ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬ್ರ್ಯಾಂಡ್ ಸಿಎಂ, ಬ್ರ್ಯಾಂಡ್ ಡಿಸಿಎಂ ಹೇಗೆ ಮಾಡಬೇಕೆಂಬುದಕ್ಕೆ ಇವತ್ತು ರಾಜ್ಯದಲ್ಲಿ ನಡೆಯುತ್ತಿರುವ ಎಟಿಎಂ ಸರಕಾರದ ಆಡಳಿತವೇ ಒಂದು ಉದಾಹರಣೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ವಿಶ್ಲೇಷಣೆ ಮಾಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ‘ಎಟಿಎಂ ಸರಕಾರದ ಕಲೆಕ್ಷನ್ ಟ್ರೀ’ ಸಂಬಂಧ ಪೋಸ್ಟರ್ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲೆಕ್ಷನ್ ಸರಕಾರವಿದೆ. ಅದನ್ನು ಸಾಮಾನ್ಯ ಜನರೂ ತಿಳಿದುಕೊಂಡು ಅದನ್ನು ಅನುಭವಿಸುವಂತಾಗಿದೆ. ಅಭಿವೃದ್ಧಿ ಇಲ್ಲದೆ, ರಸ್ತೆಯ ಹೊಂಡ ಗುಂಡಿಗಳನ್ನೂ ತುಂಬಿಸಲಾಗದ ದುಸ್ಥಿತಿ ರಾಜ್ಯದ್ದು ಎಂದು ಟೀಕಿಸಿದರು.
ದೆಹಲಿ ಕಲೆಕ್ಷನ್ ಕೇಂದ್ರ ಬಿಂದು. ರಾಹುಲ್ ಗಾಂಧಿ ಇದರ ಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಕಲೆಕ್ಷನ್ನಲ್ಲೂ ಸಿಎಂ, ಡಿಸಿಎಂ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಡಿಸಿಎಂಗಿಂತ ಹೆಚ್ಚು ಕಲೆಕ್ಷನ್ಗೆ ಇಳಿದಿದ್ದಾರೆ. ಸಿಎಂ ಕುರ್ಚಿ ಎಳೆದುಕೊಳ್ಳಲು ಹೆಚ್ಚು ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇದೊಂದು ಗಂಭೀರ- ಶೋಚನೀಯ ವಿಚಾರ ಎಂದು ಟೀಕಿಸಿದರು.
ಇಲ್ಲಿ ಕಲೆಕ್ಷನ್ ವಂಶವೃಕ್ಷವನ್ನು ಅನಾವರಣ ಮಾಡಲಾಗಿದೆ. ರಾಷ್ಟ್ರೀಯ ಕಾಂಗ್ರೆಸ್ಸಿನ ಕಲೆಕ್ಷನ್ ನೇತೃತ್ವವನ್ನು ಸುರ್ಜೇವಾಲಾ, ವೇಣುಗೋಪಾಲ್ ವಹಿಸಿದ್ದಾರೆ. ಲೂಟಿ ಹೊಡೆಯುವ ಕಾರ್ಯಯೋಜನೆ ಅಚ್ಚರಿ ತರುವಂತಿದೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಸಿದ್ದರಾಮಯ್ಯರ ಹಣ ಸಂಗ್ರಹ ಅವರ ಮಗ ಯತೀಂದ್ರ ಮತ್ತು ಸ್ವಜಾತಿಯ ಬೈರತಿ ಸುರೇಶ್ ಮೂಲಕ ನಡೆಯುತ್ತದೆ ಎಂದು ವಿವರಿಸಿದರು.ಗುತ್ತಿಗೆದಾರರಲ್ಲೂ 2 ಗುಂಪುಗಳಾಗಿವೆ. ಕೆಂಪಣ್ಣ, ಸಿದ್ದರಾಮಯ್ಯರ ಗುಂಪು. ಇನ್ನೊಂದೆಡೆ ತಂಡ ದೊಡ್ಡದಿದೆ. ಉಪಾಧ್ಯಕ್ಷ ಅಂಬಿಕಾಪತಿ ನೇತೃತ್ವದ ತಂಡವಿದು. ಅವರ ಮನೆಯಲ್ಲೇ ಹಣ ಸಿಕ್ಕಿದೆ. ಪ್ರದೀಪ್, ಪ್ರಹ್ಲಾದ್, ಪ್ರಮೋದ್ ನೇತೃತ್ವದಲ್ಲಿ ಹಣ ಸಂಗ್ರಹ ನಡೆದಿದೆ. ಇವೆಲ್ಲವೂ ರಾಹುಲ್ ಗಾಂಧಿಯವರಿಗೆ ಹೋಗುತ್ತದೆ ಎಂದು ಆರೋಪಿಸಿದರು.
ಐಟಿ ಇಲಾಖೆಯಿಂದ ಮಾತ್ರ ಇದರ ತನಿಖೆ ನಡೆದರೆ ಸಾಲದು. ಇದರ ಬೇರು ಆಳವಾಗಿದೆ. ಕ್ರಿಮಿನಲ್ ಉದ್ದೇಶವನ್ನು ಹೊರಕ್ಕೆ ತರಲು ಸಿಬಿಐ ತನಿಖೆ ಅನಿವಾರ್ಯ ಎಂದು ವಿವರಿಸಿದರು. ಇದು ಖಜಾನೆ ಲೂಟಿಯ ವ್ಯವಸ್ಥೆಯಾಗಿದ್ದು, ಇದನ್ನು ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ಆಧರಿತ ಯೋಜನೆಗಳನ್ನು ನೀಡಿಲ್ಲ. ಶಿವಕುಮಾರರು ನಿನ್ನೆ ಕಲೆಕ್ಷನ್ ಮೇಲ್ವಿಚಾರಣೆಗಾಗಿ ಬೆಳಗಾವಿಗೆ ತೆರಳಿದ್ದಾಗಿ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಎರಡೂ ಗುಂಪುಗಳು ರಾಜ್ಯದ ಬೊಕ್ಕಸವನ್ನು ಪೂರ್ತಿಯಾಗಿ ಲೂಟಿ ಹೊಡೆದಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಳ್ಳೆಯ ಗುತ್ತಿಗೆದಾರರಿಗೆ ಅವಕಾಶವಿಲ್ಲ. ನಯಾಪೈಸೆಯೂ ಅಭಿವೃದ್ಧಿಗೆ ಹೋಗುವ ಸಾಧ್ಯತೆ ಇಲ್ಲ. ಇದನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ಮಾಡಲಿದ್ದೇವೆ. ಹಿಂದೆ ಸುಳ್ಳು ಆರೋಪಗಳನ್ನು ಬಿಜೆಪಿ ವಿರುದ್ಧ ಮಾಡಿದ್ದರು. ಇದರ ಸಮಗ್ರ ತನಿಖೆ ಆಗಲಿ ಎಂದು ಹೇಳಿದರು.
ಬಿಲ್ ಕೊಡದೆ ಹಾವೇರಿ ಮತ್ತಿತರ ಕಡೆ ಇಂದಿರಾ ಕ್ಯಾಂಟೀನ್ ಬಂದ್ ಆಗಿದೆ. ಹಣ ಪಾವತಿ ಇಲ್ಲ; ಕಮಿಷನ್ ಕೇಳುತ್ತಾರೆಂದು ಆರೋಪ ಕೇಳಿಸಿದೆ. ಕಲಾವಿದರ ಕೈಯಲ್ಲಿ ಕಮಿಷನ್ ಕೇಳುವುದಕ್ಕಿಂತ ಕೆಟ್ಟ ಕೆಲಸ ಇನ್ನೇನಿದೆ ಎಂದು ಪ್ರಶ್ನಿಸಿದರು. ಐಟಿ ರೇಡ್ ಆದೊಡನೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಬೆಂಗಳೂರಿಗೆ ಓಡಿ ಬರುವ ದಯನೀಯ ಪರಿಸ್ಥಿತಿ ಯಾಕೆ ಬಂತು ಎಂದು ಕೇಳಿದರು.
ಎಲ್ಲ ಇಲಾಖೆಗಳಲ್ಲಿ ಕಿಂಗ್ಪಿನ್ ನೇಮಕ ಆಗಿದೆ. ಅಪಘಾತಗಳು ಹೆಚ್ಚಾಗಿವೆ. ಅಭಿವೃದ್ಧಿ ಕೆಲಸಗಳು ಆರಂಭವಾಗಬೇಕಿದೆ. ಹೈಕೋರ್ಟ್ ಆದೇಶದ ಬಳಿಕ ಡಿಸಿಎಂಗೆ ಆ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಸಿಎಂ ಮತ್ತು ಎಐಸಿಸಿ ವರಿಷ್ಠರು ಅವರನ್ನು ಆ ಸ್ಥಾನದಿಂದ ಕೆಳಕ್ಕಿಳಿಸಿ ಸಮರ್ಪಕ ತನಿಖೆಗೆ ಅವಕಾಶ ಮಾಡಿಕೊಡಲಿ ಎಂದು ಆಗ್ರಹಿಸಿದರು. ಇವತ್ತು ರಾಜ್ಯದಲ್ಲಿ ಸ್ಪರ್ಧಾತ್ಮಕ ಭ್ರಷ್ಟಾಚಾರವಿದೆ ಎಂದು ಟೀಕಿಸಿದರು.
ರಾಜ್ಯದ ಎಲ್ಲ ಕಡೆ ಭ್ರಷ್ಟಾಚಾರ ಪರಿಚಯಿಸುವ ಪೋಸ್ಟರ್ ಅಂಟಿಸುವ ಕಾರ್ಯ ನಡೆಯಲಿದೆ. ಇದು ಸಿನಿಮಾ ಪ್ರಾರಂಭದ ಟ್ರೈಲರ್ ಅಷ್ಟೇ ಎಂದು ತಿಳಿಸಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕ ರವಿ ಸುಬ್ರಹ್ಮಣ್ಯ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.