ಕಠ್ಮಂಡು: ಹಿಮಾಲಯ ರಾಷ್ಟ್ರ ನೇಪಾಳವನ್ನು ಕಾಡಿರುವ ಸುದೀರ್ಘ ರಾಜಕೀಯ ಅಸ್ಥಿರತೆಯನ್ನು ಕೊನೆಗೊಳಿಸಲು ನಡೆದ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ನೇತೃತ್ವದ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ 53 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (HOR) ಮತ್ತು ಏಳು ಪ್ರಾಂತೀಯ ಅಸೆಂಬ್ಲಿಗಳಿಗೆ ನವೆಂಬರ್ 20 ರಂದು ಚುನಾವಣೆಗಳು ನಡೆದವು. ಮತಗಳ ಎಣಿಕೆ ಸೋಮವಾರ ಪ್ರಾರಂಭವಾಯಿತು.
ನೇಪಾಳಿ ಕಾಂಗ್ರೆಸ್ 53 ಸ್ಥಾನಗಳನ್ನು ಗೆದ್ದಿದೆ ಮತ್ತು ನೇಪಾಳದ ಕಮ್ಯುನಿಸ್ಟ್ ಪಾರ್ಟಿ (ಯುನಿಫೈಡ್ ಮಾರ್ಕ್ಸ್ಸ್ಟ್-ಲೆನಿನಿಸ್ಟ್) (CPN-UML) ಚುನಾವಣೆಯಲ್ಲಿ 42 ಸ್ಥಾನಗಳನ್ನು ಪಡೆದುಕೊಂಡಿದೆ. ಸಿಪಿಎನ್-ಮಾವೋವಾದಿ 17 ಸ್ಥಾನಗಳೊಂದಿಗೆ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಸಿಪಿಎನ್-ಯುನಿಫೈಡ್ ಸೋಷಿಯಲಿಸ್ಟ್ 10 ಸ್ಥಾನಗಳನ್ನು ಪಡೆದುಕೊಂಡಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್ಎಸ್ಪಿ) ಮತ್ತು ಹಿಂದೂ ಪರ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ತಲಾ 7 ಸ್ಥಾನಗಳನ್ನು ಗೆದ್ದಿವೆ. ಸ್ವತಂತ್ರ ಮತ್ತು ಇತರ ಸಣ್ಣ ಪಕ್ಷಗಳು 21 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ನೇರ ಮತದಾನದ ಒಟ್ಟು 165 ಸ್ಥಾನಗಳ ಪೈಕಿ 8 ಸ್ಥಾನಗಳ ಫಲಿತಾಂಶಕ್ಕೆ ಇನ್ನೂ ಕಾಯಲಾಗುತ್ತಿದೆ.
ಸಿಪಿಎನ್-ಯುಎಂಎಲ್ ನೇತೃತ್ವದ ಮೈತ್ರಿಕೂಟದ 55 ಸ್ಥಾನಗಳ ವಿರುದ್ಧ ಆಡಳಿತಾರೂಢ ಐದು ಪಕ್ಷಗಳ ಮೈತ್ರಿಕೂಟ 85 ಸ್ಥಾನಗಳನ್ನು ಗೆದ್ದಿದೆ. ಆಡಳಿತಾರೂಢ ಮೈತ್ರಿಕೂಟದಲ್ಲಿ ಪ್ರಧಾನಿ ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್, ಪುಷ್ಪಕಮಲ್ ದಹಲ್ ಪ್ರಚಂಡ ನೇತೃತ್ವದ ಸಿಪಿಎನ್-ಮಾವೋವಾದಿ, ಮಾಧವ್ ನೇಪಾಳ ನೇತೃತ್ವದ ಸಿಪಿಎನ್-ಏಕೀಕೃತ ಸಮಾಜವಾದಿ, ಮಹಂತ ಠಾಕೂರ್ ಅವರ ಲೋಕತಾಂತ್ರಿಕ ಸಮಾಜವಾದಿ ಪಕ್ಷ ಮತ್ತು ಚಿತ್ರಾ ಬಹದ್ದೂರ್ ನೇತೃತ್ವದ ರಾಷ್ಟ್ರೀಯ ಜನಮೋರ್ಚಾ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.