ಬೆಂಗಳೂರು: ಕಾಂಗ್ರೆಸ್ ಸರಕಾರ ಮತ್ತು ಡಿ.ಕೆ.ಶಿವಕುಮಾರ್ ಅವರು ತಮಗೆ ಮತ ಕೊಡುವ ಸಮಾಜವಿದ್ರೋಹಿಗಳನ್ನು ಕ್ಷಮಿಸುವ ಮೂಲಕ ಸಮಾಜಕ್ಕೇನು ಸಂದೇಶ ಕೊಡುತ್ತಾರೆ? ಎಂದು ರಾಜ್ಯದ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎಲ್ಲ ಮುಸ್ಲಿಮರು ಕೆಟ್ಟವರೆಂದು ನಾನು ಹೇಳುತ್ತಿಲ್ಲ; ಎಲ್ಲ ಹಿಂದೂಗಳು ಒಳ್ಳೆಯವರೆಂದು ಹೇಳುವುದಿಲ್ಲ. ಆದರೆ ಹಿಂದೂ ಮುಸ್ಲಿಮರ ನಡುವಿನ ಅಂತರ ಜಾಸ್ತಿ ಆಗಲು ಇದೆಲ್ಲ ಕಾರಣ ಆಗಬಾರದು ಎಂದು ನುಡಿದರು.
ರಾಗಿಗುಡ್ಡದಲ್ಲಿ ಹಿಂದೂ ಕುಟುಂಬಗಳನ್ನು ಹುಡುಕಿ ಹುಡುಕಿ ಹಲ್ಲೆ ಮಾಡಿದ್ದಾರೆ; ಹೊಡೆದಿದ್ದಾರೆ ಎಂದ ಅವರು, ಹೆಣ್ಮಕ್ಕಳ ಜೊತೆ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಹೊರಗೆ ಬಂದರೆ ಏನ್ಮಾಡ್ತೀವಿ ಎಂದು ಬೆದರಿಸಿದ್ದಾರೆ. ಹಿಂದೂಗಳ ವಾಹನವನ್ನಷ್ಟೇ ಹಾನಿಗೀಡು ಮಾಡಿದ್ದು, ಪಕ್ಕದಲ್ಲೇ ಇದ್ದ ಮುಸ್ಲಿಮರ ವಾಹನಗಳಿಗೆ ಏನೂ ಮಾಡಿಲ್ಲ. ಇದು ಏನನ್ನು ತೋರಿಸುತ್ತದೆ? ನೀವ್ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದರು.
ಈದ್ ಮಿಲಾದ್ ಎಂದರೆ ಏನು? ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ. ಪ್ರವಾದಿಯವರು ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದವರು. ಆ ಹಬ್ಬ ಆಚರಿಸುವ ರೀತಿ ಇದೇ ಎಂದು ಆಕ್ಷೇಪಿಸಿದರು. ಅವರ ಸಂದೇಶಗಳಿಗೆ ಗೌರವ ಕೊಡುವ ಕೆಲಸ ಅಲ್ಲಿ ಆಗಿದೆಯೇ ಎಂದೂ ಕೇಳಿದರು.
ಹಿಂದೂ ಸೈನಿಕನ ಎದೆ ಮೇಲೆ ಕಾಲಿಟ್ಟು ಭರ್ಚಿಯಿಂದ ಇರಿಯುವ ಟಿಪ್ಪುವಿನ ಚಿತ್ರ, ಔರಂಗಜೇಬನ ಚಿತ್ರ ಹಾಕಬೇಕಿತ್ತೇ? ಈ ರೀತಿ ಪ್ರಚೋದನೆಗೆ ಆಸ್ಪದ ಕೊಡಬಾರದಿತ್ತು. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯವೂ ಇರಲಿಲ್ಲ. ಕಲ್ಲೆಸೆತದಿಂದ ಗಾಯಗೊಂಡವರು, ಅಮಾಯಕ ಹಿಂದೂಗಳನ್ನು ಕರೆದೊಯ್ದು ಕೇಸು ಹಾಕಿದ್ದಾರೆ ಎಂದು ಟೀಕಿಸಿದರು.
ಸರಕಾರ ಇವತ್ತು ಹಿಂದೂ ಮುಸ್ಲಿಮರು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಗಲಭೆ ಆದ ಸ್ಥಳಕ್ಕೆ ಗೃಹ ಸಚಿವರು ತೆರಳಿ ಜನರಲ್ಲಿ ವಿಶ್ವಾಸ ಮೂಡಿಸಬೇಕಿತ್ತು. ನಾವಿದ್ದೇವೆ; ಕಾನೂನು ಕೈಗೆತ್ತಿಕೊಂಡವರನ್ನು ಶಿಕ್ಷಿಸುತ್ತೇವೆ ಎಂದು ಹೇಳಬೇಕಿತ್ತಲ್ಲವೇ ಎಂದೂ ಕೇಳಿದರು. ಸರಕಾರವು ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿ ಎಂದು ಒತ್ತಾಯಿಸಿದರು.
ಶಿವಮೊಗ್ಗ ಗಲಭೆ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ನೋಡಿದ್ದೇನೆ. ಯಾರು ಸಮಾಜವನ್ನು ಒಡೆಯುತ್ತಾರೋ, ಯಾರು ತಮ್ಮ ಚಟಕ್ಕೆ ಹಿಂದೂ ಮುಸ್ಲಿಮರ ನಡುವೆ ಗೋಡೆ ಕಟ್ಟುತ್ತಿದ್ದಾರೆಂದು ದೇಶದ ಜನರಿಗೆ ಗೊತ್ತಿದೆ. ನಾನು ಗೃಹ ಸಚಿವನಾಗಿದ್ದಾಗ ಹಳೆ ಹುಬ್ಬಳ್ಳಿಯಲ್ಲಿ ಕಾನೂನನ್ನು ಕೈಗೆ ತೆಗೆದುಕೊಂಡ ಘಟನೆ ನಡೆದಿತ್ತು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಒಂದೂವರೆ ಸಾವಿರಕ್ಕಿಂತ ಹೆಚ್ಚು ಜನರು ಬಂದಿದ್ದರು. ಒಂದು ದೇವಸ್ಥಾನವನ್ನು ಜಖಂಗೊಳಿಸಿದ್ದರು. ಪೊಲೀಸರು ಸ್ವಲ್ಪ ವ್ಯತ್ಯಾಸ ಆದರೂ ಹಳೆ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು ಎಂದು ತಿಳಿಸಿದರು.
ಇಂಥ ಸಂದರ್ಭದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಅಂಥ ಆರೋಪಿಗಳ ಮೇಲಿನ ಮೊಕದ್ದಮೆ ವಾಪಸ್ ಪಡೆಯಲು ಹೇಳುತ್ತಾರೆ ಎಂದರೆ ಏನು ಮಾಡಲು ಹೊರಟಿದ್ದಾರೆಂದು ಜನರಿಗೆ ವಿವರಣೆ ಕೊಡಬೇಕಾಗುತ್ತದೆ ಎಂದು ಆಗ್ರಹಿಸಿದರು.
ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ನಾವೆಲ್ಲ ಸೇರಿ ಶಿವಮೊಗ್ಗದ ಗಲಭೆ ಘಟನೆ ವೀಕ್ಷಿಸಲು ತೆರಳಿದ್ದೆವು. ಸತ್ಯವಾಗಿ ಏನೇನು ಆಗಿದೆ ಎಂದು ಅರ್ಥ ಮಾಡಿಕೊಳ್ಳಲು ನಾವು ಹೋಗಿದ್ದೆವು ಎಂದು ವಿವರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.