ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 20,000 ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಉಪಕ್ರಮಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್ನಲ್ಲಿ ದೇಶಾದ್ಯಂತ ಎಲ್ಲಾ ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯನ್ನು ಹೆಚ್ಚಿಸುತ್ತವೆ. ಇಂದು ಕಾಶ್ಮೀರದಲ್ಲಿ ಪಂಚಾಯತ್ ರಾಜ್ ದಿವಸ್ ಆಚರಿಸುತ್ತಿರುವುದು ಬದಲಾವಣೆಯ ಸಂಕೇತವಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ತಳಹದಿಯನ್ನು ತಲುಪಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಕಣಿವೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಜನರು ಯೋಜನೆಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ವರ್ಷಗಟ್ಟಲೆ ಮೀಸಲಾತಿಯ ಲಾಭ ಪಡೆಯದವರು ಈಗ ಮೀಸಲಾತಿಯ ಲಾಭವನ್ನೂ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಇದಕ್ಕೂ ಮೊದಲು, ಪ್ರಧಾನಿಯವರು ದೆಹಲಿ-ಅಮೃತಸರ-ಕತ್ರಾ ಎಕ್ಸ್ಪ್ರೆಸ್ವೇಗೆ ಶಂಕುಸ್ಥಾಪನೆ ಮಾಡಿದರು ಮತ್ತು ಸಾಂಬಾದಲ್ಲಿ 108 ಜನೌಷಧಿ ಕೇಂದ್ರಗಳ ಜೊತೆಗೆ ಪಲ್ಲಿ ಗ್ರಾಮದಲ್ಲಿ 500KW ಸೌರ ವಿದ್ಯುತ್ ಸ್ಥಾವರವನ್ನು ಉದ್ಘಾಟಿಸಿದರು. 3100 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಬನಿಹಾಲ್-ಕಾಜಿಗುಂಡ್ ರಸ್ತೆ ಸುರಂಗ ಮಾರ್ಗವನ್ನು ಉದ್ಘಾಟಿಸಿದರು. 8.45 ಕಿಮೀ ಉದ್ದದ ಸುರಂಗವು ಬನಿಹಾಲ್ ಮತ್ತು ಖಾಜಿಗುಂಡ್ ನಡುವಿನ ರಸ್ತೆ ದೂರವನ್ನು 16 ಕಿಮೀ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು ಸುಮಾರು ಒಂದೂವರೆ ಗಂಟೆ ಕಡಿಮೆ ಮಾಡುತ್ತದೆ.
ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ ನಿರ್ಮಿಸಲಿರುವ 850 ಮೆಗಾವ್ಯಾಟ್ ರಾಟಲ್ ಜಲವಿದ್ಯುತ್ ಯೋಜನೆ ಮತ್ತು 540 ಮೆಗಾವ್ಯಾಟ್ ಕ್ವಾರ್ ಜಲವಿದ್ಯುತ್ ಯೋಜನೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು. ಜಮ್ಮು ಮತ್ತು ಕಾಶ್ಮೀರದ ಜನತೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಪಲ್ಲಿಯು ಭಾರತದ ಮೊದಲ ಕಾರ್ಬನ್ ನ್ಯೂಟ್ರಲ್ ಪಂಚಾಯತ್ ಆಗುವ ಹಾದಿಯಲ್ಲಿದೆ ಎಂದು ಹೇಳಿದರು.
ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ಅಮೃತ್ ಸರೋವರ ಉಪಕ್ರಮವನ್ನು ಪ್ರಧಾನಿ ಪ್ರಾರಂಭಿಸಿದರು. ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯ ಮೊತ್ತವನ್ನು ವಿಜೇತ ಪಂಚಾಯತ್ಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.