ಪಿಟ್ಸ್ಬರ್ಗ್: ರಷ್ಯಾ ಮತ್ತು ಉಕ್ರೇನ್ ನಡುವೆ ಶಾಶ್ವತ ಶಾಂತಿಗಾಗಿ ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಒಳಗೊಂಡ ಸಮಿತಿಯನ್ನು ಸ್ಥಾಪಿಸಲು ಮೆಕ್ಸಿಕೊ ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದೆ.
ನ್ಯೂಯಾರ್ಕ್ನಲ್ಲಿ ನಡೆದ ಯುಎನ್ ಸೆಕ್ಯುರಿಟಿ ಕೌನ್ಸಿಲ್ ಚರ್ಚೆಯಲ್ಲಿ ಭಾಗವಹಿಸಿದ್ದಾಗ ಮೆಕ್ಸಿಕೊದ ವಿದೇಶಾಂಗ ಸಚಿವ ಮಾರ್ಸೆಲೊ ಲೂಯಿಸ್ ಎಬ್ರಾಡ್ ಕ್ಯಾಸೌಬಾನ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟರು.
ಉಜ್ಬೇಕಿಸ್ತಾನ್ನ ಸಮರ್ಕಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ 22 ನೇ ಸಭೆಯ ನೇಪಥ್ಯದಲ್ಲಿ ಪುಟಿನ್ ಅವರನ್ನು ಭೇಟಿಯಾದ ಮೋದಿ ಅವರು ರಷ್ಯಾದ ನಾಯಕನಿಗೆ “ಇಂದಿನ ಯುಗ ಯುದ್ಧವಲ್ಲ” ಎಂದು ಹೇಳಿದ ಕೆಲವು ದಿನಗಳ ನಂತರ ಇದು ಸಂಭವಿಸಿದೆ. ಭಾರತದ ಪ್ರಧಾನಿಯವರ ಹೇಳಿಕೆಯನ್ನು ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಪಾಶ್ಚಿಮಾತ್ಯ ಜಗತ್ತು ಸ್ವಾಗತಿಸಿದೆ.
” ಉಕ್ರೇನ್-ರಷ್ಯಾ ನಡುವೆ ಸಂವಾದ ಮತ್ತು ಶಾಂತಿಗಾಗಿ ಸಮಿತಿಯನ್ನು ರಚನೆ ಮಾಡಬೇಕು. ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ಮಧ್ಯಸ್ಥಿಕೆ ಪ್ರಯತ್ನಗಳನ್ನು ಬಲಪಡಿಸಲು ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಪ್ರಸ್ತಾಪವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಸಾಧ್ಯವಾದರೆ, ಘನತೆವೆತ್ತ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಸೇರಿದಂತೆ ಇತರ ರಾಷ್ಟ್ರ ಮತ್ತು ಸರ್ಕಾರದ ಮುಖ್ಯಸ್ಥರ ಭಾಗವಹಿಸುವಿಕೆಯೊಂದಿಗೆ ಸಮಿತಿ ರಚನೆ ಮಾಡಬೇಕು” ಎಂದು ಮೆಕ್ಸಿಕೋ ವಿದೇಶಾಂಗ ಸಚಿವ ತಿಳಿಸಿದ್ದಾರೆ.
ಸಂವಾದಕ್ಕೆ ಹೊಸ ಕಾರ್ಯವಿಧಾನಗಳನ್ನು ರಚಿಸುವುದು ಮತ್ತು ಆತ್ಮವಿಶ್ವಾಸವನ್ನು ಬೆಳೆಸಲು, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಶ್ವತ ಶಾಂತಿಗೆ ದಾರಿ ತೆರೆಯಲು ಮಧ್ಯಸ್ಥಿಕೆಗೆ ಪೂರಕ ಅವಕಾಶಗಳನ್ನು ಸೃಷ್ಟಿಸುವುದು ಸಮಿತಿಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಮಾತುಕತೆ, ರಾಜತಾಂತ್ರಿಕತೆ ಮತ್ತು ಪರಿಣಾಮಕಾರಿ ರಾಜಕೀಯ ಮಾರ್ಗಗಳನ್ನು ನಿರ್ಮಿಸುವ ಮೂಲಕ ಮಾತ್ರ ಶಾಂತಿಯನ್ನು ಸಾಧಿಸಬಹುದು ಎಂದು ಮೆಕ್ಸಿಕನ್ ವಿದೇಶಾಂಗ ಸಚಿವರು ವಾದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.