ನವದೆಹಲಿ: ಈ ತಿಂಗಳ ಆರಂಭದಲ್ಲಿ ದಕ್ಷಿಣ ಇಸ್ರೇಲ್ನಲ್ಲಿ ಹಮಾಸ್ ನಡೆಸಿದ ಅಮಾನವೀಯ ದಾಳಿಯ ಸಂದರ್ಭ ಒತ್ತೆಯಾಳುಗಳಾಗಿದ್ದ ನೂರಾರು ಮಂದಿಯ ಪೈಕಿ 80 ರ ಹರೆಯದ ಇಬ್ಬರು ಇಸ್ರೇಲಿ ಮಹಿಳೆಯರನ್ನು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಮಾನವೀಯ ಕಾರಣಗಳಿಗಾಗಿ ಸೋಮವಾರ ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್ ಗಾಜಾದ ಮೇಲೆ ತೀವ್ರ ದಾಳಿಯ ಎಚ್ಚರಿಕೆ ನೀಡಿದ ತರುವಾಯ ಇವರನ್ನು ಬಿಡುಗಡೆ ಮಾಡಲಾಗಿದೆ.
ನುರಿತ್ ಕೂಪರ್ ಮತ್ತು ಯೊಚೆವೆಡ್ ಲಿಫ್ಶಿಟ್ಜ್ ಅವರನ್ನು ಇಸ್ರೇಲಿ ಸೇನೆಗೆ ಹಸ್ತಾಂತರಿಸಲಾಗಿದೆ ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಇಸ್ರೇಲಿ ಸರ್ಕಾರ ದೃಢಪಡಿಸಿದೆ. ಕಳೆದ ಶುಕ್ರವಾರ ಅಮೆರಿಕದ ತಾಯಿ ಮತ್ತು ಮಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು. ಅವರ ಗಂಡಂದಿರೊಂದಿಗೆ ಅವರನ್ನು ಗಾಜಾ ಗಡಿಯ ಸಮೀಪವಿರುವ ಕಿಬ್ಬುಟ್ಜ್ನಿಂದ ಅಪಹರಿಸಲಾಗಿತ್ತು.
75 ವರ್ಷಗಳ ಹಿಂದೆ ಇಸ್ರೇಲ್ ಸ್ಥಾಪನೆಯಾದ ನಂತರದಲ್ಲಿ ಅತ್ಯಂತ ಕ್ರೂರ ರೀತಿಯಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ 1,400 ಜನರನ್ನು ಕೊಂದು ಅನೇಕರನ್ನು ಒತ್ತೆ ಇರಿಸಿತ್ತು. ಇಸ್ರೇಲ್ನ ಆತ್ಮರಕ್ಷಣೆಯ ಹಕ್ಕನ್ನು ಯುಎಸ್ ಸೇರಿದಂತೆ ಅನೇಕ ರಾಷ್ಟ್ರಗಳು ಸಾರ್ವಜನಿಕವಾಗಿ ಬೆಂಬಲಿಸಿದೆ, ಆದರೆ ಗಾಜಾದ ಮೇಲೆ ನೆಲದ ಆಕ್ರಮಣ ಮಾಡುವುದರಿಂದ ದೂರವಿರುವಂತೆ ಇಸ್ರೇಲ್ಗೆ ಒತ್ತಾಯಿಸಿವೆ. ಈಗಾಗಲೇ ಗಾಜಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಿಂದ ನೂರಾರು ಜನರು ಕೊಲೆಗೀಡಾಗಿದ್ದಾರೆ ಮತ್ತು ಅಲ್ಲಿನ ನಾಗರಿಕರನ್ನು ಈ ದಾಳಿಗಳು ವಿಷಮ ಪರಿಸ್ಥಿತಿಯಲ್ಲಿ ಸಿಲುಕಿಸಿದೆ ಎಂದು ರಾಯಿಟರ್ಸ್ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.