ನವದೆಹಲಿ: ಇತ್ತೀಚಿಗೆ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮೂವರು ರೈಲ್ವೇ ಅಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೆ ಅಧಿಕಾರಿಗಳನ್ನ ಸಿಬಿಐ ಬಂಧಿಸಿದ್ದು, ಹಿರಿಯ ಸೆಕ್ಷನ್ ಎಂಜಿನಿಯರ್ ಅರುಣ್ ಕುಮಾರ್ ಮಹಾಂತ, ಮೊಹಮ್ಮದ್ ಅಮೀರ್ ಖಾನ್, ಸೆಕ್ಷನ್ ಎಂಜಿನಿಯರ್ ಮತ್ತು ತಂತ್ರಜ್ಞ ಪಪ್ಪು ಕುಮಾರ್ ಎಂಬುವವರನ್ನು ಸಿಬಿಐ ಬಂಧಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಮತ್ತು 201 ಮತ್ತು ರೈಲ್ವೇ ಕಾಯಿದೆ, 1989 ರ ಸೆಕ್ಷನ್ 153 ರ ಅಡಿಯಲ್ಲಿ ಬಂಧಿಸಲಾಗಿದೆ.
ಬಂಧಿತರ ಹೆಚ್ಚಿನ ವಿಚಾರಣೆಗಾಗಿ ಸಿಬಿಐ ನ್ಯಾಯಾಲಯ ಅವರನ್ನು ಶುಕ್ರವಾರ ಐದು ದಿನಗಳ ಕಸ್ಟಡಿಗೆ ನೀಡಿದೆ. ಹೆಚ್ಚಿನ ತನಿಖೆಗಾಗಿ ಮೂವರನ್ನು ಏಳು ದಿನಗಳ ಕಸ್ಟಡಿಗೆ ಸಿಬಿಐ ಕೋರಿತ್ತು ಆದರೆ ನ್ಯಾಯಾಲಯ ಕೇವಲ ಐದು ದಿನಗಳನ್ನು ಮಾತ್ರ ನೀಡಿದೆ.
ಈ ಹಿಂದೆ ಈ ಭೀಕರ ಅಪಘಾತದ ಕುರಿತು ತನಿಖಾ ವರದಿ ತಯಾರಿಸಿದ್ದ ಅಧಿಕಾರಿಗಳು ಸಿಬ್ಬಂದಿ ಲೋಪದೋಷವೇ ದುರಂತಕ್ಕೆ ಕಾರಣ ಎಂದು ಉಲ್ಲೇಖಿಸಿದ್ದರು. ಈ ವರದಿ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ. ಆದರೆ ಇದೀಗ ಮೂವರು ಅಧಿಕಾರಿಗಳನ್ನು ಬಂಧಿಸುವ ಮೂಲಕ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಮತ್ತಷ್ಟು ಇಂಬು ದೊರೆತಿದೆ.
ಜೂನ್ 2 ರಂದು ನಡೆದ ಟ್ರಿಪಲ್ ರೈಲು ಅಪಘಾತದಲ್ಲಿ ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್ಪ್ರೆಸ್, ಹೌರಾಕ್ಕೆ ಹೋಗುವ ಶಾಲಿಮಾರ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ. ಅಪಘಾತದಲ್ಲಿ 291 ಜನರು ಸಾವನ್ನಪ್ಪಿದರು ಮತ್ತು 1,000 ಪ್ರಯಾಣಿಕರು ಗಾಯಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.