ಬೆಂಗಳೂರು: ಲೋಕಸಭೆ ಚುನಾವಣೆ ಗೆಲುವಿಗೆ ಪೂರಕವಾಗಿ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ಇರಲಿ ಎಂದು ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ. ಕೆ ಸುಧಾಕರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ರಾಮರಾಜ್ಯದ ಪರಿಕಲ್ಪನೆಯನ್ನು ಈಡೇರಿಸುತ್ತೇವೆ ಎಂದರಲ್ಲದೆ, ಜನಪರ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯದ ಪ್ರಜ್ಞಾವಂತ ಜನತೆ ಸಹಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ 2,141 ಕೋಟಿ ಮೌಲ್ಯದ ಕೋವಿಡ್ ಉಚಿತ ಲಸಿಕೆಯನ್ನು ಕೇಂದ್ರದ ಬಿಜೆಪಿ ಸರಕಾರ ನೀಡಿದೆ. ದೇಶಾದ್ಯಂತ 220 ಕೋಟಿ ಲಸಿಕೆ ಕೊಡಲಾಗಿದೆ. ರಾಜ್ಯದಲ್ಲಿ 12.21 ಕೋಟಿಗೂ ಹೆಚ್ಚು ಲಸಿಕೆ ನೀಡಿದ್ದೇವೆ. ವಿಶ್ವದಲ್ಲೇ ದಾಖಲೆ ಮಟ್ಟದಲ್ಲಿ ಇದು ನಡೆದಿದೆ. 1.15 ಕೋಟಿ ಬೂಸ್ಟರ್ ಡೋಸ್ ಕೊಡಲಾಗಿದೆ ಎಂದು ವಿವರಿಸಿದರು.
ಲಸಿಕೆ ವಿಚಾರದಲ್ಲಿ ವಿಳಂಬಕ್ಕೆ ಕಾಂಗ್ರೆಸ್ ಟೀಕೆ ವ್ಯಕ್ತವಾಗಿತ್ತು. ತುರ್ತು ಮಾತ್ರವಲ್ಲದೆ ವಿಶೇóಷ ಸಂದರ್ಭ ಎಂದು ಮರೆತು ಇಲ್ಲಿವರೆಗೆ ಕಾಂಗ್ರೆಸ್ ರಾಜಕಾರಣ ಬೆರೆಸಿದೆ. ಎಳ್ಳಷ್ಟೂ ಸಹಕಾರ ಕೊಡದೆ ಇರುವುದು ರಾಜ್ಯ ಮತ್ತು ದೇಶದ ಜನತೆಗೆ ಮಾಡಿದ ಘೋರ ಅಪರಾಧ ಎಂದು ಡಾ. ಕೆ ಸುಧಾಕರ್ ಅವರು ಟೀಕಿಸಿದರು.ಲಸಿಕೆ ವಿಷಯದಲ್ಲಿ ಅಪಹಾಸ್ಯ ಮಾಡಿ ಮೋದಿ ಲಸಿಕೆ ಎಂದು ಕರೆದರು.
ಕಾಂಗ್ರೆಸ್ನವರು ಕೆಲವು ಧರ್ಮಗಳ ನಂಬಿಕೆಗೆ ವಿರುದ್ಧ, ವ್ಯತಿರಿಕ್ತವಾಗಿ ವಿಶ್ವಾಸ ಕೆಡಿಸುವ ಕೆಲಸ ಮಾಡಿ ಸಂತಾನಶಕ್ತಿ ಕಳಕೊಳ್ಳುವ ಭೀತಿ ಹುಟ್ಟಿಸಿದ್ದಾರೆ. ಅದನ್ನು ಖಂಡಿಸುತ್ತೇವೆ. ಆರಂಭದಲ್ಲಿ ಅವರು ಲಸಿಕೆ ಪಡೆಯಲಿಲ್ಲ. ಬಳಿಕ ವಿಳಂಬವಾಗಿ ಕ್ಯೂ ನಿಂತು ಲಸಿಕೆ ಪಡೆದರು ಎಂದು ತಿಳಿಸಿದರು. ಲಸಿಕೆಯನ್ನೇ ಪ್ರಶ್ನೆ ಮಾಡಿ ಸಂಶೋಧಕರಿಗೆ ಅಪಮಾನ ಮಾಡುವಂತೆ ರಾಹುಲ್ ಗಾಂಧಿ ನಡೆದುಕೊಂಡರು ಎಂದು ಆಕ್ಷೇಪಿಸಿದರು.
3 ವರ್ಷಗಳ ಹಿಂದೆ ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕ ಕೋವಿಡ್ ದೇಶವನ್ನು ಮತ್ತು ವಿಶ್ವವನ್ನು ಬಾಧಿಸಿತ್ತು. ನಿರ್ದಿಷ್ಟ ಚಿಕಿತ್ಸೆ- ಔಷಧಿ ಇಲ್ಲ ಎಂಬ ಅಂಶ ಎಲ್ಲರನ್ನೂ ಭಯಭೀತರನ್ನಾಗಿ ಮಾಡಿತ್ತು. ಅನೇಕ ವರ್ಷ, ದಶಕಗಳು ತೆಗೆದುಕೊಂಡ ಅನೇಕ ಸಾಂಕ್ರಾಮಿಕಗಳಿದ್ದವು. ಇಂಥ ಆತಂಕಕಾರಿ ಪರಿಸ್ಥಿತಿ, ಲಾಕ್ ಡೌನ್, ಆರ್ಥಿಕ ದುಸ್ಥಿತಿ ಕಾಡುವಂತಾಗಿತ್ತು. ಬಡಜನರು, ಶ್ರಮಿಕರು ತೊಂದರೆಗೆ ಒಳಗಾಗದಂತೆ ಬಿಜೆಪಿ ಸರಕಾರ ನೋಡಿಕೊಂಡಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವ ನಮ್ಮನ್ನು ಕಾಪಾಡಿದೆ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರಕಾರ ಇರಲಿಲ್ಲ. ಅನೇಕ ರಾಜ್ಯಗಳಲ್ಲಿ ಬೇರೆ ಪಕ್ಷಗಳ ಆಡಳಿತ ಇದ್ದರೂ ಮೋದಿ ದಿಟ್ಟವಾಗಿ ಕೋವಿಡ್ ಎದುರಿಸಿದ್ದಾರೆ ಎಂದು ತಿಳಿಸಿದರು.
ವಿಶ್ವಕ್ಕೇ ಮಾದರಿ ಆಗುವಂತೆ ಕಾರ್ಯ ನಿರ್ವಹಣೆ ಜೀವ ಉಳಿಸುವ ಪ್ರಯತ್ನ, ಜನಜೀವನ ಅಸ್ತವ್ಯಸ್ಥ ಆಗದಂತೆ ನೋಡಿಕೊಳ್ಳುವ ಸವಾಲನ್ನು ವಿಶ್ವಕ್ಕೆ ಮಾದರಿಯಾಗಿ ನಿರ್ವಹಣೆ ಮಾಡಿದ್ದಾಗಿ ಡಾ. ಕೆ ಸುಧಾಕರ್ ಅವರು ಮಾಹಿತಿ ನೀಡಿದರು.
ವಸುಧೈವ ಕುಟುಂಬಕಂ ನಾಣ್ಣುಡಿಯಂತೆ ತತ್ವ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪ್ರಧಾನಿಯವರು ಹತ್ತಾರು ಹೊರದೇಶಗಳಿಗೆ ಲಸಿಕೆ ನೀಡಿದ್ದಾರೆ. ಇದು ನಮ್ಮ ಹೃದಯ ಶ್ರೀಮಂತಿಕೆ, ದೇಶದ ಹಿರಿಮೆ, ಗರಿಮೆ ಅನಾವರಣ ಮಾಡಿದೆ ಎಂದು ತಿಳಿಸಿದರು.
ನಮ್ಮ ಜನಸಂಖ್ಯೆ ಸಾಂದ್ರತೆ ಗಮನಿಸಿ, ಮೂಲಸೌಕರ್ಯ ಸಾಕಾಗದು ಎಂದು ಅರಿತ ವಿದೇಶಿ ಮಾಧ್ಯಮಗಳು ಕೋವಿಡ್ ಪರಿಣಾಮಕಾರಿ ನಿರ್ವಹಣೆ ಅಸಾಧ್ಯ; ಭಾರತದಲ್ಲಿ ಲಕ್ಷಾಂತರ ಸಾವು ಸಂಭವಿಸಬಹುದು, ದಾರಿ ದಾರಿಯಲ್ಲಿ ಹೆಣ ನೋಡುವ ಪರಿಸ್ಥಿತಿ ಬರಬಹುದು ಎಂದು ಬಿತ್ತರಿಸಿದ್ದರು. ಆದರೆ, ಮುಂದುವರಿದ ದೇಶಗಳು, ಶ್ರೀಮಂತ, ಅರಿವು ಜ್ಞಾನ ಇದ್ದ ದೇಶಕ್ಕಿಂತ ಮಿಗಿಲಾಗಿ ನಿರ್ವಹಣೆ ಮಾಡಿದ್ದು, ಅದು ಅತ್ಯಂತ ಹೆಮ್ಮೆಯ ವಿಚಾರ ಎಂದರು.
2ನೇ ಅಲೆ ಅತ್ಯಂತ ಅಪಾಯಕಾರಿ ಪ್ರಭೇದವಾಗಿತ್ತು. ಅದನ್ನು ಸಮರ್ಥವಾಗಿ ಎದುರಿಸಿ ನಿರ್ವಹಿಸಿದ್ದೇವೆ. ಕೋವಿಡ್ ನಿರ್ವಹಣೆಗೆ ದೇಶದಲ್ಲಿ ತಜ್ಞರ ಸಮಿತಿ ಮತ್ತು ರಾಜ್ಯದಲ್ಲಿ ತಾಂತ್ರಿಕ ಸಮಿತಿ ಕಾರ್ಯ ನಿರ್ವಹಿಸಿತು. ಲಸಿಕೆ ತಯಾರಿಸಲು ಪ್ರಧಾನಿಯವರು ಸಂಶೋಧಕರು, ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದರು. ಸಂಪೂರ್ಣ ಸಹಕಾರದ ಭರವಸೆ ಕೊಟ್ಟರು. ಜನಜೀವನ ಅಸ್ತವ್ಯಸ್ಥ ಆಗದಂತೆ 80 ಕೋಟಿ ಕುಟುಂಬಗಳಿಗೆ ಆಹಾರಧಾನ್ಯಗಳನ್ನು ಸುಮಾರು 3 ವರ್ಷ ಕಾಲ ಕೊಟ್ಟರು. ಒಟ್ಟು 10 ಕೆಜಿಯನ್ನು ಪ್ರತಿ ಕುಟುಂಬಕ್ಕೆ ನೀಡಿದ್ದೇವೆ. ಅದನ್ನು ಬಿಜೆಪಿ ಸರಕಾರ ಮಾಡಿದೆ. ಬೇರೆಯವರು ಅಲ್ಲ ಎಂದರು.
ಪೋಲಿಯೋ ಲಸಿಕೆ ಭಾರತಕ್ಕೆ ಬರಲು 23 ವರ್ಷ, ಹೆಪಟೈಟಿಸ್ ಬಿ ಲಸಿಕೆ ಲಭಿಸಲು 20 ವರ್ಷ, ಟೆಟನಸ್ ಔಷಧಿ ಸಿಗಲು ಹಲವಾರು ವರ್ಷ ಬೇಕಾಯಿತು. ಆದರೆ, ಕೋವಿಡ್ಗೆ ತ್ವರಿತವಾಗಿ ದೇಶೀಯ 2 ಲಸಿಕೆ ಕಂಡುಹಿಡಿದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ನ ನಡೆ ದೇಶಕ್ಕೆ ಮಾಡಿದ ದ್ರೋಹ. ಎಲ್ಲ ದೇಶಗಳ ಪ್ರಶಂಸೆ ಬಂದರೂ ಹಳೆಯ ಪಕ್ಷವಾದ ಕಾಂಗ್ರೆಸ್ ಮಾತ್ರ ತದ್ವಿರುದ್ಧವಾಗಿ ನಡೆದುಕೊಂಡದ್ದು, ಮೇಕ್ ಇನ್ ಇಂಡಿಯಾ, ಲಸಿಕೆಗೆ ಟೀಕೆ ಮಾಡಿದ್ದಾರೆ. ಇದು ಅತ್ಯಂತ ಖೇದಕರ ಎಂದು ನುಡಿದರು.
ಹಿಂದೆ ಅತ್ಯಂತ ಪ್ರಭಾವಿ ವ್ಯಕ್ತಿಗಳು ಮತ್ತು ಶ್ರೀಮಂತರಿಗೆ ಆರಂಭದಲ್ಲಿ ಲಸಿಕೆ ಕೊಡಲಾಗುತ್ತಿತ್ತು. ಆದರೆ, ಪ್ರಧಾನಿಯವರು ತಿಳಿಸಿದಂತೆ ವೈದ್ಯಕೀಯ ಕ್ಷೇತ್ರ, ನಂತರ ಪೌರಕಾರ್ಮಿಕರಿಗೆ ಲಸಿಕೆ ಕೊಡಲಾಯಿತು. ಇದು ಪಾರದರ್ಶಕ ಕ್ರಮ. ಲಸಿಕಾಕರಣದಿಂದ ಆರ್ಥಿಕ ಪುನಶ್ಚೇತನ ಸಾಧ್ಯವಾಗಿದೆ ಎಂದು ವಿಶ್ಲೇಷಣೆ ಮಾಡಿದರು.
3ನೇ ಅಲೆ ಬಂದಾಗ ಕಾಂಗ್ರೆಸ್ನವರು ಪಾದಯಾತ್ರೆ ಮಾಡಿದ್ದರು. ಆಗ ಕೋವಿಡ್ ಪರೀಕ್ಷೆಗೂ ಸಹಕರಿಸಲಿಲ್ಲ. ಬದಲಾಗಿ ಎಲ್ಲರೂ ಟೀಕಿಸುತ್ತಲೇ ಇದ್ದರು ಎಂದರಲ್ಲದೆ, ಕೋವಿಡ್ ನಿಭಾಯಿಸಲು ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯವನ್ನು ಸಮರೋಪಾದಿಯಲ್ಲಿ ಹೆಚ್ಚಿಸಲಾಯಿತು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳು ಮತ್ತು ಇತರ ಕಡೆ 4- 5 ಸಾವಿರ ಆಕ್ಸಿಜನೇಟೆಡ್ ಬೆಡ್ ಲಭ್ಯವಿತ್ತು. ಒಂದು ವರ್ಷಗಳಲ್ಲಿ ಅದನ್ನು 30 ಸಾವಿರ ಹಾಸಿಗೆಗಳಿಗೆ ಏರಿಸಿದ್ದೇವೆ. ಆಕ್ಸಿಜನ್ ಟ್ಯಾಂಕ್ ಕಡಿಮೆ ಇತ್ತು. ವಿಮಾನಗಳಲ್ಲಿ ಹೊರದೇಶದಿಂದ ತರುವಂತಾಗಿತ್ತು. ಅದನ್ನು ಹೆಚ್ಚಿಸಿದ್ದೇವೆ. ವೆಂಟಿಲೇಟರ್ ಹೆಚ್ಚಿಸಿದ್ದು, 1.12 ಕೋಟಿ ಜನರು ಟೆಲಿ ಕನ್ಸಲ್ಟೇಷನ್ ಮೂಲಕ ಚಿಕಿತ್ಸೆ ಪಡೆದಿದ್ದಾರೆ. ಕೋವಿಡ್ನಿಂದ ಹೊರಬರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.
ಹೊಸ ಪ್ರಭೇದ ಬಂದರೂ ಆಸ್ಪತ್ರೆಗಳ ದಾಖಲಾತಿ, ಮರಣ, ತೀವ್ರತರ ಸಮಸ್ಯೆ ವಿರಳವಾಗಿದೆ. ಇಂಥ ಒಳ್ಳೆಯ ಜೀವ ಉಳಿಸಿದ ಬಿಜೆಪಿ ಸರಕಾರಕ್ಕೆ ಮತ್ತೆ ಅವಕಾಶ ಕೊಡಿ. ಸಮ್ಮಿಶ್ರ ಸರಕಾರ, ಕಾಂಗ್ರೆಸ್ ಪಕ್ಷವು ರಾಜ್ಯಕ್ಕೆ ಶಾಪ. ಆದ್ದರಿಂದ ಅಭಿವೃದ್ಧಿ ಕುಂಠಿತವಾಗಲು ಅವಕಾಶ ಕೊಡಬೇಡಿ. ಬಿಜೆಪಿಗೆ ಸ್ಪಷ್ಟ ಬಹುಮತದ ಜನಾದೇಶ ಕೊಡಿ ಮತ್ತು ಮೋದಿಜಿ ಅವರ ಕೈಗಳಿಗೆ ಶಕ್ತಿ ತುಂಬಬೇಕಿದೆ ಎಂದು ವಿನಂತಿಸಿದರು.
ಕೋವಿಡ್ಗಿಂತ ಹಿಂದಿನ ಆರ್ಥಿಕ ಸ್ಥಿತಿಗೆ ನಾವು ಮರಳಿದ್ದೇವೆ. ವಿಶ್ವದ ಎಲ್ಲ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮ ಆರ್ಥಿಕ ಪುನಶ್ಚೇತನ ಸಾಧ್ಯವಾಗಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.