ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಇಂದು ಬೆಂಗಳೂರು ಬಂದ್ ನಡೆಸಿವೆ. ಬಂದ್ಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಆದರೆ ಒಂದೆಡೆ ಪ್ರತಿಭಟನೆ ನಡೆಯುತ್ತಿರುವಂತೆ ಇನ್ನೊಂದೆಡೆ ಕಾವೇರಿ ನದಿ ನಿಯಂತ್ರಣ ಸಮಿತಿ ಸಭೆ ನಡೆಸಿದ್ದು, ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿದೆ.
ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿಯಲ್ಲಿ ಇಂದು ನಡೆದ ಸಭೆಯಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಅಂದರೆ 18 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ.
ನವದೆಹಲಿಯಲ್ಲಿ ಇಂದು ನಡೆದ CWRCಯ 87ನೇ ಸಭೆಯಲ್ಲಿ, ಕರ್ನಾಟಕ ಮತ್ತು ತಮಿಳುನಾಡು ಸಮಿತಿಯ ಮುಂದೆ ತಮ್ಮ ಸಲ್ಲಿಕೆಗಳನ್ನು ಸಲ್ಲಿಸಿದವು. ಸೆಪ್ಟೆಂಬರ್ 25ರವರೆಗೆ ರಾಜ್ಯದ ನಾಲ್ಕು ಜಲಾಶಯಗಳಿಗೆ ಒಟ್ಟು ಒಳಹರಿವಿನ ಕೊರತೆಯು ಶೇಕಡಾ 53.04ರಷ್ಟಿದೆ ಎಂದು ಕರ್ನಾಟಕ ವಾದಿಸಿದೆ. ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಸಲ್ಲಿಕೆಯಲ್ಲಿ ತಿಳಿಸಿತ್ತು.
ಇದಕ್ಕೆ ತಮಿಳುನಾಡು ಪರ ಅಧಿಕಾರಿಗಳು ಕರ್ನಾಟಕವು ತಕ್ಷಣವೇ ಕೊರತೆಯ ಪ್ರಮಾಣವನ್ನು ಬಿಡುಗಡೆ ಮಾಡಬೇಕು. ಸಂಕಷ್ಟದ ಅನುಪಾತಕ್ಕೆ ಅನುಗುಣವಾಗಿ ಮತ್ತಷ್ಟು ನೀರನ್ನು ಬಿಡುಗಡೆ ಮಾಡಬೇಕು ಎಂದು CWRCಗೆ ಒತ್ತಾಯಿಸಿತು. ಅದರಂತೆ ಕರ್ನಾಟಕಕ್ಕೆ ನೀರು ಬಿಡುಗಡೆಗೆ ಆದೇಶಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.