ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದ ಪರಮಪೂಜ್ಯ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಭೀಕರ ಹತ್ಯೆಯ ಹಿಂದಿರುವ ಶಕ್ತಿಗಳಿಗೆ ಶಿಕ್ಷೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಹತ್ಯೆಯಾದ, ಶ್ರೀ ಕಾಮಕುಮಾರನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ ನಳಿನ್ಕುಮಾರ್ ಕಟೀಲ್ ಅವರ ನೇತೃತ್ವದ ಸತ್ಯಶೋಧನಾ ಸಮಿತಿ ಮಾಹಿತಿ ಪಡೆಯಿತು. ಬಳಿಕ ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ನಳಿನ್ಕುಮಾರ್ ಕಟೀಲ್ ಅವರು, ದೇಹವನ್ನು 30 ಕಿಮೀ ಒಯ್ದು ಚಿಂದಿಚಿಂದಿ ಮಾಡಿದ್ದಾರೆ. ಕೊಳವೆಬಾವಿಯೊಳಗೆ ಹಾಕಿದ್ದು, 2 ದಿನಗಳ ಬಳಿಕ ವಿಷಯ ಹೊರಬಂದಿದೆ. ಇದರ ಹಿಂದೆ ಯಾವುದಾದರೂ ಶಕ್ತಿಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸುವುದಾಗಿ ತಿಳಿಸಿದರು. ಇದರ ಹಿಂದಿರುವ ಯಾವುದೇ ಶಕ್ತಿಯ ಬಂಧನ, ಕಠಿಣ ಶಿಕ್ಷೆ ಆಗಬೇಕೆಂದು ಬಿಜೆಪಿ ಒತ್ತಾಯಿಸುವುದಾಗಿ ಹೇಳಿದರು.
ಒಬ್ಬ ಸಂತರ ಹತ್ಯೆ ಆದಾಗ ಎಲ್ಲ ಪಕ್ಷಗಳಿಗೆ ಜವಾಬ್ದಾರಿ ಇದೆ. ಸಂತರು, ಮಠಾಧೀಶರು ಈ ಭೀಕರ ಹತ್ಯೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಸಮಾಜದಲ್ಲಿ ಎಲ್ಲರಿಗೂ ವಿಶ್ವಾಸ ಒದಗಿಸಲು ಸ್ಪಷ್ಟ, ಪಾರದರ್ಶಕ ತನಿಖೆ ಮಾಡಬೇಕು ಎಂದ ಅವರು, ಒಂದು ಹೆಸರನ್ನು ವಿಳಂಬವಾಗಿ ಎಫ್ಐಆರ್ನಲ್ಲಿ ಸೇರಿಸಿದ್ದರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ಪಾರದರ್ಶಕವಾಗಿ ತನಿಖೆ ಮಾಡಿ ಸಂಶಯ ನಿವಾರಿಸಿ ಎಂದು ಅವರು ಒತ್ತಾಯಿಸಿದರು. ಪೊಲೀಸರ ಮೇಲೆ ವಿಶ್ವಾಸ ಇಲ್ಲದ ಕಾರಣ ಹಿಂದೆ ಹರ್ಷ ಮತ್ತು ಪ್ರವೀಣ್ ನೆಟ್ಟಾರ್ ಅವರ ಕೊಲೆಯ ತನಿಖೆಗಳನ್ನು ಎನ್ಐಎಗೆ ನೀಡಿರಲಿಲ್ಲ. ಅಂತರಜಿಲ್ಲೆ ಆರೋಪಿಗಳಿರುವ ಸಾಧ್ಯತೆ ಗಮನಿಸಿ ಮತ್ತು ಕೃತ್ಯದ ಹಿಂದಿನ ಎಲ್ಲ ಶಕ್ತಿಗಳನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ತನಿಖೆಯನ್ನು ಹಸ್ತಾಂತರ ಮಾಡಿದ್ದೆವು. ಇವರೊಬ್ಬ ಶ್ರೇಷ್ಠ ಸಂತ, ವಿದ್ವಾಂಸ. ಘಟನೆಯ ಆಗುಹೋಗು, ಒಳ- ಹೊರ ವಿಚಾರಗಳು ಹೊರಬರಬೇಕಿದೆ. ಇಲ್ಲಿ ಸಂಶಯ ನಿವಾರಣೆಗೆ ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು. ನಾವು ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳಬಾರದು. ಹಣಕಾಸಿನ ವ್ಯವಹಾರದ ಕುರಿತಂತೆ ಕೂಲಂಕಷ ತನಿಖೆ ಆಗಬೇಕಿದೆ. ಎರಡೇ ವ್ಯಕ್ತಿಗಳಿಂದ ಆಗಿದೆಯೇ? ಇಬ್ಬರಿಂದಲೇ ಇಂಥ ಕೃತ್ಯ ಮಾಡಲು ಸಾಧ್ಯವೇ ಎಂಬ ಕುರಿತು ಪರಿಪೂರ್ಣ ತನಿಖೆ ನಡೆಸಲು ಅವರು ಆಗ್ರಹಿಸಿದರು. ಜನರ ಮನಸ್ಸಿನ ಸಂಶಯವೂ ನಿವಾರಣೆ ಆಗಬೇಕು ಎಂದು ಅವರು ತಿಳಿಸಿದರು.
ಇದು ದೇಶದ ಗಮನ ಸೆಳೆದ ಹತ್ಯೆ. ಎಲ್ಲ ಸಂತರು, ಸ್ವಾಮೀಜಿಗಳಿಗೆ ಭಯ ಶುರುವಾಗಿದೆ. ಎಲ್ಲ ಮಠಾಧಿಪತಿಗಳಿಗೆ, ಮುನಿಗಳಿಗೆ ಆತಂಕದ ಸ್ಥಿತಿ ಬಂದಿದೆ. ಸಂತರು ಭಯದಿಂದ ಇರುವಂತೆ ಆಗಬಾರದು ಎಂದು ಅವರು ನುಡಿದರು.
ಪೊಲೀಸರು ಸೇರಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದೇವೆ. ಬಳಿಕ ಸತ್ಯಶೋಧನಾ ಸಮಿತಿ ತನ್ನ ವರದಿ ನೀಡಲಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಮ್ಮ ವರದಿಯನ್ನು ಮಾಧ್ಯಮಗಳ ಮೂಲಕ ಸಮಾಜದ ಮುಂದಿಡುವುದಾಗಿ ಅವರು ಹೇಳಿದರು.
ಸತ್ಯಶೋಧನಾ ಸಮಿತಿಯ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಳಾ ಸುರೇಶ್ ಅಂಗಡಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ, ಜಿಲ್ಲಾಧ್ಯಕ್ಷರಾದ ಅನಿಲ್ ಬೆನಕೆ, ಡಾ|| ರಾಜೇಶ್ ನೇರ್ಲಿ, ಸಂಜಯ್ ಪಾಟೀಲ್ ಮತ್ತು ರಾಜ್ಯ ವಕ್ತಾರ ಎಂ.ಬಿ. ಜಿರಲಿ ಅವರು ಆಶ್ರಮ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.