ಬೆಂಗಳೂರು : ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಘಟಪ್ರಭಾ ಬಲದಂಡೆ ಕಾಲುವೆ ಕಿ.ಮೀ.182.560 ರಿಂದ 199.093 ವರೆಗಿನ ಸುಮಾರು 10224.57 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಶಿರೂರು ಏತ ನೀರಾವರಿ ಯೋಜನೆಯ ರೂ.243.00 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ವಿವರವಾದ ಯೋಜನಾ ವರದಿಗೆ ಇಂದು ನಡೆದ ಸಭೆಯಲ್ಲಿ ಸಚಿವ ಸಂಪುಟ ಅನುಮೋದಿಸಿದೆ ಮತ್ತು ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಭಗವತಿ ಏತ ನೀರಾವರಿ ಯೋಜನೆ ಮತ್ತು ಭಗವತಿ, ಹಳ್ಳೂರು, ಬೇವೂರು ಹಾಗೂ ಸಂಗಾಪುರ ಕೆರೆಗಳಿಗೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ (ಘಟಪ್ರಭಾ ನದಿಯಿಂದ) ನೀರನ್ನು ಎತ್ತಿ ತುಂಬಿಸುವ 346 ಕೋಟಿ ರೂಪಾಯಿ ಅಂದಾಜು ಮೊತ್ತದ ಹರಿ (flow irrigation) ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಂಚಿಕೆ ಆಗಿರುವ ಒಟ್ಟಾರೆ 303 ಟಿ.ಎಂ.ಸಿ. ಅಡಿ ನೀರಿನಲ್ಲಿ ಈ ಯೋಜನೆಯ 1.563 ಟಿ.ಎಂ.ಸಿ. ನೀರನ್ನು ಎತ್ತುವಳಿ ಮೂಲಕ ತುಂಬಿಸಲು ಕೃಷ್ಣ ಭಾಗ್ಯ ಜಲ ನಿಗಮದಿಂದ ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ದೊರೆತಿದೆ. ಒಟ್ಟು 14 ಗ್ರಾಮಗಳ 8390 ಹೆಕ್ಟೇರ್ ಕೃಷಿ ಭೂಮಿಗೆ ಈ ಯೋಜನೆಯ ಮೂಲಕ ನೀರುಣಿಸಲಾಗುವುದು ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಘಟಪ್ರಭಾ ಬಲದಂಡೆ ಕಾಲುವೆಯು 199.093 ಕಿ.ಮೀ. ಉದ್ದವಿದ್ದು, ಡಿಸ್ಚಾರ್ಜ್ 66.56 ಕ್ಯೂಮೆಕ್ಸ್ ಮೂಲಕ 1,69,129 ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಪ್ರದೇಶ ಹೊಂದಿರುತ್ತದೆ ಎಂದು ವರದಿ ಮಾಡಿರುತ್ತಾರೆ. ಆದರೆ 2004ರಲ್ಲಿ ಘಟಪ್ರಭಾ ಬಲದಂಡೆ ಕಾಲುವೆಯ ನಿರ್ಮಾಣದ ನಂತರ ಘಟಪ್ರಭಾ ಬಲದಂಡೆ ಕಾಲುವೆಯ 148.00 ಕಿ.ಮೀ. ನಂತರದ ಪ್ರದೇಶಕ್ಕೆ ನೀರು ಹರಿಯುತ್ತಿಲ್ಲವಾದ್ದರಿಂದ ಆ ಪ್ರದೇಶಗಳು ಒಣ ಪ್ರದೇಶವಾಗಿದ್ದು, ಇದರಿಂದ ಈ ಪ್ರದೇಶಗಳನ್ನು ನೀರಾವರಿ ವಂಚಿತ ಪ್ರದೇಶವನ್ನಾಗಿ ಪರಿಗಣಿಸಲಾಗಿದೆ. ಘಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ. 182.560 ರಿಂದ 199.093ವರೆಗಿನ ಸುಮಾರು 10,224.57 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ಪರ್ಯಾಯ ವ್ಯವಸ್ಥೆಯಾಗಿ ಶಿರೂರು ಏತ ನೀರಾವರಿ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು.
ಘಟಪ್ರಭಾ ಬಲದಂಡೆ ಕಾಲುವೆಯು ಕೇವಲ 2000 ಕ್ಯೂಸೆಕ್ಸ್ ಹರಿವನ್ನು ಮಾತ್ರ ತೆಗೆದುಕೊಳ್ಳುವ ಸಾಮರ್ಥ್ಯವಿದ್ದು, ಕಾಲುವೆಯ ಮೇಲ್ಭಾಗದಲ್ಲಿ ವಿನ್ಯಾಸಿಸಿರುವಂತೆ 2100 ಕ್ಯೂಸೆಕ್ಸ್ ಬದಲು 2000 ಕ್ಯೂಸೆಕ್ಸ್ ಮಾತ್ರ ಬಿಡಲಾಗುತ್ತಿದೆ ಮತ್ತು ಕಾಲುವೆಯ ಮೇಲ್ಭಾಗದ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು (cash crops) ಬೆಳೆಯಲಾಗುತ್ತಿದ್ದು, ಇದರಿಂದಾಗಿ ಯೋಜಿತ ಬಳಕೆಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಕಾಲುವೆ ಮೇಲ್ಭಾಗದಲ್ಲಿ ಬಳಸಲಾಗುತ್ತಿರುವುದರಿಂದ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡಾಗಿನಿಂದ ಕಿ.ಮೀ. 148.00ರ ನಂತರದ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿಲ್ಲವೆಂಬ ಅಂಶಗಳನ್ನು ಅಧ್ಯಯನದ ಮೂಲಕ ಪರಿಗಣಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಕಾರ್ಯಸಾಧುವೆಂದು ಪರಿಗಣಿಸಲಾಗಿದೆ ಎಂದಿದ್ದಾರೆ.
ಈ ಯೋಜನೆಯ ಜಾರಿಯಿಂದ 10224.57 ಹೆಕ್ಟೇರ್ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ಬಾಗಲಕೋಟೆ ವಿತರಣಾ ಕಾಲುವೆಯಿಂದ ಇಂಗಳಗಿ ವಿತರಣಾ ಕಾಲುವೆವರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಬಾಗಲಕೋಟೆ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಹತ್ತಿರ ಶಿರೂರು ಏತ ನೀರಾವರಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಈ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಭಗವತಿ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅಸ್ತು
ಭಗವತಿ ಏತ ನೀರಾವರಿ ಯೋಜನೆಗೆ ಒಟ್ಟಾರೆ ಅವಶ್ಯಕ 1.563 ಟಿ.ಎಂ.ಸಿ. ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1, 2 ಮತ್ತು 3ರಡಿ ನೀರಿನ ಸಾಂದ್ರತೆಯನ್ನು 100%ರಂತೆ ಪರಿಗಣಿಸಿ ಲಭ್ಯವಾಗುವ ಉಳಿತಾಯದ ನೀರಿನ ಪ್ರಮಾಣದಲ್ಲಿ (ತಿಮ್ಮಾಪುರ ಏತ ನೀರಾವರಿ ಯೋಜನೆಯಲ್ಲಿ ಉಳಿತಾಯವಾಗುವ 0.48 ಟಿ.ಎಂ.ಸಿ. ನೀರಿನ ಪ್ರಮಾಣ ಒಳಗೊಂಡಂತೆ) ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಟ್ಟಾರೆ ನೀರಿನ ಬಳಕೆಗೆ ಹಂಚಿಕೆಯಾಗಿರುವ 303 ಟಿ.ಎಂ.ಸಿ. ನೀರಿನ ಹಂಚಿಕೆಯಲ್ಲಿ ಪರಿಗಣಿಸುವ ಕುರಿತು ಸರ್ಕಾರದ ಹಂತದಲ್ಲಿ ವಿವರವಾದ ಪರಿಶೀಲನೆ ನಡೆಸಿ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗಿತ್ತು.
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳೂರು, ಬೇವೂರು, ಸಂಗಾಪುರ, ಬಿಲಕೇರೂರು, ಅಚನೂರು, ಮೂಡಪಲಜೀವಿ, ಕಡ್ಲಿಮಟ್ಟಿ, ಮುಗಳೊಳ್ಳಿ, ಭಗವತಿ, ಮನಿಕಟ್ಟಿ, ಬೆನಕಟ್ಟಿ, ಶಿರೂರು, ತಿಮ್ಮಾಪುರ, ಅಚತಾಪುರ ಗ್ರಾಮಗಳು ಬರ ಪೀಡಿತ ಗ್ರಾಮಗಳಾಗಿರುತ್ತವೆ ಮತ್ತು ಬಾಗಲಕೋಟೆ ತಾಲ್ಲೂಕಿನ ಭಗವತಿ, ಹಳ್ಳೂರು, ಬೇವೂರು ಹಾಗೂ ಸಂಗಾಪೂರ ಕೆರೆಗಳು ಸಣ್ಣ ನೀರಾವರಿ ಕೆರೆಗಳಾಗಿದ್ದು, ತುಂಬಾ ಕಡಿಮೆ ಮತ್ತು ಅನಿಶ್ಚಿತ ಮಳೆ ಬೀಳುವ ಪ್ರದೇಶಗಳಲ್ಲಿ ಇರುವುದರಿಂದ ಸಂಪೂರ್ಣ ಭರ್ತಿಯಾಗದೇ ನೀರಿನ ಕೊರತೆಯನ್ನು ನೀಗಿಸುವ ಸಲುವಾಗಿ ಮತ್ತು ಆ ಗ್ರಾಮಗಳ ರೈತರುಗಳು ನೀರಾವರಿ ಸೌಲಭ್ಯವನ್ನು ಪಡೆಯುವುದಕ್ಕಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಭಗವತಿ ಗ್ರಾಮದ ಸುತ್ತಲಿನ ಸುಮಾರು 9,123 ಹೆಕ್ಟೇರ್ ಜಮೀನುಗಳು ಎತ್ತರದ ಪ್ರದೇಶದಲ್ಲಿದ್ದು (ತಿಮ್ಮಾಪುರ ಏತ ನೀರಾವರಿ ಮತ್ತು ಘಟಪ್ರಭಾ ಬಲದಂಡೆ ಕಾಲುವೆ ಅಚ್ಚುಕಟ್ಟು ನಡುವಿನ ಪ್ರದೇಶ) ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1,2 ಮತ್ತು 3ರ ಯಾವುದೇ ಯೋಜನೆಗಳಿಂದ ನೀರಾವರಿಗೆ ಒಳಪಟ್ಟಿರುವುದಿಲ್ಲ. ಬೇಸಿಗೆ ಕಾಲದಲ್ಲಿ ಕೆರೆಗಳ ವ್ಯಾಪ್ತಿಯಲ್ಲಿ ಬರುವ ಭೂ ಪ್ರದೇಶದಲ್ಲಿಯಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಕೊಳವೆ ಬಾವಿಗಳಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸುವ ಅವಶ್ಯಕತೆಯನ್ನು ಮನಗಂಡು ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.