ಲಂಡನ್: ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆಯ ನಡುವೆ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಟ್ಟಡದ ಮೇಲೆ ಹಿಂದಿನ ರಾಷ್ಟ್ರಧ್ವಜಕ್ಕಿಂತ ದೊಡ್ಡ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ. ಸೋಮವಾರ ರಾಯಭಾರ ಕಚೇರಿಯ ಅಧಿಕಾರಿಗಳು ಪ್ರತಿಭಟನಾಕಾರರಿಗೆ ದಿಟ್ಟ ಪ್ರತಿಕ್ರಿಯೆಯಾಗಿ, ಖಲಿಸ್ತಾನಿ ಬೆಂಬಲಿಗರು ಕಟ್ಟಡದ ಹೊರಗೆ ಕೆಳಕ್ಕೆ ಹಾಕಿದ್ದ ತಿರಂಗಾಗಿಂತ ತುಸು ಚಿಕ್ಕದಾದ ಧ್ವಜವನ್ನು ಕಟ್ಟಡದಲ್ಲಿ ಹಾರಿಸಿದ್ದರು.
ಆದರೆ ಬುಧವಾರ, 2,000 ಕ್ಕೂ ಹೆಚ್ಚು ಖಲಿಸ್ತಾನಿ ಬೆಂಬಲಿಗರು ಮತ್ತೆ ಕಟ್ಟಡದ ಮುಂದೆ ಜಮಾಯಿಸಿ, ಪೊಲೀಸರ ಮೇಲೆ ಶಾಯಿ, ನೀರಿನ ಬಾಟಲಿಗಳು ಮತ್ತು ಬಣ್ಣದ ಪುಡಿಗಳನ್ನು ಎಸೆದಿದ್ದಾರೆ. ಈ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಕಟ್ಟಡದ ದೈತ್ಯಾಕಾರದ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆ.
ಟೆರೇಸ್ನಲ್ಲಿ ಸುಮಾರು 12 ರಾಯಭಾರ ಕಚೇರಿ ಸಿಬ್ಬಂದಿ ಮಾನವ ಸರಪಳಿಯ ರೀತಿ ಉದ್ದನೆಯ ತ್ರಿವರ್ಣ ಧ್ವಜವನ್ನು ಹಿಡಿದಿರುವುದನ್ನು ದೃಶ್ಯಗಳು ತೋರಿಸುತ್ತವೆ.
ಭಾನುವಾರದ ಪ್ರತಿಭಟನೆಯಂತೆ ಬುಧವಾರ ಅಸ್ತವ್ಯಸ್ತ ಪರಿಸ್ಥಿತಿ ನಿರ್ಮಾಣವಾಗಿಲ್ಲ, ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ಗಳನ್ನು ಹಾಕಿ ಪೊಲೀಸ್ ಅಧಿಕಾರಿಗಳು ಕಾವಲು ಕಾಯುತ್ತಿದ್ದರು ಮತ್ತು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ದಾಂಧಲೆ ನಡೆಸಲು ಪ್ರತಿಭಟನಾಕಾರರಿಗೆ ಆಸ್ಪದ ದೊರೆತಿಲ್ಲ.
ದೆಹಲಿಯ ಪೊಲೀಸರು ಬ್ರಿಟಿಷ್ ಹೈಕಮಿಷನ್ನ ಹೊರಗೆ ಟ್ರಾಫಿಕ್ ಬ್ಯಾರಿಕೇಡ್ಗಳನ್ನು ತೆಗೆದುಹಾಕಿದ ಕೆಲವೇ ದಿನಗಳಲ್ಲಿ ಲಂಡನ್ನಲ್ಲಿ ಹೆಚ್ಚುವರಿ ಭದ್ರತೆಯನ್ನು ಭಾರತದ ರಾಯಭಾರ ಕಛೇರಿಗೆ ಒದಗಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.