News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 1st December 2022


×
Home About Us Advertise With s Contact Us

ಹಡಿಲು ಭೂಮಿ ಕೃಷಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ʼಕಾಂತಾರʼ ವೀಕ್ಷಿಸಲು ಉಚಿತ ವ್ಯವಸ್ಥೆ

ಉಡುಪಿ: ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಚಲನಚಿತ್ರ “ಕಾಂತಾರ”. ಕರ್ನಾಟಕದ ಕರಾವಳಿ ಭಾಗ ಅಂದರೆ ತುಳುನಾಡಿನ ಸಂಸ್ಕೃತಿಯನ್ನ ಬಿಂಬಿಸುವ ಈ ಚಲನಚಿತ್ರದಲ್ಲಿ ತುಳುನಾಡಿನ ಭವ್ಯ ನಂಬುಗೆಯ ದೈವಾರಾಧನೆ ಕುರಿತು ತಿಳಿಸಲಾಗಿದೆ. ಹಾಗಾಗಿ ಈ ಚಿತ್ರ ಎಲ್ಲರ ಹೃದಯಕ್ಕೂ ನಾಟಿದೆ.

ಒಂದು ಕಾಲಘಟ್ಟದಲ್ಲಿ ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಜನತೆ ಪಾರಂಪರಿಕವಾಗಿ ಕೃಷಿ ಮಾಡುತ್ತಿದ್ದರು. ಧಾರ್ಮಿಕ ಸ್ಪರ್ಶವನ್ನು ಹೊಂದಿದ್ದ ಈ ಕೃಷಿಗೂ ದೈವಾರಾಧನೆಗೂ ಇಲ್ಲಿ ನಂಟಿದೆ.

ಕಂಬಳ ಇಲ್ಲಿ ಕ್ರೀಡೆಯಾದರು ಹಲವು ಭಾಗಗಳಲ್ಲಿ ಇದಕ್ಕೆ ದೈವಾರಾಧನೆಯ ಸ್ಪರ್ಶ ಇದೆ. ಆದರೆ ಆಧುನಿಕತೆಯಿಂದಾಗಿ ಈ ಭಾಗದ ಕೃಷಿ ಪದ್ಧತಿ, ದೈವಾರಾಧನೆ ಹಾಗೂ ತುಳುನಾಡಿನ ಸಂಸ್ಕೃತಿ ಯುವ ಸಮುದಾಯದಿಂದ ದೂರವಾಗುತ್ತಾ ಹೋಗುತ್ತಿತ್ತು. ಆದರೆ ಈ ಬಾರಿ ಈ ಭಾಗದಲ್ಲಿ ನಡೆದ 2 ಕ್ರಾಂತಿ (ಹಡಿಲು ಭೂಮಿ ಕೃಷಿ – ಕಾಂತಾರ ಚಲನಚಿತ್ರ) ಯುವ ಸಮುದಾಯವನ್ನು ಗತಕಾಲದ ಕೃಷಿ ಪದ್ಧತಿ ಹಾಗೂ ದೈವಾರಾದನೆಯ ಮೂಲ ಸಂಸ್ಕೃತಿಯತ್ತ ಸೆಳೆದಿದೆ. ಮೂಲವನ್ನು ಮರೆತ ತುಳುನಾಡಿನ ಯುವ ಸಮುದಾಯಕ್ಕೆ ತನ್ನ ಮೂಲವನ್ನು ನೆನಪಿಸಿದೆ ಅಂದರೂ ಅತಿಶಯೋಕ್ತಿಯಲ್ಲ.

ಉಡುಪಿ ಶಾಸಕ ರಘುಪತಿ ಭಟ್ ಅವರ ಕನಸಿನ ಯೋಜನೆ ಸಾಕ್ಷಾತ್ಕಾರಗೊಳಿಸಿದ ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಕಳೆದ ಬಾರಿ ರೂಪಿಸಿದ “ಹಡಿಲು ಭೂಮಿ ಕೃಷಿ ಆಂದೋಲನ” ಫಲವತ್ತಾದ ಕೃಷಿ ಭೂಮಿಗಳಿಗೆ ಪುನರುಜ್ಜೀವನ ನೀಡುವ ಜೊತೆಯಲ್ಲಿ ಮರೆತು ಹೋದ ಕೃಷಿ ಪರಂಪರೆಯನ್ನು ಮತ್ತೆ ಉಳಿಸಿ ಬೆಳೆಸುವತ್ತ ಹೆಜ್ಜೆ ಹಾಕಿತ್ತು. ವಿದ್ಯಾರ್ಥಿಗಳನ್ನು, ಯುವ ಸಮುದಾಯವನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿರುವುದರಿಂದ ಅವರಿಗೆ ಕೃಷಿಯ ಅರಿವನ್ನು ಮೂಡಿಸುವ ಜೊತೆಯಲ್ಲಿ ಕೃಷಿಯ ಆಸಕ್ತಿ ಇಮ್ಮಡಿಗೊಳಿಸಿತ್ತು.

ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರ “ಕಾಂತಾರ” ಚಲನಚಿತ್ರದಲ್ಲಿ ತುಳುನಾಡಿನ ದೈವಾರಾಧನೆಯ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದು, ರಾಷ್ಟ್ರಾದ್ಯಂತ ಪಸರಿಸಿ ಹೊಸ ಸಂಚಲನವನ್ನೇ ಮೂಡಿಸಿದೆ. ತುಳುನಾಡಿನ ಯುವ ಸಮುದಾಯಕ್ಕೆ ದೈವಾರಾಧನೆಯ ಮಹತ್ವ, ಆರಾಧನೆಯಲ್ಲಿ ನಮ್ಮ ಹಿರಿಯರ ಶ್ರದ್ಧೆ ಹಾಗೂ ತುಳುನಾಡಿನ ಭವ್ಯ ಸಂಸ್ಕೃತಿಯ ಮೂಲವನ್ನು ಪರಿಚಯಿಸಿದೆ.

ಕಳೆದ ಬಾರಿ ಶಾಸಕ ಶ್ರೀ ಕೆ ರಘುಪತಿ ಭಟ್ ಅವರ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ಉಡುಪಿಯಲ್ಲಿ ಪ್ರಥಮ ಹಂತದಲ್ಲಿ ಕೈಗೊಂಡ ಹಡಿಲು ಭೂಮಿ ಕೃಷಿ ಮಾಡಿದ ಗದ್ದೆಗಳಲ್ಲಿನ ಕಳೆ ತೆಗೆಯುವ ಕಾರ್ಯದಲ್ಲಿ “ಕಾಂತಾರ” ಚಲನಚಿತ್ರದ ನಿರ್ದೇಶಕ, ನಾಯಕ ನಟರಾದಂತಹ ರಿಷಭ್ ಶೆಟ್ಟಿಯವರು ಪಾಲ್ಗೊಂಡು ವಿದ್ಯಾರ್ಥಿಗಳನ್ನು, ಯುವ ಸಮುದಾಯವನ್ನು ಹುರಿದುಂಬಿಸಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದ್ದರು. ಅವರು ಈ ಬಾರಿ ನಿರ್ದೇಶಿಸಿ, ನಾಯಕ ನಟರಾಗಿ ಅಭಿನಯಿಸಿದ “ಕಾಂತಾರ” ಚಲನಚಿತ್ರದಲ್ಲಿ ಕೃಷಿ ಹಾಗೂ ಕಂಬಳದ ಬಗ್ಗೆ ವಿವರಣೆ ಇದೆ. ಈ ಚಿತ್ರದಲ್ಲಿರುವ ಪಂಜುರ್ಲಿ ದೈವ ತುಳುನಾಡಿನ ಪ್ರತಿ ಕುಟುಂಬಕ್ಕೂ ಮನೆ ದೈವ. ಹೀಗಾಗಿ ಎಲ್ಲರ ಹೃದಯ ಗೆದ್ದ ಈ ಚಲನಚಿತ್ರದಿಂದಾಗಿ ತುಳುನಾಡಿನ ಯುವಸಮುದಾಯ ಮತ್ತೆ ತಮ್ಮ ಮೂಲದ ದೈವಾರದನೆಯತ್ತ ಒಲವು ತೋರಿದ್ದಾರೆ. ಜತೆಗೆ ಅವರ ಭಕ್ತಿಯನ್ನು ಇಮ್ಮಡಿಗೊಳಿಸಿದೆ.

ರಿಷಬ್ ಶೆಟ್ಟಿ ಅವರು “ಕಾಂತಾರ” ಚಲನಚಿತ್ರದ ಬಗ್ಗೆ ಮಾಧ್ಯಮದಲ್ಲಿ ಮಾತನಾಡುವಾಗ ಹಡಿಲು ಭೂಮಿ ಕೃಷಿ ಬಗ್ಗೆ ಹಾಗೂ ಇಂದಿನ ಯುವ ಸಮುದಾಯವಕ್ಕೆ ಕೃಷಿಯ ಅರಿವಿನ ಅವಶ್ಯಕತೆಯ ಬಗ್ಗೆ ಉಲ್ಲೇಖ ಮಾಡಿದ್ದರು.

ಹೀಗೆ ಅರ್ಥಗರ್ಭಿತವಾದ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ತುಳುನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದ ಅರ್ಥಗರ್ಭಿತವಾದ “ಕಾಂತಾರ” ಚಲನಚಿತ್ರ ನೋಡಲು ಶಾಸಕ ರಘುಪತಿ ಭಟ್ ಅವರು ಉಚಿತ ವ್ಯವಸ್ಥೆ ಮಾಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top