News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 8th February 2023


×
Home About Us Advertise With s Contact Us

ಭ್ರಷ್ಟಾಚಾರ ಮುಕ್ತ ರಾಜ್ಯಕ್ಕಾಗಿ ಬಿಜೆಪಿ ಗೆಲ್ಲಿಸುವಂತೆ ಅಮಿತ್ ಶಾ ಕರೆ

ಬೆಂಗಳೂರು: ಕುಟುಂಬವಾದ, ಭ್ರಷ್ಟಾಚಾರ ಮುಕ್ತತೆಗಾಗಿ ಬಿಜೆಪಿಗೆ ಪೂರ್ಣ ಬಹುಮತ ಕೊಡಿ. ನಾವು ರಾಜ್ಯವನ್ನು ಸರ್ವತೋಮುಖ ಅಭಿವೃದ್ಧಿ ಕಡೆಗೆ ಒಯ್ಯುತ್ತೇವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ತಿಳಿಸಿದರು.

ಮಂಡ್ಯದ ಎಂ.ಸಿ. ರಸ್ತೆ, ಪ್ರವಾಸಿ ಮಂದಿರ ಹತ್ತಿರದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ಇಂದು ಏರ್ಪಡಿಸಿದ್ದ ಬಿಜೆಪಿ “ಜನಸಂಕಲ್ಪ ಸಮಾವೇಶ”ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಕುಟುಂಬದ ರಾಜಕೀಯ ಪಕ್ಷಗಳು. ಅವು ಭ್ರಷ್ಟತೆಯಿಂದ ಕೂಡಿವೆ. ಕಾಂಗ್ರೆಸ್ ಬಂದಾಗ ದೆಹಲಿಯ ಎಟಿಎಂ ಆಗುತ್ತದೆ. ಜೆಡಿಎಸ್ ಬಂದರೆ ಕುಟುಂಬದ ಎಟಿಎಂ ಆಗುತ್ತದೆ. ರಾಜ್ಯದ ಜನರು ಇವೆರಡು ಪಕ್ಷಗಳಿಂದ ಬೇಸತ್ತಿದ್ದಾರೆ ಎಂದು ನುಡಿದರು.

ಇವೆರಡು ಕೇವಲ ಭ್ರಷ್ಟ ಪಕ್ಷಗಳಲ್ಲ; ಅಪರಾಧಕ್ಕೆ ಪ್ರೋತ್ಸಾಹ ಕೊಡುವ ಪಕ್ಷಗಳಿವು. ಬಿಜೆಪಿ ಅಧಿಕಾರಕ್ಕೆ ಬಂದಾಗ ಇಬ್ಬರು ದಲಿತರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದೆ. ದಲಿತರು, ಆದಿವಾಸಿಗಳು, ದೀನದಲಿತರ ಅಭಿವೃದ್ಧಿಗೆ ಶ್ರಮಿಸಿದೆ. ಜನ್‍ಧನ್ ಮೂಲಕ ಬ್ಯಾಂಕ್ ಖಾತೆ, ಕಿಸಾನ್ ಸಮ್ಮಾನ್ ಮೂಲಕ ಹಣ ನೀಡಿದ್ದೇವೆ. ಮನೆಮನೆಗೆ ವಿದ್ಯುತ್, ಶೌಚಾಲಯ ಒದಗಿಸಿದ್ದೇವೆ. ಮಹಿಳೆಯರ ಗೌರವ ಹೆಚ್ಚಿಸಿದ್ದೇವೆ ಎಂದು ವಿವರಿಸಿದರು.

ಮೋದಿಜಿ ಅವರು ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಿ ಭಾರತವನ್ನು ಕೋವಿಡ್‍ಮುಕ್ತ ಮಾಡಿದ್ದಾರೆ. 80 ಕೋಟಿ ಜನರಿಗೆ ಉಚಿತ ಪಡಿತರ ಕೊಟ್ಟಿದ್ದಾರೆ. ಬೆಟ್ಟಕುರುಬ ಸಮಾಜವನ್ನು ಎಸ್‍ಟಿ ಮೀಸಲಾತಿಗೆ ಸೇರಿಸಲಾಗಿದೆ ಎಂದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೇ ಬೇಡವೇ ಎಂದು ಪ್ರಶ್ನಿಸಿ ‘ಬೇಕು’ ಎಂದು ಉತ್ತರ ಪಡೆದರು.

2019ರಲ್ಲಿ ಮೋದಿಜಿ ಅವರು ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದರು. ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕಿತ್ತು. 2024ರಲ್ಲಿ ಭವ್ಯ ರಾಮಮಂದಿರ ಉದ್ಘಾಟನೆ ಆಗಲಿದೆ. ಕಾಶಿ ವಿಶ್ವನಾಥ, ಕೇದಾರನಾಥ ಕ್ಷೇತ್ರ ಅಭಿವೃದ್ಧಿಯೂ ಆಗಿದೆ ಎಂದರು.

ಕಾಂಗ್ರೆಸ್, ಜೆಡಿಎಸ್ ಈ ಭಾಗದ ಅಭಿವೃದ್ಧಿಗೆ ಏನೂ ಮಾಡಿಲ್ಲ. ಎಕ್ಸ್‍ಪ್ರೆಸ್ ವೇ, ರೈಲು ಮಾರ್ಗಗಳ ವಿದ್ಯುದೀಕರಣ, ಹೆದ್ದಾರಿ ನಿರ್ಮಾಣ ಕಾರ್ಯವನ್ನು ಮಾಡಿದೆ ಎಂದ ಅವರು, ಮೈಶುಗರ್ ಕಾರ್ಖಾನೆ ಬಂದ್ ಆಗಿತ್ತು. ಅದರ ಪುನರಾರಂಭಕ್ಕಾಗಿ ಬೊಮ್ಮಾಯಿಯವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಕಿಸಾನ್ ಸಮ್ಮಾನ್ ನಿಧಿ ಮೂಲಕ ರೈತರಿಗೆ ಆರು ಸಾವಿರವನ್ನು ಮೋದಿಜಿ ಕೊಟ್ಟರು. ಅದಕ್ಕೆ 4 ಸಾವಿರವನ್ನು ಯಡಿಯೂರಪ್ಪ ಅವರು ಸೇರಿಸಿ ಕೊಡುತ್ತಿದ್ದಾರೆ. ರಾಜ್ಯದ 50 ಲಕ್ಷ ರೈತರಿಗೆ 12 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ನೀರಾವರಿ ಯೋಜನೆಯಿಂದ 3 ಲಕ್ಷ ಹೆಕ್ಟೇರ್ ಭೂಮಿಗೆ ಇದರಿಂದ ಪ್ರಯೋಜನವಾಗಿದೆ. ಯಡಿಯೂರಪ್ಪ- ಬೊಮ್ಮಾಯಿಯವರ ಸರಕಾರಗಳು 13 ಸಾವಿರ ಕೋಟಿ ಮೊತ್ತವನ್ನು ವಿನಿಯೋಗ ಮಾಡಿದ್ದಾರೆ ಎಂದು ವಿವರಿಸಿದರು.

ಕೇಂದ್ರದ ನೆರವಿನಿಂದ ಇಲ್ಲಿ ಔದ್ಯೋಗಿಕ ವಿಕಾಸವೂ ಆಗಿದೆ. ನೀತಿ ಆಯೋಗದ ಬಹುಮಾವನ್ನೂ ಕರ್ನಾಟಕ ಪಡೆಯುತ್ತಿದೆ. 8 ಸಾವಿರ ಕೋಟಿಯ ಬೆಂಗಳೂರು ಮೈಸೂರು ಹೈವೇ, ಬೆಂಗಳೂರು- ಹೈದರಾಬಾದ್ ಎಕ್ಸ್‍ಪ್ರೆಸ್ ಹೈವೇ, ಬೆಂಗಳೂರು ವಿಮಾನನಿಲ್ದಾಣ ಎರಡನೇ ಟರ್ಮಿನಲ್‍ಗೆ 5 ಸಾವಿರ ಕೋಟಿಯನ್ನು ವಿನಿಯೋಗಿಸಿದ್ದೇವೆ ಎಂದು ತಿಳಿಸಿದರು.

2024ರ ಲೋಕಸಭಾ ಚುನಾವಣೆಗೆ ಮೊದಲು ಕರ್ನಾಟಕದ ಅಸೆಂಬ್ಲಿ ಚುನಾವಣೆ ಇದೆ. ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ. ಕರ್ನಾಟಕ ಹಾಗೂ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಮತ್ತು ಸುರಕ್ಷಿತವಾಗಿರಲು ನೆರವಾಗಿ ಎಂದು ಮನವಿ ಮಾಡಿದರು. ಪಿಎಫ್‍ಐ ಕೇಸನ್ನು ಸಿದ್ದರಾಮಯ್ಯ ಸರಕಾರ ಹಿಂದಕ್ಕೆ ಪಡೆದಿತ್ತು. ಆದರೆ, ನಾವು ಪಿಎಫ್‍ಐಯನ್ನು ಬ್ಯಾನ್ ಮಾಡಿದ್ದೇವೆ ಎಂದು ವಿವರಿಸಿದರು.

ಕಾಶ್ಮೀರ ನಮ್ಮದಲ್ಲವೇ? 370ನೇ ವಿಧಿ ರದ್ದು ಅಗತ್ಯವೇ? ಎಂದು ಕೇಳಿದ ಅವರು, 370ನೇ ವಿಧಿಯನ್ನು ರದ್ದು ಮಾಡಿದ ಮೋದಿಜಿ ಅವರು ಕಾಶ್ಮೀರವನ್ನು ದೇಶದ ಮುಖ್ಯವಾಹಿನಿಗೆ ತಂದರು. ಸ್ವಾತಂತ್ರ್ಯದ ಅಮೃತೋತ್ಸವ ಆಚರಣೆ ವೇಳೆ ದೇಶವನ್ನು ಸದೃಢವಾಗಿ ಮಾಡಲು ಬಿಜೆಪಿಯನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕಿದೆ ಎಂದು ಮನವಿ ಮಾಡಿದರು.

ಮಂಡ್ಯ ಜಿಲ್ಲೆಯು ಹಿರಿಯ ನಾಯಕ ಯಡಿಯೂರಪ್ಪ ಅವರ ಜನ್ಮ ಸ್ಥಳವಾಗಿದೆ. ಅವರು ವಿದೇಶದಲ್ಲಿದ್ದು, ಇಂದು ಬಾರದಿರುವ ಬಗ್ಗೆ ದೂರವಾಣಿಯಲ್ಲಿ ತಿಳಿಸಿದ್ದರು ಎಂದರು. 2018ರಲ್ಲಿ ರೈತರಿಗೆ ಅನ್ಯಾಯ ಆದುದಕ್ಕೆ ಇಲ್ಲಿಂದ ಪ್ರಚಾರ ಆರಂಭಿಸಿದ್ದೆವು. ಕರ್ನಾಟಕದ ಜನರು ನಮ್ಮ ಪಕ್ಷವನ್ನು ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ನಾವು ಗೆದ್ದಿದ್ದೆವು ಎಂದ ಅವರು, ಈ ಬಾರಿ ಪೂರ್ಣ ಬಹುಮತವನ್ನು ನೀಡಬೇಕಿದೆ ಎಂದು ತಿಳಿಸಿದರು.

ಆದಿ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜರು, ಜಗಜ್ಯೋತಿ ಬಸವಣ್ಣನ ಭೂಮಿ ಇದು ಎಂದು ತಿಳಿಸಿದರು. ಆಚಾರ್ಯ ರಾಮಾನುಜರು ಮಂಡ್ಯದಲ್ಲಿ ಬಾಲ್ಯದ 12 ವರ್ಷಗಳನ್ನು ಕಳೆದಿದ್ದರು ಎಂದು ನೆನಪಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರನ್ನೂ ಸ್ಮರಿಸಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಗೌರವಾರ್ಪಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿಜಿ ಅವರ ತಾಯಿ ಹೀರಾಬಾ ಅವರ ನಿಧನಕ್ಕೆ ಅವರು ತೀವ್ರ ಸಂತಾಪ ಸೂಚಿಸಿದರು. ಅವರ ನಿಧನದಿಂದ ಇಡೀ ದೇಶ ದುಃಖದ ಕಡಲಿನಲ್ಲಿದೆ ಎಂದು ತಿಳಿಸಿದರು.

ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಅಮಿತ್ ಶಾ ಅವರ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top