ಬೆಳಗಾವಿ: ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ “ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ” ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು ಮತ್ತು ಕನ್ನಡ ಭಾಷೆಯ ಬೆಳವಣಿಗೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಂಸತ್ತಿನ ಮುಂಗಾರು ಅಧಿವೇಶನದ ವಿಶೇಷ ವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಆಚಾರ್ಯ ವಿನೋಬಾ ಭಾವೆ ಅವರು ಕನ್ನಡ ಲಿಪಿಯನ್ನು ‘ವಿಶ್ವದ ಲಿಪಿಗಳ ಮಹಾರಾಣಿ’ ಎಂಬ ಬಿರುದು ನೀಡಿದ್ದರು. ಇಲ್ಲಿಯವರೆಗೆ ಕನ್ನಡ ಭಾಷೆಯ ಸಾಹ್ಯಿತಿಕ ವಿಭಾಗದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ಕನ್ನಡ ಭಾಷೆಯು ಸುಮಾರು 3000 ವರ್ಷಗಳಿಗಿಂತ ಹೆಚ್ಚು ದೀರ್ಘ ಇತಿಹಾಸವನ್ನು ಹೊಂದಿದ್ದು, 6.5 ಕೋಟಿಗಿಂತ ಹೆಚ್ಚು ಜನ ಕನ್ನಡವನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಿದ್ದಾರೆ ಮತ್ತು ಕನ್ನಡ ಭಾಷೆ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ಭಾಷೆಗೆ 2008 ರಲ್ಲಿ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಲಾಗಿದೆ. ಹೀಗಾಗಿ ಭಾಷೆಯ ಬೆಳವಣಿಗೆ ಮತ್ತು ಸಂಶೋಧನೆಗಾಗಿ 2011 ರಲ್ಲಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದೆ ಎಂದರು.
ಕನ್ನಡ ಭಾಷೆಯ ಅಧ್ಯಯನ ಮತ್ತು ಸಂಶೋಧನೆಯನ್ನು ಉತ್ತೇಜಿಸಲು, ಕರ್ನಾಟಕ ಸರ್ಕಾರವು ಶಾಸ್ತ್ರೀಯ ಕನ್ನಡ ಅಧ್ಯಯನಕ್ಕಾಗಿ ಶ್ರೇಷ್ಠತೆಯ ಕೇಂದ್ರದ ಶಾಶ್ವತ ಕ್ಯಾಂಪಸ್ಗಾಗಿ ಸ್ಥಳವನ್ನು ಸಹ ಮಂಜೂರು ಮಾಡಿದೆ. ಆದರೆ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಇನ್ನೂ ಸ್ವಾಯತ್ತ ಸ್ಥಾನಮಾನವನ್ನು ನೀಡಲಾಗಿಲ್ಲ, ಇದಕ್ಕಾಗಿ 2020 ರಲ್ಲಿ ಕರ್ನಾಟಕ ಸರ್ಕಾರವೂ ಕೂಡ ಒತ್ತಾಯ ಮಾಡಿದೆ. ಕನ್ನಡ ಭಾಷೆಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಶಾಸ್ತ್ರೀಯ ಕನ್ನಡದ ಶ್ರೇಷ್ಠ ಅಧ್ಯಯನ ಕೇಂದ್ರಕ್ಕೆ ತಮಿಳು ಭಾಷೆಯಂತೆ ಸ್ವಾಯತ್ತ ಸ್ಥಾನಮಾನವನ್ನು ತಕ್ಷಣವೇ ನೀಡಬೇಕು ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಈ ಭವ್ಯವಾದ ಭಾಷೆಯ ಸಂಶೋಧನೆ ಮತ್ತು ಅಧ್ಯಯನಕ್ಕೆ ಪ್ರೇರೇಪಿಸಬೇಕೆಂದು ನಾನು ಸರ್ಕಾರ ಮತ್ತು ಶಿಕ್ಷಣ ಸಚಿವಾಲಯವನ್ನು ವಿನಮ್ರವಾಗಿ ವಿನಂತಿಸುವುದಾಗಿ ತಿಳಿಸಿದರು.
ಈ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ನೀಡುವುದರಿಂದ ಕನ್ನಡ ಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳಾಗಿ ಹೆಚ್ಚು ಪುಸ್ತಕಗಳು ಮತ್ತು ಸಾಹಿತ್ಯಗಳ ಪ್ರಕಟಣೆಗಳು ಹೆಚ್ಚಾಗಲಿವೆ ಎಂದು ಸಂಸದ ಈರಣ್ಣ ಕಡಾಡಿ ಅವರು ಸರ್ಕಾರಕ್ಕೆ ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.