ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷವು ನೀಡಿದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಷರತ್ತುಗಳಿಲ್ಲದೆ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯದ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಕಾಂಗ್ರೆಸ್ನವರು, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಹಾಗೂ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ನಾಡಿನ ಜನತೆಗೆ 5 ಗ್ಯಾರಂಟಿಗಳನ್ನು ಕೊಟ್ಟಿದ್ದರು. ಅಲ್ಲದೆ, ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೊದಲನೇ ಸಂಪುಟ ಸಭೆಯಿಂದ ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ನಿಮ್ಮ ಕುಟುಂಬಕ್ಕೆ ಪ್ರತಿ ತಿಂಗಳೂ ಕನಿಷ್ಠ ರೂ. 10 ಸಾವಿರದಷ್ಟು ಅನುಕೂಲ ಆಗಲಿದೆ ಎಂದು ಜನರಿಗೆ ಭರವಸೆ ಕೊಟ್ಟು ಮೋಸ ಮಾಡಿದ್ದರು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ಮೋಸ, ವಂಚನೆ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗುವುದನ್ನು ಸ್ವಾತಂತ್ರ್ಯಾನಂತರದ 60 ವರ್ಷಗಳಲ್ಲಿ ಮಾಡುತ್ತಲೇ ಬಂದಿದೆ. ಮೊದಲ 60 ವರ್ಷಗಳಲ್ಲಿ ಜಾತಿ, ಜಾತಿ, ಧರ್ಮ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಆಡಳಿತ ಮಾಡಿದ್ದರು. ಬಡವರ ಮೂಗಿಗೆ ತುಪ್ಪ ಸವರಿದರು; ಗರೀಬಿ ಹಠಾವೋ ಮಾಡುವುದಾಗಿ ಹೇಳಿದ್ದರೂ ಬಡತನ ನಿರ್ಮೂಲನೆ, ಬಡವರ ಕಲ್ಯಾಣ, ದೀನದಲಿತರ ಉದ್ಧಾರ ಮಾಡಲಿಲ್ಲ ಎಂದು ತಿಳಿಸಿದರು.
ಜನರಿಗೆ ಸತತವಾಗಿ ಮೋಸ ಮಾಡುತ್ತ ಬಂದ ಕಾಂಗ್ರೆಸ್ ಪಕ್ಷವು ಇವತ್ತು ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಗ್ಯಾರಂಟಿಗಳನ್ನು ಕೊಟ್ಟಿದೆ. ಕುಟುಂಬದ ಯಜಮಾನಿಗೆ 2 ಸಾವಿರ ಕೊಡುವುದಾಗಿ ತಿಳಿಸಿದ್ದರು. ಈಗ ಅತ್ತೆಗೆ ಮಾತ್ರ ಕೊಡುವುದಾಗಿ ಹೇಳುತ್ತಿದ್ದಾರೆ. ಅದೇ ಅತ್ತೆಗೆ 4 ಮಕ್ಕಳಿದ್ದರೆ ಅವರು ಬೇರೆ ಬೇರೆ ಮನೆಯಲ್ಲಿರುತ್ತಾರೆ. ಇದನ್ನು ಗಮನಿಸಿ ಯಾವುದೇ ಷರತ್ತುಗಳಿಲ್ಲದೆ ಪ್ರತಿ ಕುಟುಂಬದ ಯಜಮಾನಿಗೆ 2 ಸಾವಿರ ರೂಪಾಯಿ ಕೊಡಬೇಕು ಎಂದು ಆಗ್ರಹಿಸಿದರು.
ಪದವೀಧರ ನಿರುದ್ಯೋಗಿಗೆ 3 ಸಾವಿರ ಕೊಡುವ ಭರವಸೆ ಕೊಟ್ಟಿದ್ದರು. ಇದೀಗ ಈ ವರ್ಷ ಉತ್ತೀರ್ಣರಾದವರಿಗೆ ಮಾತ್ರ ಎನ್ನುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ದಿನ ಎಷ್ಟು ಜನ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಪಡೆದವರು ಇದ್ದರೋ ಅಂದರೆ ಸುಮಾರು 50 ಲಕ್ಷದಿಂದ 60 ಲಕ್ಷ ಯುವಜನರಿಗೆ 3 ಸಾವಿರ ಮತ್ತು ಒಂದೂವರೆ ಸಾವಿರ ಕೊಡಲೇಬೇಕು ಎಂದು ಒತ್ತಾಯಿಸಿದರು. ಈ ವರ್ಷ ಪಾಸಾದವರಿಗೆ ನಿಮ್ಮ ಪ್ರಣಾಳಿಕೆಯಲ್ಲಿ ಹೇಳಬೇಕಿತ್ತು, ಆದರೆ ಹೇಳಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.
ವಿದ್ಯುತ್ ನನಗೂ ಫ್ರೀ, ನಿಮಗೂ ಫ್ರೀ, ಹಿಂದೆ ಕುಂತವರಿಗೂ ಫ್ರೀ, ಮುಂದೆ ಕುಳಿತವರಿಗೂ ಫ್ರೀ ಎಂದಿದ್ದರು. ಮಹದೇವಪ್ಪಗೂ ಫ್ರೀ; ಮತ್ತೊಬ್ಬರಿಗೂ ಫ್ರೀ ಎಂದು ತಿಳಿಸಿದ್ದರು. ಆದಾಯ ತೆರಿಗೆ ಪಾವತಿಸುವ ತಮಗೂ ಫ್ರೀ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಆದ್ದರಿಂದ ಶರ್ತರಹಿತವಾಗಿ ಎಲ್ಲರಿಗೂ ಉಚಿತ ವಿದ್ಯುತ್ ನೀಡಬೇಕು. ಅದನ್ನು ತಪ್ಪಿಸಬೇಡಿ ಎಂದು ಸಿದ್ದರಾಮಯ್ಯರನ್ನು ಒತ್ತಾಯಿಸಿದರು.
10 ಕೆಜಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳುತ್ತಿದ್ದಾರೆ. ಕೇಂದ್ರಕ್ಕೆ ಯಾಕೆ ಕೇಳುತ್ತೀರಿ ಎಂದು ಪ್ರಶ್ನಿಸಿದರಲ್ಲದೆ, ಮಾರ್ಕೆಟ್ನಲ್ಲಿ ಅಕ್ಕಿ ಬೇಕಾದಷ್ಟು ಸಿಗುತ್ತದೆ. ಖರೀದಿಸಿ ನಾಳೆಯಿಂದಲೇ ವಿತರಣೆ ಆರಂಭಿಸಿ ಎಂದು ಅವರು ಆಗ್ರಹಪೂರ್ವಕವಾಗಿ ನುಡಿದರು. ಉಚಿತ ಬಸ್ ಪ್ರಯಾಣ ಕೊಡುವುದಾಗಿ ಹೇಳಿದ್ದಾರೆ. ಸರಕಾರದ ನಿರ್ಧಾರವನ್ನು ಕಾದು ನೋಡೋಣ ಎಂದು ತಿಳಿಸಿದರು.
ಉಚಿತಗಳ ಗ್ಯಾರಂಟಿ ಜಾರಿ ಮಾಡದಿದ್ದರೆ ನಾಡಿನ ಜನ ಇವರಿಗೆ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ದೀನದಲಿತರಿಗೆ ಶಿಕ್ಷಣ ಕ್ಷೇತ್ರಕ್ಕಾಗಿ ಕೊಡುವ ಅನುದಾನದ ಹಣವನ್ನು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸುವ ಮಾಹಿತಿ ಇದೆ. ಹೀಗೆ ಮಾಡಿದರೆ ದೊಡ್ಡ ಹೋರಾಟ ಆಗಲಿದೆ ಎಂದು ತಿಳಿಸಿದರು.
ದೀನದಲಿತರ ವಿದ್ಯಾಭ್ಯಾಸ, ಊಟ ವಸತಿ, ಸುಸಜ್ಜಿತ ವಸತಿ ಶಾಲೆ ನಿರ್ಮಾಣ, ಹಾಸ್ಟೆಲ್ ನಿರ್ಮಾಣ, ನಿಗಮಗಳ ಮೂಲಕ ಭೂಮಿ ಖರೀದಿಗೆ ಮತ್ತು ಸಾಲ ಸೌಲಭ್ಯಗಳಿಗೆ, ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ಅನುದಾನವನ್ನು ಗ್ಯಾರಂಟಿಗಾಗಿ ಬಳಸಿ ಮೋಸ ಮಾಡಿದರೆ ಈ ದೀನದಲಿತರು ರಸ್ತೆಗೆ ಇಳಿದು ಹೋರಾಡುತ್ತಾರೆ ಎಂದೂ ಅವರು ಎಚ್ಚರಿಕೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.