ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವಾಗ, ಮಂಡ್ಯದ ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳದೆ, ಬೆಂಗಳೂರಿನ ಕುಡಿಯುವ ನೀರಿನ ಪರಿಸ್ಥಿತಿಯನ್ನೂ ಅರ್ಥ ಮಾಡದೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುತ್ತಿರುವುದು ಖಂಡನೀಯ. ಈ ಸಂಬಂಧ ಮಂಗಳವಾರ ನಡೆಯುವ ಬೆಂಗಳೂರು ಬಂದ್ಗೆ ಬಿಜೆಪಿ ಬೆಂಬಲ ಕೊಡಲಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಪ್ರಕಟಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನೀರಿನ ವಿಚಾರ, ರಾಜ್ಯದ ಹಿತಾಸಕ್ತಿ ಸಂದರ್ಭದಲ್ಲಿ ಬಿಜೆಪಿ ನೆರವಿಗೆ ನಿಲ್ಲಲಿದೆ ಎಂದು ನಮ್ಮ ನಾಯಕರಾದ ಯಡಿಯೂರಪ್ಪನವರು ತಿಳಿಸಿದ್ದಾರೆ. ಕಬ್ಬು ಬೆಳೆಗಾರರ ಸಂಘಟನೆ ನೇತೃತ್ವದಲ್ಲಿ ಕೆಲವು ಸಂಘಟನೆಗಳು ಬಂದ್ ಕರೆ ಕೊಟ್ಟಿವೆ. ಇದನ್ನು ಬಿಜೆಪಿ ಬೆಂಬಲಿಸಲಿದ್ದು, ನಮ್ಮೆಲ್ಲ ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಾರೆ. ಬೆಂಗಳೂರಿನ ಶಾಂತಿಯನ್ನು ಕಾಪಾಡಿಕೊಂಡು ಚಳವಳಿಯಲ್ಲಿ ಪಾಲ್ಗೊಳ್ಳಲು ಅವರು ತಿಳಿಸಿದರು.
ವಾಡಿಕೆಗಿಂತ ಶೇ 42ರಷ್ಟು ಮಳೆ ಕಡಿಮೆ ಇದೆ ಎಂದು ಸರಕಾರವೇ ತಿಳಿಸಿದೆ. ಈಗ ಕೆಆರ್ಎಸ್ನಲ್ಲಿ ಕೇವಲ 20 ಟಿಎಂಸಿ ನೀರಿದೆ ಎಂಬ ಮಾಹಿತಿ ಇದೆ. ಈಗ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೆ 7 ಟಿಎಂಸಿ ಖಾಲಿ ಆಗಲಿದೆ. ಉಳಿಯುವುದು 13 ಟಿಎಂಸಿ. ಡೆಡ್ ಸ್ಟೋರೇಜ್ 7 ಟಿಎಂಸಿ. ಉಳಿದ 6 ಟಿಎಂಸಿ ಬೆಂಗಳೂರಿನ ಜನರ ಕುಡಿಯುವ ನೀರಿಗೆ 3 ತಿಂಗಳಿಗೆ ಸಾಕಾಗದು ಎಂದು ಸಿ.ಟಿ.ರವಿ ಅವರು ಪ್ರಶ್ನೆಗೆ ಉತ್ತರಿಸುವ ವೇಳೆ ವಿಶ್ಲೇಷಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರದಿಂದ ನೀರು ಬಿಡುವುದಿಲ್ಲ ಎಂಬ ಗಟ್ಟಿ ತೀರ್ಮಾನವನ್ನು ನಿರೀಕ್ಷೆ ಮಾಡಿದ್ದೆವು. ಅಂಥ ತೀರ್ಮಾನ ತೆಗೆದುಕೊಂಡರೆ 7 ಕೋಟಿ ಜನರು ನಿಮ್ಮ ಜೊತೆಗೆ ಇರುತ್ತಾರೆ ಎಂದು ಸರ್ವಪಕ್ಷ ಸಭೆಯಲ್ಲಿ ಸ್ಪಷ್ಟಪಡಿಸಿದ್ದೇವೆ. ನಮ್ಮಲ್ಲಿ ಕುಡಿಯುವ ನೀರಿಗೇ ಸಮಸ್ಯೆ ಇದೆ. ತಮಿಳುನಾಡಿನ ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿದ್ದರೂ ಅವರು ಬೆಳೆಗೆ ನೀರು ಕೇಳುತ್ತಿದ್ದಾರೆ. ಹಾಗಿದ್ದಾಗ ಯೋಚಿಸಿ ನಿರ್ಧಾರ ಮಾಡಬೇಕಿತ್ತಲ್ಲವೇ ಎಂದು ಕೇಳಿದರು.
ಇವರು ಕಾಕಾ ಪಾಟೀಲ್ ನಿನಗೂ ಫ್ರೀ ಎಂದಂತೆ ಸ್ಟಾಲಿನ್ ನಿನ್ಗೂ ಫ್ರೀ ಎಂದು ನೀರು ಬಿಡುತ್ತಿದ್ದಾರೆ. ಈ ಬೇಜವಾಬ್ದಾರಿ ನಿಲುವಿನ ವಿರುದ್ಧ ವಿವಿಧ ಸಂಘಟನೆಗಳು ಕರೆಕೊಟ್ಟ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದು ತಿಳಿಸಿದರು.
ನಮ್ಮ ನೀರು ನಮ್ಮ ಹಕ್ಕು ಚಳವಳಿಯನ್ನು ಕಾಂಗ್ರೆಸ್ಸೇ ಮಾಡಿತ್ತಲ್ಲವೇ? ಎಲ್ಲಿದೆ ನಮ್ಮ ಹಕ್ಕು ಶಿವಕುಮಾರ್ ಅವರೇ? ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ನೀರು ಬಿಡುವುದಿಲ್ಲ ಎಂದು ತೀರ್ಮಾನ ತೆಗೆದುಕೊಳ್ಳಿ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತ ಸವಾಲೆಸೆದರು. ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟಿದ್ದೀರಲ್ಲ? ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು.
ಇಂಡಿಯ ಮೈತ್ರಿಕೂಟವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ರಾಜ್ಯದ ಜನರ ಹಿತವನ್ನು ಬಲಿ ಕೊಟ್ಟಿದ್ದಾರೆ. ಕಾಂಗ್ರೆಸ್ಸಿನ ಹೈಕಮಾಂಡಿನ ಮೆಚ್ಚುಗೆ ಪಡೆಯಲು ನೀವು ಕೇಳುವ ಮೊದಲೇ ನೀರು ಬಿಟ್ಟಿದ್ದೀರಲ್ಲವೇ ಎಂದು ಪ್ರಶ್ನಿಸಿದರು. ಸಾಕಷ್ಟು ನೀರಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ ಎಂದು ನುಡಿದರು.
ಅಕ್ರಮ ಗೋಹತ್ಯೆಗೆ ಕಾಂಗ್ರೆಸ್ ಸರಕಾರ ಕುಮ್ಮಕ್ಕು ಕೊಡುವಂತಿದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಆಡಳಿತ ನಡೆಸುವ ಕಾಂಗ್ರೆಸ್ ಕೃಪಾಕಟಾಕ್ಷ ಇಲ್ಲದೆ ಇಂಥ ಬೃಹತ್ ಗೋಮಾಂಸ ಸಾಗಾಟ ವ್ಯವಸ್ಥೆ ನಿರ್ಮಾಣ ಆಗಲು ಅಸಾಧ್ಯ. ಹಾಗಿದ್ದರೆ ಗೋಹತ್ಯಾ ನಿಷೇಧ ಕಾಯ್ದೆ ಯಾಕೆ ಇಟ್ಟುಕೊಂಡಿದ್ದೀರಿ ಎಂದು ಕೇಳಿದರು. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.