್ಲ ರಂಗದಲ್ಲಿ ಈ ಸರಕಾರ ಆರು ತಿಂಗಳುಗಳಲ್ಲಿ ವಿಫಲವಾಗಿದೆ. ಕೇವಲ ಕೇಂದ್ರದತ್ತ ಬೆರಳು ತೋರುವ ಕೆಲಸ ಮಾಡುತ್ತಿದೆ ಎಂದು ದೂರಿದ ಅವರು, ನವೆಂಬರ್ 2ರಂದು ಯಡಿಯೂರಪ್ಪ ಅವರು ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಶಾಸಕರು ಪಾಲ್ಗೊಳ್ಳುತ್ತಾರೆ ಎಂದು ಪ್ರಕಟಿಸಿದರು.
ಬೆಂಗಳೂರಿನ ಕಳಪೆ ನಿರ್ವಹಣೆ ಕುರಿತು 3ರಂದು ಪ್ರವಾಸದ ವೇಳೆ ಯಡಿಯೂರಪ್ಪ ಅವರ ನೇತೃತ್ವದ ತಂಡವು ಮಾಧ್ಯಮದ ಗಮನ ಸೆಳೆಯಲಿದೆ. ಸರಕಾರದ ವೈಫಲ್ಯಗಳ ಕುರಿತು ಜನಜಾಗೃತಿ ಮೂಡಿಸಲಿದ್ದೇವೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.