ಬೆಂಗಳೂರು: ಕಲಬುರ್ಗಿಯ ಗೆಲುವು ಕರ್ನಾಟಕದ ಬಿಜೆಪಿ ಜಯಭೇರಿಯ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ಲೇಷಿಸಿದರು.
ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪದ ಮಹಾಸಂಗಮ ಕಾರ್ಯಕ್ರಮದಲ್ಲಿ ಇಂದು ಅವರು ಮಾತನಾಡಿದರು. ವಿಜಯೋತ್ಸವದ ರ್ಯಾಲಿ ಸೇರಿದಂತೆ ಕಾಣುತ್ತಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರ ನೆಲದಲ್ಲಿ ಮೇಯರ್, ಉಪ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪದ ಶುಭ ಸಂಕೇತ ಎಂದ ಅವರು, ಮೋದಿ ಬಂದಿದ್ದರು. ಏನೋ ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗರು ಆರೋಪಿಸಬಹುದು ಎಂದು ತಿಳಿಸಿದರು.
ಯಾತ್ರೆಗೆ ಹೋಗಿ ಬಂದವರ ದರ್ಶನದಿಂದ ಪುಣ್ಯ ಲಭಿಸುತ್ತದೆ. ನನಗೂ ಪುಣ್ಯ ಲಭಿಸಿದೆ. ಯಾತ್ರೆಯ ಸಾಫಲ್ಯಕ್ಕಾಗಿ ಅಭಿನಂದನೆಗಳು ಎಂದ ಅವರು, ಯಾತ್ರೆಗಳ ಮೂಲಕ ಜನವಿಶ್ವಾಸ, ಸಮರ್ಥನೆ ಲಭಿಸಿದೆ. ಅದು ಅಭೂತಪೂರ್ವ, ಅದ್ಭುತ ಎಂದು ತಿಳಿಸಿದರು.
ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಯಾತ್ರೆಯ ಜನಸಮರ್ಥನೆಯನ್ನು ಉಳಿಸಿಕೊಳ್ಳಬೇಕು. ಪ್ರತಿ ಬೂತ್ಗೆ ತೆರಳಿ ನಮ್ಮ ಉತ್ಸಾಹದಿಂದ ಕೆಲಸ ಮಾಡಬೇಕು. ಪ್ರತಿ ಬೂತ್ ಗೆಲ್ಲುವ ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕರ್ತರಿಗೆ ಏಟು ಕೊಡುವ ಮಾಜಿ ಮುಖ್ಯಮಂತ್ರಿ ಜನರನ್ನು ಗೌರವಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಅತ್ಯಂತ ಗೌರವದಿಂದ ಕಾಣುತ್ತೇವೆ. ಇಲ್ಲಿನ ಕಾರ್ಯಕರ್ತರು ನನ್ನ ಅತ್ಯಂತ ಆತ್ಮೀಯ ಮಿತ್ರ, ಸಹೋದರನಂತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ವೈಟ್ಫೀಲ್ಡ್ ಮೆಟ್ರೊ ಲೈನ್ ಉದ್ಘಾಟನೆ ಮಾಡಿದ್ದೇನೆ. ತುಮಕೂರಿನಲ್ಲಿ ಎಚ್ಎಎಲ್ ಫ್ಯಾಕ್ಟರಿ ಉದ್ಘಾಟನೆ ಆಗಿದೆ. ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಲೋಕಾರ್ಪಣೆ ಆಗಿದೆ. ಧಾರವಾಡ ಐಐಟಿ ಉದ್ಘಾಟನೆ ನೆರವೇರಿಸಲಾಗಿದೆ. ಶಿವಮೊಗ್ಗ ವಿಮಾನನಿಲ್ದಾಣ ಜನಸೇವೆಗೆ ಸಿಕ್ಕಿದೆ. ಡಬಲ್ ಎಂಜಿನ್ ಸರಕಾರದ ಜನಸೇವೆಯನ್ನು ಗಮನಿಸಿ ಬಿಜೆಪಿಯನ್ನು ಬೆಂಬಲಿಸಿ ಎಂದು ತಿಳಿಸಿದರು.
ಅಪ್ಪರ್ ಭದ್ರಾ ಯೋಜನೆಗೆ 5,300 ಕೋಟಿ ನೀಡಲಾಗಿದೆ. ಡಬಲ್ ಎಂಜಿನ್ ಸರಕಾರ ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ. 2018ರಲ್ಲಿ ಇಲ್ಲಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ಕನಿಷ್ಠ ಜನರ ಹೆಸರು ಕಳಿಸಿತ್ತು. ಈಗ ಸುಮಾರು 60 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗುತ್ತಿದೆ ಎಂದು ತಿಳಿಸಿದರು. ಡಬಲ್ ಎಂಜಿನ್ ಸರಕಾರ ಇದ್ದರೆ ಡಬಲ್ ಫಾಯಿದಾ ಸಿಗುತ್ತದೆ ಎಂದರು.
ದಲಿತರು, ಆದಿವಾಸಿಗರು, ಮಹಿಳೆಯರು, ಶೋಷಿತರು, ವಂಚಿತರು ಸೇರಿ ಎಲ್ಲರ ಅಭಿವೃದ್ಧಿ ನಮ್ಮ ಸಂಕಲ್ಪ ಎಂದ ಅವರು, ಸ್ವಾರ್ಥಿ ಸಮ್ಮಿಶ್ರ ಸರಕಾರವನ್ನು ಕರ್ನಾಟಕದ ಜನತೆ ನೋಡಿದ್ದಾರೆ. ಅಂಥ ಸರಕಾರದಿಂದ ನಷ್ಟವಾಗಿದೆ. ಕರ್ನಾಟಕಕ್ಕೆ ಬಿಜೆಪಿಯ ಪೂರ್ಣ ಬಹುಮತದ ಸ್ಥಿರ ಸರಕಾರ ಬೇಕಿದೆ ಎಂದರು. ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಯ ಪೂರ್ಣ ಬಹುಮತದ ಸ್ಥಿರ ಸರಕಾರವನ್ನು ಕೊಡಿ ಎಂದು ವಿನಂತಿಸಿದರು.
ಕರ್ನಾಟಕವನ್ನು ಕಾಂಗ್ರೆಸ್ಸಿಗರು ನೇತಾರರ ಎಟಿಎಂ ಮಾಡಲು ಬಯಸುತ್ತಾರೆ. ಕಾಂಗ್ರೆಸ್ ಪಕ್ಷದವರು ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿ ನೀಡಿದ್ದರು. ಜನರನ್ನು ಭ್ರಮಿತರನ್ನಾಗಿ ಮಾಡಿದ್ದರು. ಆದರೆ, ಅವೆಲ್ಲವನ್ನೂ ಮರೆತಿದ್ದಾರೆ ಎಂದು ಆಕ್ಷೇಪಿಸಿದರು. ಸುಳ್ಳು ಹೇಳುವ ಕಾಂಗ್ರೆಸ್ನವರನ್ನು ಸೋಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ಸಿಗರಲ್ಲಿ ಧನಾತ್ಮಕ ಕಾರ್ಯಸೂಚಿ ಇಲ್ಲ. ಅವರು ಮೋದಿಯವರ ಸಾವಿನ ಕನಸು ಕಾಣುತ್ತಾರೆ. ಆದರೆ, ಕರ್ನಾಟಕದ ಜನತೆ ಮೋದಿಯವರ ಕಮಲ ಅರಳಿಸುವ ಕನಸು ಕಾಣುತ್ತಿರುವುದು ಅವರಿಗೆ ತಿಳಿದಿಲ್ಲ ಎಂದು ತಿಳಿಸಿದರು. ಕಮಲ ಸಮೃದ್ಧಿ, ಅಭಿವೃದ್ಧಿಯ, ಮುಂದಡಿಯಿಡುವ ಸಂಕೇತ. ವಿಶ್ವ ಇಂದು ಭಾರತದ ಕಡೆ ನೋಡುತ್ತಿದೆ. ಭಾರತವು ಕರ್ನಾಟಕದತ್ತ ನೋಡುತ್ತಿದೆ ಎಂದು ತಿಳಿಸಿದರು.
ವಿದೇಶಿ ಹೂಡಿಕೆಯಲ್ಲಿ ಕರ್ನಾಟಕ ಅತ್ಯಂತ ಮುಂದಿದೆ. ಇದಕ್ಕಾಗಿ ಅಭಿನಂದನೆಗಳು ಎಂದು ತಿಳಿಸಿದರು. 7 ಮೆಗಾ ಟೆಕ್ಸ್ಟೈಲ್ ಪಾರ್ಕ್ ದೇಶದಲ್ಲಿ ನಿರ್ಮಾಣವಾಗಲಿದ್ದು, ರಾಜ್ಯದಲ್ಲಿ ಒಂದು ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣವಾಗುತ್ತಿದೆ. ಕರ್ನಾಟಕದ ಮೂಲಸೌಕರ್ಯ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಆಗುತ್ತಿದೆ. ಸಂಸ್ಕೃತಿ ಮತ್ತು ತಂತ್ರಜ್ಞಾನದ ಜೊತೆ ಸೇರಿಸಿ ಯುವಜನರಿಗೆ ಹೆಚ್ಚಿನ ಅವಕಾಶ ಸಿಗಲು ಬಿಜೆಪಿ ಸರಕಾರ ಅನಿವಾರ್ಯ. ಈ ಸಂದೇಶವನ್ನು ಪ್ರತಿ ಬೂತ್ಗೆ ತಲುಪಿಸಬೇಕು ಎಂದರು.
ಏಪ್ರಿಲ್ನಲ್ಲಿ ಮತ್ತೆ ಕರ್ನಾಟಕಕ್ಕೆ ಬರಲಿದ್ದೇನೆ. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಪ್ರಕಟಿಸಿದ ಅವರು, ಇಲ್ಲಿನ ಜನರ ಪ್ರೀತಿ, ಅಭಿಮಾನಕ್ಕೆ ಚಿರಋಣಿ ಎಂದು ತಿಳಿಸಿದರು.
ದಾವಣಗೆರೆಗೆ ಬಂದಾಗಲೆಲ್ಲ ನಿಮ್ಮ ಆಶೀರ್ವಾದ ಇಮ್ಮಡಿಯಾಗುತ್ತದೆ. ನಿಮ್ಮೆಲ್ಲರ ದರ್ಶನ ನನಗೆ ಸಂತಸ ತಂದಿದೆ ಎಂದರು. ‘ದಾವಣಗೆರೆಯ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಬಿಜೆಪಿ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದಾವಣಗೆರೆ ನಮ್ಮ ಶಕ್ತಿಯ ಕೇಂದ್ರ. 8 ವರ್ಷಗಳ ಅವಧಿಯಲ್ಲಿ ಮೋದಿಜಿ ಅವರ ನೇತೃತ್ವದಲ್ಲಿ ಕೇಂದ್ರ, ರಾಜ್ಯದ ಬಿಜೆಪಿ ಸರಕಾರವು ಯಡಿಯೂರಪ್ಪ, ಬೊಮ್ಮಾಯಿ ಅವರ ನೇತೃತ್ವದಲ್ಲಿ ಡಬಲ್ ಎಂಜಿನ್ ಸರಕಾರಗಳು ಗಮನಾರ್ಹ ಸಾಧನೆ ಮಾಡಿವೆ. ಅದನ್ನು ಜನರಿಗೆ ತಿಳಿಸಲು ತೆರಳಿದ್ದ 4 ಯಾತ್ರೆಗಳು ಜನಮನ್ನಣೆ ಪಡೆದಿವೆ. ಬಿಜೆಪಿಗೆ ಅಭೂತಪೂರ್ವ ಜಯಭೇರಿ ಖಚಿತವಾಗಿದೆ ಎಂದರು.
ಸಾಮಾಜಿಕ ನ್ಯಾಯ ನೀಡುವ ಕೆಲಸವನ್ನು ಬೊಮ್ಮಾಯಿಯವರ ಸರಕಾರ ನಿನ್ನೆ ಮಾಡಿದೆ ಎಂದು ಅಭಿನಂದನೆ ಸಲ್ಲಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚು ಅನುದಾನ ಕೊಟ್ಟ ಪ್ರಧಾನಿಯವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಬಿಜೆಪಿ 150 ಸ್ಥಾನ ಪಡೆಯಲಿದೆ ಎಂದು ತಿಳಿಸಿದರು.
ಹಿರಿಯ ನಾಯಕ- ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲು ಬೆಂಬಲ ನೀಡಿ ಎಂದು ಮನವಿ ಮಾಡಿದರು. ಇನ್ನು ಎರಡು ತಿಂಗಳು ಬಿಜೆಪಿಯನ್ನು ಸಂಪೂರ್ಣ ಬಹುಮತದ ಜೊತೆ ಅಧಿಕಾರಕ್ಕೆ ತರಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಚುನಾವಣೆಯಲ್ಲಿ ಗೆಲ್ಲುವವರೆಗೆ ಮನೆ ಸೇರುವುದಿಲ್ಲ ಎಂದು ತಿಳಿಸಿದರು.
ಹಣ, ತೋಳಬಲ, ಹೆಂಡದ ಬಲದಿಂದ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ಸಿಗರು ಸುಳ್ಳು ಭರವಸೆ ನೀಡುತ್ತಿದ್ದಾರೆ. ಮೋದಿಜಿ- ರಾಜ್ಯ ಸರಕಾರದ ಸಾಧನೆಯನ್ನು ತಿಳಿಸಿ ಜನರ ಮನವನ್ನು ಗೆಲ್ಲಬೇಕು ಎಂದು ತಿಳಿಸಿದರು. ವಿಜಯ ಯಾತ್ರೆಯ ಆರಂಭವಿದು ಎಂದು ವಿಶ್ಲೇಷಣೆ ಮಾಡಿದರು. ವಿರೋಧ ಪಕ್ಷದ ನಾಯಕರು ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ವಿದ್ಯಾನಿಧಿ, ರೈತ ಶಕ್ತಿ ಯೋಜನೆ, ಶೂನ್ಯ ಸಾಲದ ಮೊತ್ತ ಹೆಚ್ಚಳ ಮಾಡಿದ್ದೇವೆ. ರೈತಪರ, ಯುವಜನರ ಪರ, ಮಹಿಳೆಯರಿಗೆ ಸ್ತ್ರೀಸಾಮಥ್ರ್ಯ ಯೋಜನೆ ಸೇರಿ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ವಿವರಿಸಿದರು. ಕರ್ನಾಟಕವನ್ನು ಸಮರ್ಥವಾಗಿ ಅಭಿವೃದ್ಧಿ ಪರವಾಗಿ ಕಟ್ಟಲು ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಜನಪರ- ಜನಕಲ್ಯಾಣ ಇರುವ ಬಿಜೆಪಿ ಸರಕಾರದ ಸಂಕೇತ ಇಲ್ಲಿ ಕಾಣುತ್ತಿದೆ. ಪಾಕಿಸ್ತಾನದ ಜನರೂ ಮೋದಿಜಿ ಅವರ ನಾಯಕತ್ವ ಬಯಸುತ್ತಿದೆ. ಚೀನಾದ ಪತ್ರಿಕೆಗಳೂ ಇದನ್ನೇ ಹೇಳುತ್ತಿವೆ. ಆದರೆ, ಕಾಂಗ್ರೆಸ್ ನಾಯಕರು ಮೋದಿಜಿ ಕುರಿತು ಹೀಗಳೆಯುವ, ಪ್ರಜಾಪ್ರಭುತ್ವವನ್ನು ಅವಹೇಳನ ಮಾಡುತ್ತಿದ್ದಾರೆ. ದೇಶದ್ರೋಹಿಗಳ ನಾಯಕತ್ವ ನಮಗೆ ಬೇಕೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿಗರಿಗೆ ದೇಶದ ಕಾಳಜಿ, ಗೌರವ ಇಲ್ಲ. ನಮ್ಮ ಕೇಂದ್ರ ಸರಕಾರ ಹಿಂದಿನ ಸರಕಾರಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚು ಅನುದಾನ ಸಿಕ್ಕಿದೆ ಎಂದು ತಿಳಿಸಿದರು. ಹೈವೇ, ರೈಲ್ವೆ, ಅಪ್ಪರ್ ಭದ್ರಾ ಯೋಜನೆ ಸೇರಿ ಅನೇಕ ಯೋಜನೆಗಳಿಗೆ ನಮ್ಮ ಕೇಂದ್ರ ಸರಕಾರ ಹೆಚ್ಚು ಅನುದಾನ ನೀಡಿದೆ ಎಂದು ವಿವರಿಸಿದರು.
ಮೋದಿಜಿ ಅವರ ನಾಯಕತ್ವಕ್ಕೆ ಅಮೇರಿಕವೂ ತಲೆ ಬಾಗುತ್ತಿದೆ. ದೇಶದ ಅಮೃತ ಕಾಲವನ್ನಾಗಿ ಮಾಡುವ ಶಕ್ತಿ ಮೋದಿಜಿ ಅವರಿಗೆ ಇದೆ ಎಂದು ತಿಳಿಸಿದರು. ಬಿಜೆಪಿ ಶಕ್ತಿ, ದಿಗ್ವಿಜಯದ ಸಂಕೇತದಂತೆ ಈ ಬೃಹತ್ ಸಮಾವೇಶ ಕಾಣುತ್ತಿದೆ. ಇಲ್ಲಿ ಬಿಜೆಪಿ ಸುನಾಮಿ ಎದ್ದಿದೆ ಎಂದು ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ಲಭಿಸಲು ಮೋದಿಜಿ ಅವರು ಕಾರಣ. ಜಲಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ನಳ್ಳಿನೀರು ಸಿಗುವಂತಾಗುತ್ತಿದೆ. ಇದು ಜಲಕ್ರಾಂತಿಯ ದೊಡ್ಡ ಸಾಹಸ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಇದನ್ನು ಗಮನಿಸಿ ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.