ಕಶ್ಯಪ ತಪಃಗೈದ ನೆಲ ಕಾಶ್ಮೀರ. ಬಹಳ ಹಿಂದಿನಿಂದಲೂ ಭೌಗೋಳಿಕವಾಗಿ ಸಮೃದ್ಧವಾದ, ಪ್ರಾಕೃತಿಕವಾಗಿ ಸುಂದರವಾದ, ವಿವಿಧ ತತ್ವ ಸಿದ್ಧಾಂತಗಳನ್ನು ಪೋಷಿಸಿದ ತಪೋಭೂಮಿಯಿದು. ಶೈವ, ಶಾಕ್ತ ಹಾಗೆಯೇ ಭೌದ್ಧ ಧರ್ಮೀಯರ ಶ್ರದ್ಧಾಕೇಂದ್ರವಾಗಿದ್ದ ಇಲ್ಲಿ ಆದಿ ಗುರು ಶಂಕರಾಚಾರ್ಯರು ಸರ್ವಜ್ಞಪೀಠವನ್ನು ಅಲಂಕರಿಸಿದ್ದರು. ಸುಮಾರು 8 ನೇ ಶತಮಾನದಲ್ಲಿ ಈ ಪ್ರಾಂತ್ಯವನ್ನು ಆಳಿದ್ದ ಅಪ್ರತಿಮ ಚಕ್ರವರ್ತಿ ಲಲಿತಾದಿತ್ಯ ಮುಕ್ತಾಪಿಡ. ಈತನ ಹೆಸರು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಒಂದರ್ಥದಲ್ಲಿ ಲಲಿತಾದಿತ್ಯ ಕಾಶ್ಮೀರವನ್ನು ಆಳುತ್ತಿದ್ದ ವೇಳೆಯಲ್ಲಿಯೇ ಜಗದ್ಗುರು ಶಂಕರಾಚಾರ್ಯರು ಇಲ್ಲಿಗೆ ತಲುಪಿದ್ದರು. ಮತ್ತು ಇಲ್ಲಿನ ಸರ್ವಜ್ಞ ಪೀಠವನ್ನು ಅಲಂಕರಿಸಿ ಆಚಾರ್ಯರು (ಸೌಂದರ್ಯ ಲಹರಿ) ಗ್ರಂಥವನ್ನು ರಚಿಸಿದರು ಎಂದೆನ್ನಲಾಗುತ್ತದೆ. ಇಲ್ಲಿ ಹೆಸರಿಸಲೇ ಬೇಕಿರುವುದು ಕಾಶ್ಮೀರ ಕಂಡ ಓರ್ವ ಪರಾಕ್ರಮಿ ಚಕ್ರವರ್ತಿ ಲಲಿತಾದಿತ್ಯ ಮುಕ್ತಾಪಿಡ ಬಗ್ಗೆ. ಕಾರ್ಕೋಟ ರಾಜವಂಶದಲ್ಲಿ ಜನಿಸಿದ ಈತ ಕ್ರಿ.ಶ 724 ರಲ್ಲಿ ಸಿಂಹಾಸನವನ್ನು ಏರುತ್ತಾನೆ. 760 ರ ತನಕ ಈತ ರಾಜ್ಯಭಾರ ಮಾಡುತ್ತಾನೆ. ಪರಿಹಾಸಪುರ ಅಂದರೆ ಇಂದಿನ ಶ್ರೀನಗರದಿಂದ ಸುಮಾರು 20 ಕಿ.ಮೀ ದೂರವಿದ್ದ ನಗರವನ್ನು ತನ್ನ ರಾಜಧಾನಿಯನ್ನಾಗಿಸಿ ಆಳ್ವಿಕೆ ನಡೆಸಿದ ಈತ ಮಾರ್ತಾಂಡ ಸೂರ್ಯ ದೇಗುಲ ಸಹಿತ ಹಲವು ಬೃಹತ್ ದೇಗುಲಗಳನ್ನು ನಿರ್ಮಿಸಿದ್ದ. ನಾಲ್ಕನೆ ಕಾರ್ಕೋಟ ರಾಜನೆಂದು ಹೆಸರುವಾಸಿಯಾಗಿದ್ದ ಈತನ ಬಗ್ಗೆ 12 ನೇ ಶತಮಾನದ ಕವಿ ಕಲ್ಹಣನ ರಾಜತರಂಗಿಣಿಯಲ್ಲಿ ಹೆಸರಿಸಲಾಗಿದ್ದು. ಚಕ್ರವರ್ತಿ ರಾಯನ ಬಗ್ಗೆ ಬಹಳಷ್ಟು ವರ್ಣನಾತ್ಮಕ ವಿವರಣೆಗಳನ್ನು ನೀಡಲಾಗಿದೆ.
ರಾಜ ಬಾಲಾದಿತ್ಯ ಮತ್ತು ಅನಘಲೇಖರಿಗೆ ಜನಿಸಿದ ಮಗನ ಹೆಸರು ದುರ್ಲಭವರ್ಧನ. ಕ್ರಿ.ಶ 631 ರಲ್ಲಿ ಭಾರತಕ್ಕೆ ಆಗಮಿಸಿದ್ದ ಚೀನಿ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಈತನ ರಾಜ್ಯವು ತಕ್ಷಶಿಲೆ, ಸಿಂಹಪುರ, ಓರ್ಸಾ ಅಂದರೆ ಈಗಿನ ಖೈಬರ್ ಪಂಕ್ತುಖ್ವಾ ಅನ್ನು ಒಳಗೊಂಡಿತ್ತು ಎಂದು ಹೇಳುತ್ತಾನೆ. ಬಹುಪಾಲು ಕಾಶ್ಮೀರಿಗಳು ಜ್ಞಾನ ಪಿಪಾಸುಗಳು ಮಾತ್ರವಲ್ಲ ಬಹಳ ಸಾಮರಸ್ಯದಿಂದಿದ್ದರು ಎಂದು ಬಣ್ಣಿಸಿದ್ದಾನೆ. ಆ ಕಾಲದಲ್ಲಿ ಬಹುಸ್ಪುರತೆ ನಾಡಿನಲ್ಲಿತ್ತು. ರಾಜ್ಯದಲ್ಲಿ ಬಹುಪಾಲು ಮಂದಿ ಶೈವ ಪಂಥವನ್ನು ಅನುಸರಿಸುತ್ತಿದ್ದರು. ಇವರೊಂದಿಗೆ ವೈಷ್ಣವ ಮತ್ತು ಬೌದ್ಧರು ಬಹಳ ಅನ್ಯೋನ್ಯತೆಯಿಂದಿದ್ದರು ಎಂದು ಹೇಳಿದ್ದಾನೆ. ಇದೇ ಪ್ರದೇಶದಿಂದ ಬೌದ್ಧ ಮತವು ಟಿಬೆಟ್, ಮಧ್ಯ ಏಷ್ಯಾ ಸಹಿತ ರೇಶ್ಮೇ ಹಾದಿಯಾಗಿ ಚೀನಾಕ್ಕೆ ತಲುಪಿತ್ತು. ಬೌದ್ಧರ ಮೇಲೆ ಶೈವದ ಪ್ರಭಾವ ಹೆಚ್ಚಾದ ಪರಿಣಾಮ ಅವಲೋಕಿತೇಶ್ವರ, ಮಂಜುಶ್ರೀಯಂತಹ ದೈವಿಕತೆ ಕಾಶ್ಮೀರದಲ್ಲಿಯೇ ಬೆಳೆಯಿತು ಎನ್ನಲಾಗಿದೆ. ರಾಜ ದುರ್ಲಭವರ್ಧನನ ಪ್ರಭಾವ ಅಂದು ಚೀನಾ ಮತ್ತು ಕಾಬೂಲ್ ಮಧ್ಯೆಗಿನ ವ್ಯಾಪಾರೀ ಮಾರ್ಗದ ಮೇಲೇಯೂ ಇತ್ತು. ಈತನ ನಂತರ ಆಳ್ವಿಕೆಗೆ ಬಂದ ದುರ್ಲಭಕ ಪ್ರತಾಪಾದಿತ್ಯ ಒಟ್ಟು 50 ವರ್ಷಗಳ ಕಾಲ ಆಳ್ವಿಕೆ ನಡೆಸುತ್ತಾನೆ.
ನೋನಾ ಎಂಬ ಶ್ರೀಮಂತ ವ್ಯಾಪಾರೀಯೋರ್ವ ದುರ್ಲಭಕನ ಆತ್ಮೀಯ ಸ್ನೇಹಿತನಾಗಿದ್ದ, ಆತನ ಪತ್ನಿಯ ಹೆಸರು ನರೇಂದ್ರಪ್ರಭಾ. ಆಕೆಯ ರೂಪವನ್ನು ಕಂಡ ದುರ್ಲಭಕನಿಗೆ ಆಕೆಯ ಮೇಲೆ ಮೋಹವಾಗುತ್ತದೆ. ಆದರೆ ಆತ ಈ ವಿಚಾರವಾಗಿ ಯಾರಲ್ಲೂ ಏನನ್ನೂ ಹೇಳಿಕೊಳ್ಳುವುದಿಲ್ಲ. ಆದರೆ ಒಂದು ದಿನ ಮಿತ್ರ ನೋನಾನಿಗೆ ಇದು ತಿಳಿಯುತ್ತದೆ ಮಾತ್ರವಲ್ಲ ತನ್ನ ಪತ್ನಿಯನ್ನೇ ರಾಜ ಪ್ರತಾಪಾದಿತ್ಯನಿಗೆ ಮದುವೆ ಮಾಡಿಸುತ್ತಾನೆ. ಈಕೆಯಲ್ಲಿ ರಾಜನಿಗೆ ಮೂರು ಮಂದಿ ಮಕ್ಕಳು ಜನಿಸುತ್ತಾರೆ. ಚಂದ್ರಾಪಿಡ, ತಾರಾಪಿಡ, ಮುಕ್ತಾಪಿಡ ಕ್ರಮವಾಗಿ ಇವರನ್ನು ವಜ್ರಾದಿತ್ಯ, ಉದಯಾದಿತ್ಯ ಮತ್ತು ಲಲಿತಾದಿತ್ಯ ಎಂದು ಕರೆಯಲಾಗುತ್ತದೆ. ಕ್ರಿ.ಶ 711 ರಲ್ಲಿ ತಂದೆ ಪ್ರತಾಪ ನಿಧನ ಹೊಂದಿದ ನಂತರ ಚಂದ್ರಾಪಿಡ ರಾಜನಾಗುತ್ತಾನೆ. 8 ವರ್ಷಗಳ ಕಾಲ ಆಳ್ವಿಕೆ ನಡೆಸುವ ಚಂದ್ರಾಪಿಡನನ್ನು ಆತನ ತಮ್ಮನಾದ ತಾರಾಪಿಡ ಮಾಂತ್ರಿಕನ ಸಹಾಯದಿಂದ ಹತ್ಯೆ ನಡೆಸುತ್ತಾನೆ. ಅಧಿಕಾರಕ್ಕೇರುವ ತಾರಾಪಿಡ ಬಹಳ ಕ್ರೂರಿ ಮತ್ತು ನಿರ್ದಯಿಯಾಗಿರುತ್ತಾನೆ. ತನ್ನ ಅಣ್ಣನನ್ನು ಹತ್ಯೆ ನಡೆಸಿದ ರೀತಿಯಲ್ಲಿ ತಾರಾಪಿಡನನ್ನು ಓರ್ವ ಬ್ರಾಹ್ಮಣ ಅಧಿಕಾರಿ ಹತ್ಯೆ ನಡೆಸುತ್ತಾನೆ. ನಂತರ ಅಂದರೆ ಕ್ರಿ.ಶ 724 ರಲ್ಲಿ ಲಲಿತಾದಿತ್ಯ ಮುಕ್ತಾಪಿಡ ಸಿಂಹಾಸನವನ್ನೇರುತ್ತಾನೆ. ಚಕ್ರವರ್ತಿ ಲಲಿತಾದಿತ್ಯನ ಆಳ್ವಿಕೆಯನ್ನು ಕಾಶ್ಮೀರದ ಚಿನ್ನದ ಯುಗ ಎಂದು ಬಣ್ಣಿಸಲಾಗುತ್ತದೆ. ಆ ಕಾಲಘಟ್ಟದಲ್ಲಿ ಹಿಂದೂ ಕುಶ್ ದಕ್ಷಿಣದಲ್ಲಿ ಮೂರು ಪ್ರಭಾವಿ ರಾಜವಂಶಗಳಿರುತ್ತವೆ. ಇಂದಿನ ಕಾಬೂಲ್ ಪ್ರಾಂತ್ಯವನ್ನಾಳುತ್ತಿದ್ದ ಕಪೀಶ, ಘಜ್ನಿ ಕೇಂದ್ರಿತವಾಗಿದ್ದ ಜಾಬೂಲಿಸ್ಥಾನ, ಕಾಶ್ಮೀರ ಕೇಂದ್ರಿತವಾಗಿ ಆಳ್ವಿಕೆ ನಡೆಸುತ್ತಿದ್ದ ಕಾರ್ಕೋಟ ವಂಶ. ಈ ಮೂರು ಪ್ರಾಂತ್ಯಗಳ ಮೇಲೆ ಹೂಣರು, ಟಿಬೆಟಿಯನ್ನರು ಆಕ್ರಮಣ ಮಾಡುತ್ತಿರುತ್ತಾರೆ. ಹೂಣರ ಆಕ್ರಮಣದಿಂದ ಗುಪ್ತರ ಪ್ರಭಾವವೂ ಕಡಿಮೆಯಾಗಿರುತ್ತದೆ. ಇದೇ ವೇಳೆ ದೂರದ ಚೀನಾದಲ್ಲಿ ಟಾಂಗ್ ವಂಶದ ರಾಜರು ಆಳ್ವಿಕೆ ನಡೆಸುತ್ತಿರುತ್ತಾರೆ.
ಇತ್ತ ಪಶ್ಚಿಮದಲ್ಲಿ ಅರಬ್ಬರ ಪ್ರಭಾವ ವರ್ಷಗಳೆದಂತೆ ಹೆಚ್ಚಾಗುತ್ತಲೇ ಹೋಗುತ್ತದೆ. ಕ್ರಿ.ಶ 632 ರಲ್ಲಿ ಪ್ರವಾದಿ ಮೊಹಮ್ಮದರ ನಿಧನದ ನಂತರ ಖಲೀಫ ಸ್ಥಾನಕ್ಕೆ ಅಂತಃಕಲಹಗಳಿದ್ದರೂ, ಅರಬ್ಬರು ಬೈಜಾಂಟೀನ್ ಭಾಗವಾದ ಇಂದಿನ ಇರಾಕ್, ಸಿರಿಯಾ, ಹಾಗೆಯೇ ಪ್ರಾಚೀನ ಪರ್ಷಿಯಾಗಳ ಮೇಲೆ ತಮ್ಮ ಹತೋಟಿ ಸಾಧಿಸುತ್ತಾರೆ ಮಾತ್ರವಲ್ಲ ಎಲ್ಲೆಡೆಯೂ ಇಸ್ಲಾಂ ಧರ್ಮ ಬೆಳೆಯುವಂತೆ ಮಾಡುತ್ತಾರೆ. ಅರಬ್ ಶಾಹಿಗಳ ಆಕ್ರಮಣದಿಂದ ಪ್ರಾಚೀನ ಸಂಸ್ಕೃತಿಯ ಕುರುಹುಗಳು ಪಶ್ಚಿಮದಲ್ಲಿ ಮಾಸಿಹೋಗುತ್ತಿರುತ್ತವೆ. ದೂರದ ಪ್ರಾಂತ್ಯಗಳನ್ನು ಜಯಿಸಬೇಕು ಮಾತ್ರವಲ್ಲ ಅಲ್ಲೆಲ್ಲಾ ಇಸ್ಲಾಂ ಧರ್ಮವನ್ನು ಸಂಸ್ಥಾಪಿಸುವ ಲಕ್ಷ್ಯ ಖಲೀಫನದ್ದಾಗಿರುತ್ತದೆ. ಭಾರತದ ಭಾಗವಾಗಿದ್ದ ಸಿಂಧ್ ಪ್ರಾಂತ್ಯದ ಮೇಲೂ ಖಲೀಫ ಕಳುಹಿಸಿದ್ದ ದೊಣ್ಣೆನಾಯಕನಾದ ಕಾಸಿಂ ದಾಳಿ ಮಾಡುತ್ತಾನೆ. ಮೊದಲಿಗೆ ಇದಕ್ಕೆ ತಕ್ಕ ಪ್ರತಿರೋಧ ವ್ಯಕ್ತಪಡಿಸಿ ಕಾಸಿಂನನ್ನು ಹಿಮ್ಮೆಟ್ಟಿಸಿದ್ದ ಇಲ್ಲಿನ ಸ್ಥಳೀಯ ರಾಜ ಚಾಚನಾಮಾ, ನಂತರದಲ್ಲಿ ದೇಬಲ್ ಎಂಬಲ್ಲಿ ನಡೆದ ಘನಘೋರ ಯುದ್ಧದ ಪರಿಣಾಮ ಸೋಲಬೇಕಾಗುತ್ತದೆ. ಈತನ ನಂತರ ಅಧಿಕಾರಕ್ಕೇರಿದ ದಾಹರ್ ಇಲ್ಲಿನ ಕೊನೆಯ ಹಿಂದೂ ಅರಸನಾಗಿರುತ್ತಾನೆ. ಬೌದ್ಧರು ಮತ್ತು ಹಿಂದೂಗಳು ವಾಸಿಸುತ್ತಿದ್ದ ಪ್ರದೇಶದಲ್ಲಿ ಮಾರಣಾಂತಿಕ ದಾಳೀ ನಡೆಯುತ್ತದೆ ಮಾತ್ರವಲ್ಲ ಎಲ್ಲಾ ಗಂಡಸರನ್ನು ಹತ್ಯೆ ಮಾಡಲಾಗುತ್ತದೆ! ನಂತರ ಸುಂದರಿ ಹೆಣ್ಮಕ್ಕಳನ್ನು ಅರಬ್ ನಾಡಿಗೆ ಒಯ್ಯಲಾಗುತ್ತದೆ. ದಾಹರನ ಓರ್ವ ಪತ್ನಿಯನ್ನು ಕಾಸಿಂ ಬಲವಂತವಾಗಿ ಮದುವೆಯಾಗುತ್ತಾನೆ. ಮತ್ತೋರ್ವೆ ರಾಣಿ ಬಾಯಿ ತನ್ನ ಇತರೆ ರಜಪೂತ ಹೆಣ್ಮಕ್ಕಳ ಜೊತೆಯಲ್ಲಿ ಚಿತಾಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಈತನ ಈರ್ವರು ಹೆಣಕ್ಕಳನ್ನು ಖಲೀಫನಲ್ಲಿಗೆ ಕಳುಹಿಸಲಾಗುತ್ತದೆ. ದೊರೆ ದಾಹರನ ಮರಣದ ನಂತರ ಜಯಸಿಂಹ ಕಾಶ್ಮೀರಕ್ಕೆ ಓಡಿ ಹೋಗುತ್ತಾನೆ. ಜಯಸಿಂಹನ ಮೇಲೆ ಕೋಪಗೊಂಡಿದ್ದ ಕಾಸಿಂ ಆತನನ್ನು ಸೆರೆಹಿಡಿಯಲು ಕಾಶ್ಮೀರದತ್ತ ಲಗ್ಗೆ ಇಡುತ್ತಾನೆ. ಜಲಂಧರ ತಲುಪುತ್ತಿದ್ದಂತೆ ಕಾಸಿಂನನ್ನು ಚಂದ್ರಾಪಿಡ ಸಿಂಹವು ನರಿಯನ್ನು ಓಡಿಸಿದಂತೆ ಓಡಿಸುತ್ತಾನೆ.
ಚಕ್ರವರ್ತಿ ಲಿಲಿತಾದಿತ್ಯನ ದಿಗ್ವಿಜಯ
8 ನೇ ಶತಮಾನದಲ್ಲಿ ದಕ್ಷಿಣದ ಆದಿ ಶಂಕರಾಚಾರ್ಯರು ದೇಶದ ಉದ್ದಗಲ ಸಂಚರಿಸಿ ಧಾರ್ಮಿಕ ದಿಗ್ವಿಜಯ ಸಾಧಿಸಿದರೆ, ಉತ್ತರದ ಕಾಶ್ಮೀರದಲ್ಲಿ ಆಳುತ್ತಿದ್ದ ಚಕ್ರವರ್ತಿ ಲಲಿತಾದಿತ್ಯ ಹಲವು ರಾಜ್ಯಗಳನ್ನು ಕಬಳಿಸಿ, ಬಾಹ್ಯ ಆಕ್ರಮಣವನ್ನು ಮೆಟ್ಟಿ ನಿಂತು, ಭೌತಿಕ ಮತ್ತು ಸಾಂಸ್ಕೃತಿಕ ದಿಗ್ವಿಜಯ ಯಾತ್ರೆಗೆ ಭೂಮಿಕೆ ಹಾಕಿದ್ದ. ಕಾಸಿಂನ ನಂತರ ಹೊಸದಾಗಿ ಸಿಂಧ್ ಮುಖ್ಯನಾಗಿ ನೇಮಕಗೊಂಡ ಜುನಾಯದ್ ಅಲ್ ಮುರ್ರಿ ಪಂಜಾಬ್ ಗಡಿಯ ಮೂಲಕ ಕಾಶ್ಮೀರ ಕಬಳಿಕೆಯ ಪ್ರಯತ್ನ ಮಾಡುತ್ತಾನೆ. ಕೇವಲ ಕಾಲಾಳುಗಳನ್ನು ಮಾತ್ರ ಹೊಂದಿದ್ದ ಜುನಾಯದ್ ನ ಸೈನಿಕರು ಲಲಿತಾದಿತ್ಯನ ಆನೆ ದಳ ಮತ್ತು ಅಶ್ವದಳದ ಎದುರು ಮಂಡಿಯೂರಬೇಕಾಗುತ್ತದೆ. ಲಲಿತಾದಿತ್ಯನ ಎದುರು ಗೆಲ್ಲುವುದು ಕಷ್ಟ ಎಂದರಿತ ಜುನಾಯದ್ ಕಚ್, ರಾಜಸ್ಥಾನ, ಜೋಧಪುರದ, ಬರೂಚ್ ಸಹಿತ ಗುಜರಾತ್ ನತ್ತ ದೃಷ್ಠಿ ನೆಡುತ್ತಾನೆ. ಇದೇ ಸಂದರ್ಭ ದಕ್ಷಿಣದ ಪ್ರಾಂತ್ಯಗಳಲ್ಲಿ ಹಲವು ಹಿಂದೂ ಸಂಸ್ಥಾನಗಳು ಆಳುತ್ತಿರುತ್ತವೆ. ಗುರ್ಜರ ಪ್ರತಿಹಾರ ದೊರೆ ನಾಗಭಟ, ಮೇವಾರದ ಬಪ್ಪಾ ರಾವಲ್ ಸಮರ್ಥ ಮತ್ತು ಬಹಳ ಗಟ್ಟಿಯಾದ ಅರಸು ಮನೆತನಗಳಾಗಿರುತ್ತವೆ. ಕ್ರಿ.ಶ 730 ರ ಸುಮಾರಿಗೆ ದಕ್ಷಿಣದತ್ತ ಮುಖ ಮಾಡುವ ಅರಬಶಾಹಿ ದೊರೆಗಳ ವಿರುದ್ಧ ಸಿಡಿದೇಳುವ ಸಂಸ್ಥಾನಗಳಿಗೆ ಲಲಿತಾದಿತ್ಯ ತನ್ನ ಸಹಾಯವನ್ನು ನೀಡುತ್ತಾನೆ. ಪುಲಿಕೇಶಿ ರಾಜ, ದಕ್ಷಿಣದ ಚಾಲುಕ್ಯ ದೊರೆ ವಿಕ್ರಮಾದಿತ್ಯ, ರಾಷ್ಟ್ರಕೂಟರ ದಂತಿದುರ್ಗರೂ ಒಂದಾಗುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ದೊರೆ ಯಶೋವರ್ಮನೊಂದಿಗೆ ವೈಮನಸ್ಸಿದ್ದರೂ ಟಿಬೆಟ್ ವಿರುದ್ಧದ, ಹೂಣರ ವಿರುದ್ಧದ ಹೋರಾಟಗಳಲ್ಲಿ ಚಕ್ರವರ್ತಿ ಲಲಿತಾದಿತ್ಯನ ಸೈನಿಕರು ಒಂದಾಗುತ್ತಾರೆ.
ಇಂದಿನ ಗಿಲ್ಗಿಟ್, ಬಾಲ್ಟಿಸ್ಥಾನದ ಸ್ಕರ್ದು, ಕಶ್ಗರ್(ಚಿತ್ರಾಲ್) ಲಲಿತಾದಿತ್ಯನ ಕಾಶ್ಮೀರ ಸಾಮ್ರಾಜ್ಯದ ಭಾಗವಾಗಿರುತ್ತವೆ. ಇದರ ಹೊರತಾಗಿ, ಗೌಡ ದೇಶ ಅಂದರೆ ಇಂದಿನ ಬಂಗಾಳ, ಮಗಧ ಅಂದರೆ ಇಂದಿನ ಬಿಹಾರ, ಥಾಣೆಸರ ಅಂದರೆ ಇಂದಿನ ಹರ್ಯಾಣ, ಹಾಗೆಯೇ ಮೆರ ದೇಶ ಅಂದರೆ ಇಂದಿನ ರಾಜಸ್ಥಾನದ ಕೆಲ ಭಾಗಗಳು ಚಕ್ರವರ್ತಿ ಲಲಿತಾದಿತ್ಯನ ಅಧೀನದಲ್ಲಿರುತ್ತವೆ. ಪ್ರಸಿದ್ಧ ಕವಿಗಳಾದ ವಾಕ್ಪತಿ, ಭವಭೂತಿ, ಕಮಲಾಯುಧ, ಅಭಿನವಗುಪ್ತನ ಪೂರ್ವಜನಾದ ಅತ್ರಿಗುಪ್ತನೂ ಲಲಿತಾದಿತ್ಯನ ಆಸ್ಥಾನ ವಿದ್ವಾಂಸನಾಗಿರುತ್ತಾನೆ. ಇವೆರಲ್ಲರೂ ಇದಕ್ಕೂ ಮೊದಲು ಕನೌಜದ ರಾಜ ಯಶೋವರ್ಮನ ಆಸ್ಥಾನದಲ್ಲಿರುತ್ತಾರೆ. ಇಲ್ಲಿ ಪ್ರಧಾನವಾದ ಅಂಶವೆಂದರೆ ರಾಯ ಲಲಿತಾದಿತ್ಯ ಹಲವು ಪ್ರಾಂತ್ಯಗಳನ್ನು ಗೆದ್ದ ನಂತರ ತಾನು ಶೇಖರಿಸಿದ ಅಪಾರ ಸಂಪತ್ತನ್ನು ದೇಗುಲಗಳ ನಿರ್ಮಾಣಕ್ಕೆ ಬಳಸುತ್ತಾನೆ. ಈತನ ರಾಜಧಾನಿಯಾದ ಪರಿಹಾಸಪುರವು ಇಂದಿನ ಕಾಶ್ಮೀರದಿಂದ ಕೇವಲ 20 ಕಿ.ಮೀ ಅಂತರದಲ್ಲಿದೆ. ಪರಿಹಾಸಪುರವೆಂದರೆ ಆನಂದ ನಗರಿ ಅಥವಾ ಆನಂದ ಪುರಿ ಎಂದೂ ಅರ್ಥೈಸಬಹುದಾಗಿದೆ. ಇಲ್ಲಿ ಈತನು ಮಾರ್ತಾಂಡ ಸೂರ್ಯ ದೇಗುಲ, ಪರಿಹಾಸ ಕೇಶವ, ಮುಕ್ತ ಕೇಶವ, ಗೋವರ್ಧನ, ಮಹಾವರಾಹ ದೇಗುಲಗಳು ಸಹಿತ ಬೌದ್ಧ ವಿಹಾರಗಳನ್ನು ನಿರ್ಮಿಸುತ್ತಾನೆ. ಮುಕ್ತ ಕೇಶವ ದೇವರ ಮೂರ್ತಿ ಸಂಪೂರ್ಣ ಚಿನ್ನದಿಂದ ನಿರ್ಮಿಸಲ್ಪಟ್ಟಿದ್ದು 84,000 ತೋಲ ಅಂದರೆ 840 ಕೆ.ಜಿ ತೂಕವಿರುತ್ತದೆ. ಪರಿಹಾಸಪುರ ಕೇಶವನ ಮೂರ್ತಿಯು ಸಂಪೂರ್ಣ ಬೆಳ್ಳಿಯಿಂದ ನಿರ್ಮಿಸಲ್ಪಡುತ್ತದೆ ಮತ್ತು ಇದು 3400 ಕೆ.ಜಿ ತೂಕವಿರುತ್ತದೆ. ಇಷ್ಟು ಮಾತ್ರವಲ್ಲದೆ ಈತ ನಿರ್ಮಿಸಿದ ವಿಹಾರದಲ್ಲಿದ್ದ ಬುದ್ಧನ ಮೂರ್ತಿಯು 62000 ಕಿ.ಗ್ರಾಂ ತೂಕದ ತಾಮ್ರದಿಂದ ನಿರ್ಮಿಸಲ್ಪಟ್ಟಿರುತ್ತದೆ.
ಇಂತಹ ಮಹಾನ್ ಚಕ್ರವರ್ತಿ, ದೊರೆಗಳ ಸಾಹಸಗಾಥೆಗಳು ಇಂದಿನ ಯುವ ಸಮೂಹಕ್ಕೆ ಸ್ಪೂರ್ತಿಯಾಗಬೇಕು. ಇವು ಕೇವಲ ಕಥೆಗಳಲ್ಲ, ದೇಶದ ಪರಂಪರೆ ಸಂಸ್ಕೃತಿಯ ಒಳನೋಟಗಳು. ಜೈ ಹಿಂದ್
✍️ ವಿವೇಕಾದಿತ್ಯ
(ಆಕರ: ವಿಕ್ರಂ ಸಂಪತ್ ಅವರ BRAVEHEARTS OF BHARAT)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.