ಬೆಂಗಳೂರು: ರಾಜ್ಯದ ಬಿಜೆಪಿ ಸರಕಾರವು ಮೀಸಲಾತಿ ಜಾರಿ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ರಾಜ್ಯದ ಪರಿಶಿಷ್ಟ ಜಾತಿ ಸಮುದಾಯಗಳು ವಿಶೇಷವಾಗಿ ಸ್ವಾಗತಿಸಿವೆ. ಈ ಸಂಬಂಧ ಏಪ್ರಿಲ್ 6ರಂದು ಹುಬ್ಬಳ್ಳಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರರನ್ನು ರಾಜ್ಯ ಪರಿಶಿಷ್ಟ ಜಾತಿ ಸಮುದಾಯಗಳ ಒಕ್ಕೂಟವು ಅಭಿನಂದಿಸಲಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಸರಕಾರದ ಕ್ರಮವನ್ನು ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳು ಸ್ವಾಗತ ಮಾಡಿವೆ. ಇದೇ ಕಾರ್ಯಕ್ರಮದಲ್ಲಿ ಸಿಎಂ ಅವರಲ್ಲದೆ, ಮಂತ್ರಿಮಂಡಲದ ಸದಸ್ಯರು, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ಕುಮಾರ್ ಕಟೀಲ್, ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಕ್ಯಾಬಿನೆಟ್ ಉಪ ಸಮಿತಿಯ ಮಾಧುಸ್ವಾಮಿ ಸಮಿತಿ ಸದಸ್ಯರನ್ನು ಅಭಿನಂದಿಸಲಾಗುತ್ತದೆ. ರಾಜ್ಯದ ವಿವಿಧ ಮೋರ್ಚಾಗಳ, ಎಲ್ಲ ವರ್ಗಗಳ ಮುಖಂಡರು, ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಬೇಕೆಂದು ವಿನಂತಿಸಿದರು.
ಹಲವು ದಶಕಗಳ ಹೋರಾಟಕ್ಕೆ ಸಿಕ್ಕಿದ ಗೆಲುವು ಇದಾಗಿದೆ. ಸಾಮಾಜಿಕ ನ್ಯಾಯದ ಪರವಾಗಿ ನಮ್ಮ ಸರಕಾರ ಇದೆ ಎಂದು ತಿಳಿಸಿದರು. ಒಳ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಅನುಮತಿಗಾಗಿ ಕಳುಹಿಸಲಾಗಿದೆ. ಇದನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತೆ ಅವರು ಮನವಿ ಮಾಡಿದರು.
ಒಳ ಮೀಸಲಾತಿ ಸಂಬಂಧ ಕೆಲವೆಡೆ ಇರುವ ಗೊಂದಲಗಳನ್ನು ನಿವಾರಿಸಲಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರು ಈ ಕುರಿತು ಮಾಹಿತಿ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಈ ಸಂಬಂಧ ಸಂಬಂಧಿತರಿಗೆ ಶಿವಮೊಗ್ಗದಲ್ಲಿ ಮಾಹಿತಿ ನೀಡಿದ್ದಾರೆ. ಬಂಜಾರ, ಬೋವಿ ಮತ್ತಿತರ ಸಮಾಜಗಳನ್ನು ಪರಿಶಿಷ್ಟ ಪಟ್ಟಿಯಿಂದ ಹೊರತೆಗೆಯಬೇಕೇ ಎಂದು ಕೇಳಿ ಕಾಂಗ್ರೆಸ್ ಸರಕಾರ ಇದ್ದಾಗ ರಾಷ್ಟ್ರೀಯ ಆಯೋಗವು ಪತ್ರ ಬರೆದಿತ್ತು. ಆದರೆ, ಕಾಂಗ್ರೆಸ್ನವರು ಉತ್ತರ ಕೊಡದೆ ಈ ಕಡತವನ್ನು ಮೂಲೆಗುಂಪು ಮಾಡಿದ್ದರು. ಬಿಜೆಪಿ ಸರಕಾರ, ಬೊಮ್ಮಾಯಿಯವರ ಸಚಿವಸಂಪುಟ ಈ ಸಮಾಜವನ್ನು ಮೀಸಲಾತಿಯಿಂದ ಕೈಬಿಡುವುದಿಲ್ಲ ಎಂದು ನಿರ್ಧರಿಸಿದೆ. ರಾಷ್ಟ್ರೀಯ ಆಯೋಗಕ್ಕೂ ಈ ಕುರಿತು ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರೂ ಈ ವಿಚಾರವನ್ನು ಬೆಂಬಲಿಸಿ ಮೀಸಲಾತಿ ಮುಂದುವರಿಸುವ ನಿರ್ಧಾರವನ್ನು ಪುನರುಚ್ಚರಿಸಿದ್ದಾರೆ. ಅವರ ನಿರ್ಣಯವನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್ ಸರಕಾರವು ತಾಂಡಾಗಳನ್ನು ಕಂದಾಯ ಗ್ರಾಮ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ 7 ವರ್ಷಗಳ ಕಾಲ ಒಂದೇ ಒಂದು ಗ್ರಾಮವನ್ನು ಕಂದಾಯ ಗ್ರಾಮವಾಗಿ ಘೋಷಿಸಲಿಲ್ಲ. ಗಜೆಟ್ ಅಧಿಸೂಚನೆ ಹೊರಡಿಸಲಿಲ್ಲ ಎಂದು ಟೀಕಿಸಿದರು.
ನಮ್ಮ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿಗಳ ಸೂಚನೆಯಂತೆ ಕಂದಾಯ ಸಚಿವರು ಗುಲ್ಬರ್ಗದಲ್ಲಿ 50 ಸಾವಿರಕ್ಕೂ ಹೆಚ್ಚು ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ್ದಾರೆ. ಗಜೆಟ್ ಅಧಿಸೂಚನೆ ಹೊರಡಿಸಿ ಹಕ್ಕುಪತ್ರ ನೀಡಿದ ದಾಖಲೆ ಕೆಲಸವನ್ನು ನಮ್ಮ ಸರಕಾರ ಮಾಡಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತಿತರ ಕಡೆ ಕಂದಾಯ ಗ್ರಾಮ ಪರಿವರ್ತನೆ ಮಾಡಿ ಮತ್ತು ಇಂಥ ಹಕ್ಕುಪತ್ರ ನೀಡುವ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲು ಕಂದಾಯ ಸಚಿವ ಆರ್.ಅಶೋಕ್ ಅವರು ಉದ್ದೇಶಿಸಿದ್ದರು. ಚುನಾವಣೆ ಘೋಷಿಸಿದ್ದರಿಂದ ಶಾಸಕರೇ ಹಕ್ಕುಪತ್ರ ನೀಡಲಿದ್ದಾರೆ. ಬಂಜಾರ, ಬೋವಿ ಸಮುದಾಯದ ತಾಂಡಾಗಳ ಬಂಧುಗಳಿಗೆ ಎಲ್ಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ 2 ಲಕ್ಷ ಹಕ್ಕಪತ್ರ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಹೊಸ ನಿಗಮಗಳನ್ನು ರಚಿಸಿ ಹೆಚ್ಚು ಅನುದಾನ ಕೊಟ್ಟ ಸರಕಾರ ಬಿಜೆಪಿಯದು. ಗೊಂದಲ, ತಪ್ಪು ವ್ಯಾಖ್ಯಾನಗಳಿಗೆ ಕಿವಿಕೊಡದಿರಿ. ಬಿಜೆಪಿ ಸರಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಲಿದ್ದೇನೆ ಎಂದು ತಿಳಿಸಿದರು. ಇದು ಕಣ್ತುಂಬಿಸಿಕೊಳ್ಳುವಂಥ ಕಾರ್ಯಕ್ರಮ ಆಗಲಿದೆ ಎಂದು ವಿವರಿಸಿದರು.
ಒಳಮೀಸಲಾತಿ ವರ್ಗೀಕರಣ ಸಂಬಂಧ ಕಾಂಗ್ರೆಸ್ಸಿನ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸರಕಾರಗಳು ಕೇಂದ್ರದ ಕಾಂಗ್ರೆಸ್ ಸರಕಾರಕ್ಕೆ ಶಿಫಾರಸು ಮಾಡಿದ್ದವು. ಈ ಕುರಿತು ಒಟ್ಟಾಗಿ ಪರಿಶೀಲಿಸಲು ಕೇಂದ್ರ ಸರಕಾರ ಮುಂದಾಗಿದೆ. ಸುಪ್ರೀಂ ಕೋರ್ಟ್ ತೀರ್ಪುಗಳು, ವಿವಿಧ ಆಯೋಗಗಳ ವರದಿಗಳನ್ನು ಅಮಿತ್ ಶಾ ಅವರು ಅಧ್ಯಯನ ಮಾಡುತ್ತಿದ್ದಾರೆ. ಆ ಬಳಿಕ ನಿರ್ಧಾರ ಬರಲಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ತಿದ್ದುಪಡಿ ಮಾಡಬೇಕೆಂದು ಹೇಳುವ ಸಿದ್ದರಾಮಯ್ಯ ಆಗ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು. ಸದಾಶಿವ ಆಯೋಗ ರಚಿಸಿದ್ದೇ ಕಾಂಗ್ರೆಸ್ ಪಕ್ಷ. ಆಗ ಈ ವಿಷಯ ಗೊತ್ತಿರಲಿಲ್ಲವೇ ಎಂದು ಕೇಳಿದರು. ಸುಮ್ಮನೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಅದನ್ನು ಬಿಟ್ಟು ಸಂವಿಧಾನದಡಿ ಯಾವ ರೀತಿ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡದಿರಿ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.