News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 8th February 2023


×
Home About Us Advertise With s Contact Us

ದೇಶಕ್ಕೆ ಉಜ್ವಲ ಭವಿಷ್ಯ ಕೊಡಲು ಬಿಜೆಪಿ ಬೆಂಬಲಿಸುವಂತೆ ಸಿಎಂ ಕರೆ

ಬೆಂಗಳೂರು: ಸಕಾರಾತ್ಮಕವಾಗಿ ಮತ ಗಳಿಸಿ ಗೆಲುವು ಸಾಧಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ನಡೆದ ಬಿಜೆಪಿ ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿಸಬೇಕಿದೆ. ಅಮಿತ್ ಶಾ ಅವರು ಬಂದಿದ್ದರಿಂದ ನಮ್ಮ ಬಲ ಇಮ್ಮಡಿಯಾಗಿದೆ. ಬಿಜೆಪಿ 2023ರಲ್ಲಿ ಮತ್ತೆ ಅಧಿಕಾರ ಪಡೆಯುವ ವಿಶ್ವಾಸ ಬಂದಿದೆ ಎಂದು ತಿಳಿಸಿದರು.

ದೇಶದಲ್ಲಿ 2 ಸಾವಿರ ಪಕ್ಷಗಳಿವೆ. ಬಿಜೆಪಿ ಸದಸ್ಯರಾಗಿ ಹೆಮ್ಮೆಯಿಂದ ನಾವ್ಯಾಕೆ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಜಗತ್ತಿನ ಅತ್ಯಂತ ದೊಡ್ಡ ಪಕ್ಷ ಬಿಜೆಪಿ. ವಿಚಾರದಲ್ಲೂ ಅದು ದೊಡ್ಡದು. ದೇಶ ಮೊದಲು ಎಂಬ ಚಿಂತನೆ ನಮ್ಮದು ಎಂದು ತಿಳಿಸಿದರು.

ಬೇರೆ ಪಕ್ಷದಲ್ಲಿ ಇರುವವರು ಅಧಿಕಾರಕ್ಕಾಗಿ ಇರುತ್ತಾರೆ. ನಾವು ದೇಶಸೇವೆಗಾಗಿ ಪ್ರಯತ್ನಿಸಿದರೆ, ಅವರ ಪಕ್ಷದವರು ಸೋನಿಯಾ ಶ್ರದ್ಧೆ ಹೊಂದಿದವರು ಎಂದು ಟೀಕಿಸಿದರು. ದೇಶ ಉಳಿಸಿ ದೇಶಕ್ಕೆ ಉಜ್ವಲ ಭವಿಷ್ಯ ಕೊಡಲು ನಾವು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಉತ್ತಮ ನೀತಿ, ಸಿದ್ಧಾಂತ, ಸಮರ್ಥ ನಾಯಕತ್ವ, ಕ್ರಿಯಾಶೀಲ ಸದಸ್ಯರನ್ನು ಬಿಜೆಪಿ ಹೊಂದಿದೆ. ಭಾರತವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕ ಮೋದಿಜಿ ನಮ್ಮ ಜೊತೆಗಿದ್ದಾರೆ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ದೇಶ- ರಾಜ್ಯ ಹಿನ್ನಡೆ ಅನುಭವಿಸಿತ್ತು. ಆದರೆ, ಸಮರ್ಥ ನಿರ್ಧಾರ ಕೈಗೊಳ್ಳುವ ಅತ್ಯುತ್ತಮ ನಾಯಕರು ಬಿಜೆಪಿಯಲ್ಲಿದ್ದಾರೆ ಎಂದು ವಿಶ್ಲೇಷಿಸಿದರು.

ತ್ರಿವಳಿ ತಲಾಖ್ ರದ್ದತಿ, 370 ನೇ ವಿಧಿ ರದ್ದು ಮತ್ತಿತರ ಪ್ರಮುಖ ನಿರ್ಧಾರಗಳನ್ನು ಕೇಂದ್ರವು ಅಮಿತ್ ಶಾ ಅವರ ನೇತೃತ್ವದಲ್ಲಿ ಮಾಡಿದೆ. ಸಿದ್ದರಾಮಯ್ಯ ಆಡಳಿತದ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದರು. ನಾವು ಸಾಲ ಮಾಡಿದ್ದಕ್ಕೆ ಕೋವಿಡ್ ಕಾರಣವಾಯಿತು. ಕೋವಿಡ್ ಇದ್ದರೂ ಆರ್ಥಿಕ ಪ್ರಗತಿ ಸಾಧನೆಗಾಗಿ ನಾವು ಕ್ರಮ ಕೈಗೊಂಡಿದ್ದೇವೆ ಎಂದು ವಿವರಿಸಿದರು.

ಕೇಂದ್ರದ 10 ಹಲವಾರು ಯೋಜನೆಗಳು ನಮ್ಮ ಮುಂದಿವೆ. ರೈಲ್ವೆ, ಬಂದರಿಗೆ ಹೆಚ್ಚಿನ ಶಕ್ತಿ ತುಂಬಿದ್ದಾರೆ. ಎಲ್ಲರ ಮನೆಗೆ ಜಲ ಮಿಷನ್ ಯೋಜನೆ ತಲುಪಿಸಲು ಮೋದಿಜಿ ಮತ್ತು ಬಿಜೆಪಿ ಮುಂದಾಗಿವೆ ಎಂದು ಮೆಚ್ಚುಗೆ ಸೂಚಿಸಿದರು. ಕರ್ನಾಟಕದ 75 ವರ್ಷಗಳ ಆಡಳಿತದಲ್ಲಿ 25 ಲಕ್ಷ ಮನೆಗೆ ನೀರು, ಕಳೆದ 3 ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಹಿಂದೆ ದೌರ್ಭಾಗ್ಯದ ಸರಕಾರ ಇತ್ತು. ಈಗ ಕಾಂಗ್ರೆಸ್‍ನವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ನಾವು ಪುರಾವೆಯೊಂದಿಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಭ್ರಷ್ಟಾಚಾರದ ವಿವರ ಕೊಟ್ಟಿದ್ದೇವೆ. ಎಸಿಬಿ ರಚನೆ ಮಾಡಿದ್ದು ಸಿದ್ದರಾಮಯ್ಯರ ಹಗರಣ ಮುಚ್ಚಿಕೊಳ್ಳಲು; ಲೋಕಾಯುಕ್ತ ಮುಚ್ಚಿದ್ದೂ ಇದೇ ಕಾರಣಕ್ಕಾಗಿ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯರ ಎಲ್ಲ ಕೇಸುಗಳು ಲೋಕಾಯುಕ್ತದ ಮುಂದೆ ಬರಲಿವೆ ಎಂದು ತಿಳಿಸಿದರು.

ಉಚಿತ ವಿದ್ಯುತ್, ರೈತ ವಿದ್ಯಾನಿಧಿ ಸೇರಿ ಕೇಂದ್ರ- ರಾಜ್ಯ ಸರಕಾರಗಳ ಎಲ್ಲ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು. ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದನ್ನು ತಿಳಿಸಬೇಕು ಎಂದು ಮನವಿ ಮಾಡಿದರು. ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ರಾಜ್ಯ ರಾಜಕೀಯದಲ್ಲಿ ನಿನ್ನೆಯಿಂದ ಪರಿವರ್ತನೆ ಆಗಿದೆ. ಕಾಂಗ್ರೆಸ್ ಒಳಗೆ ಮತ್ತು ಜೆಡಿಎಸ್ ಒಳಗೆ ಭಯ- ಆತಂಕ ಆರಂಭವಾಗಿದೆ. ಬಿಜೆಪಿ 150 ಸ್ಥಾನ ಪಡೆಯುವ ಸಂಕಲ್ಪ ಮಾಡಿದ್ದೇವೆ. ಬೆಂಗಳೂರಿನಲ್ಲೂ ಕಾಂಗ್ರೆಸ್ ಕಟ್ಟೆ ಒಡೆದು ಬಿಜೆಪಿ ಗೆಲುವು ಆಗಲಿದೆ ಎಂದು ನುಡಿದರು.

ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಜನಸ್ಪಂದನ, ಸಹಕಾರ ಸಿಕ್ಕಿದೆ. ಹಾಸನದಲ್ಲೂ ನಮ್ಮ ಪತಾಕೆ ಹಾರಲಿದೆ. ಜನಮಾನಸದಲ್ಲಿ ಬಿಜೆಪಿ ಎದ್ದು ನಿಂತಿದೆ. ಶೇ 60ಕ್ಕೂ ಹೆಚ್ಚು ಮತ ಗಳಿಸುವ ಸಂಕಲ್ಪ ನಮ್ಮದಾಗಲಿದೆ ಎಂದು ತಿಳಿಸಿದರು. ಬೂತ್ ವಿಜಯಕ್ಕೆ ಪೂರಕವಾದ ಧ್ವಜಾರೋಹಣ ಮಾಡಬೇಕು. ವಿಜಯ ಸಂಕಲ್ಪ ಅಭಿಯಾನ ಜನವರಿ 21ರಿಂದ 29ರವರೆಗೆ ಮುಂದುವರಿಯಲಿದೆ ಎಂದರು.

ರೈತ ವಿದ್ಯಾನಿಧಿಯಂಥ ಹತ್ತಾರು ಯೋಜನೆಗಳು, ಕೇಂದ್ರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ. ಮನೆಮನೆಗಳಲ್ಲಿ ಈ ಕಾರ್ಯ ನಡೆಯಲಿದೆ ಎಂದು ವಿವರಿಸಿದರು. ಇದೇವೇಳೆ ಸದಸ್ಯತ್ವ ಅಭಿಯಾನ ಮಾಡಬೇಕು. 50 ಲಕ್ಷ ಯುವಕರನ್ನು ಸದಸ್ಯರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು. ಕೇಂದ್ರ- ರಾಜ್ಯದ ಫಲಾನುಭವಿಗಳ ಸಂಪರ್ಕ, ಸಮಾವೇಶ ಮಾಡಿ ಜನರ ಮನ ಒಲಿಸಬೇಕು ಎಂದು ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಉತ್ತರಪ್ರದೇಶ, ಉತ್ತರಾಖಂಡ ಸೇರಿ ಹಲವೆಡೆ ಗೆದ್ದಿರುವ ಉದಾಹರಣೆಗಳು ನಮ್ಮ ಮುಂದಿವೆ. ಬೂತ್ ಅತ್ಯುತ್ತಮ ನಿರ್ವಹಣೆಯು ನಮ್ಮ ಗೆಲುವಿಗೆ ಪ್ರಮುಖ ಸಾಧನ ಆಗಲಿದೆ ಎಂದು ತಿಳಿಸಿದರು.

ಬೂತ್ ಗಟ್ಟಿಗೊಳಿಸಲು ಈ ವಿಜಯ ಅಭಿಯಾನ ಪೂರಕ. ಬೂತ್ ಸಶಕ್ತೀಕರಣದ ಮೂಲಕ ನಾವು ಪಕ್ಷದ ಗೆಲುವಿಗೆ ಮುಂದಾಗಬೇಕು. ಬೂತ್‍ನಲ್ಲಿ ಲೀಡ್ ತರುವ ಸಂಕಲ್ಪ ನಮ್ಮದಾಗಲಿ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಕಾಂಗ್ರೆಸ್ ಭ್ರಷ್ಟಾಚಾರ- ಹಗರಣಗಳದ್ದೇ ಚರ್ಚೆ ಆಗುತ್ತಿತ್ತು. ಇವತ್ತು ಬಿಜೆಪಿ ಸರಕಾರದ ಸಾಧನೆ, ಪಕ್ಷದ ಕಾರ್ಯವನ್ನು ಚರ್ಚಿಸುತ್ತಾರೆ. ಕುಟುಂಬ ರಾಜಕಾರಣವನ್ನು ನಾವು ದೂರ ಇಡುತ್ತೇವೆ ಎಂದು ತಿಳಿಸಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿ, ಬೂತ್ ಅಧ್ಯಕ್ಷರು ಆಯಾ ಬೂತ್‍ನ ಪ್ರಭಾವಿ ವ್ಯಕ್ತಿಗಳನ್ನು ಗುರುತಿಸಬೇಕು. ಪಕ್ಷವು ಬೂತ್‍ನಲ್ಲಿ ಅತಿ ಹೆಚ್ಚು ಮತ ಗಳಿಸುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯದ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಗರಿಷ್ಠ ಶಾಶಕ ಸ್ಥಾನ ಗೆಲ್ಲುವ ಬಿಜೆಪಿ ಕರ್ನಾಟಕ ಮತ್ತು ದೇಶದಲ್ಲಿ ಗೆಲುವನ್ನು ತನ್ನದಾಗಿಸಿಕೊಳ್ಳಲಿದೆ ಎಂದು ತಿಳಿಸಿದರು. ಇನ್ನು 4 ದಶಕಗಳ ಕಾಲ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಗೆಲುವಿಗಾಗಿ ಸಂಕಲ್ಪ ಮಾಡಿ ಎಂದು ನರೇಂದ್ರ ಮೋದಿಜಿ ಹೇಳಿದ್ದಾರೆ. ಅದನ್ನು ಈಡೇರಿಸಲು ಸಿದ್ಧರಾಗಬೇಕು ಎಂದು ತಿಳಿಸಿದರು.

ಮೋದಿಜಿ- ಅಮಿತ್ ಶಾ ಅವರು ಬೆಂಕಿ ಬಿರುಗಾಳಿ ಇದ್ದಂತೆ. ಅವರನ್ನು ತಡೆಯುವ ಶಕ್ತಿ ಕಾಂಗ್ರೆಸ್ಸಿಗರಿಗೆ ಇಲ್ಲ. ರಾಹುಲ್ ಗಾಂಧಿ ಗಡ್ಡ ಬಿಟ್ಟು ಚುನಾವಣೆಯಿಂದ ದೂರ ನಿಂತಿದ್ದಾರೆ ಎಂದು ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top