ಗುಜರಾತ್: ದೇಶದ ಯುವಜನತೆಗಾಗಿ ಯೂಥ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಸ್ಕಿಂ ಜಾರಿಗೆ ತನ್ನಿ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಸಲಹೆ ನೀಡಿದರು.
ಗುಜರಾತ್ನ ಕೆವಾಡಿಯಾದಲ್ಲಿ ನಡೆಯುತ್ತಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರುಗಳ ರಾಷ್ಟ್ರೀಯ ಸಮ್ಮೇಳನದ ಎರಡನೇ ದಿನವಾದ ಇಂದು ಯುವ ಸಬಲೀಕರಣಕ್ಕೆ ಸಂಬಂಧಿಸಿದಂತೆ ಎನ್ಎಸ್ಎಸ್, ನೆಹರು ಯುವ ಕೇಂದ್ರ ಹಾಗೂ ರಾಷ್ಟ್ರದ ಯುವ ಸಂಘಟನೆಗಳ ಸ್ವರೂಪದ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಸಚಿವ ಡಾ.ನಾರಾಯಣಗೌಡ ಅವರು, ರಾಷ್ಟ್ರೀಯ ಯುವ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರುವಂತೆ ಎಂದು ಸಲಹೆ ನೀಡಿದರು. ಯುವ ಜನತೆಯ ಶಿಕ್ಷಣ ಹಾಗೂ ಅವರಲ್ಲಿರುವ ಕೌಶಲ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಬೇಕು. ಹಾಗಾಗಿ, ನ್ಯಾಷನಲ್ ಯೂಥ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಸ್ಕೀಂ ಜಾರಿಗೆ ತರುವುದರಿಂದ ಯುವ ಜನತೆಗೆ ಅನುಕೂಲವಾಗಲಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕಾಗಿ ನ್ಯಾಷನಲ್ ಯೂಥ್ ಪೋರ್ಟಲ್ ಅಭಿವೃದ್ಧಿಪಡಿಸಿ, ಆ ಪೋರ್ಟಲ್ ನಲ್ಲಿ ಯುವ ಜನರ ಡೇಟಾವನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸಬೇಕು. ಆ ಡೇಟಾವನ್ನು ಬಳಸಿಕೊಂಡು ಕೌಶಲ್ಯಾಭಿವೃದ್ದಿ ಇಲಾಖೆ ಮೂಲಕ ಅವರ ವಿದ್ಯಾಭ್ಯಾಸ ಹಾಗೂ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ನೀಡಬೇಕು ಎಂದು ಸಚಿವ ಡಾ.ನಾರಾಯಣಗೌಡ ಸಲಹೆ ನೀಡಿದರು.
ಹೆಚ್ಚೆಚ್ಚು ಸ್ಟಾರ್ಟ್ ಅಪ್ಗಳು, ಸ್ವಯಂ ಉದ್ಯೋಗಕ್ಕೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸಬೇಕು. ಕೃಷಿ ಚಟುವಟಿಕೆಗಳು, ಐಟಿ, ಪ್ರವಾಸೋದ್ಯಮ, ಕಲೆ ಸಾಹಿತ್ಯ, ಕ್ರೀಡೆ ಸೇರಿದಂತೆ ಯುವಕರಿಗೆ ಸ್ಥಳೀಯ ಮಟ್ಟದಲ್ಲೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕದ ಯುವ ಸಂಬಂಧಿತ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಕರ್ನಾಟಕದದಲ್ಲಿ ಅಮೃತ ಸಮುದಾಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ 750 ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಎನ್ ಎಸ್ ಎಸ್ ಸಹಯೋಗದೊಂದಿಗೆ ಕ್ರಮವಹಿಸಲಾಗಿದೆ. ಈ ವರ್ಷ ಸ್ವಾಮಿ ವಿವೇಕಾನಂದ ಸ್ವಸಹಾಯ ಯುವ ಗುಂಪುಗಳನ್ನು ರಚಿಸಿ ಆ ಮೂಲಕ ಹಲವು ಇಲಾಖೆಗಳ ಸಹಯೋಗದೊಂದಿಗೆ ಯುವಕರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ವಿವರಿಸಿದರು.
ನೆಹರು ಯುವ ಕೇಂದ್ರದಿಂದ ಯುವ ಸಂಘಟನೆಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ನಿಲ್ಲಿಸಲಾಗಿದೆ. ಇದನ್ನು ಮತ್ತೆ ಪ್ರಾರಂಭಿಸುವಂತೆ ಸಚಿವ ಡಾ.ನಾರಾಯಣಗೌಡ ಅವರು ಸಲಹೆ ನೀಡಿದರು.
ಗುಜರಾತ್ ಸಿಎಂ ಭೂಪೆಂದ್ರಭಾಯ್ ಪಟೇಲ್,
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್ ಸೇರಿದಂತೆ ಎಲ್ಲಾ ರಾಜ್ಯದ ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳು ಹಾಜರಿದ್ದರು.
ಕರ್ನಾಟಕದಿಂದ ಸಚಿವ ಡಾ.ನಾರಾಯಣಗೌಡ ಅವರೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.