ವಿಜಯಪುರ : ರಾಜ್ಯದಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದು, ಮುಕ್ತಾಯಗೊಂಡಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆಗಾಗಿ ವಿಜಯಪುರಕ್ಕೆ ಆಗಮಿಸಿರುವ ಸಚಿವರು, ಆಲಮಟ್ಟಿಯಲ್ಲಿ ಸೋಮವಾರ (ಏ.11) ಸುದ್ದಿಗಾರರ ಜೊತೆ ಮಾತನಾಡಿದರು.
‘ಮಾ. 28 ರಿಂದ ಆರಂಭವಾದ ಪರೀಕ್ಷೆ ರಾಜ್ಯದಾದ್ಯಂತ ಸುಸೂತ್ರವಾಗಿ ನಡೆದು, ಮುಕ್ತಾಯವಾಗಿದೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಪರೀಕ್ಷಾ ಅಕ್ರಮ ವರದಿಯಾಗಿದೆ. ಈ ಸಂಬಂಧ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ’ ಎಂದು ಸಚಿವರು ತಿಳಿಸಿದರು.
‘ಮೊದಲ ಬಾರಿ ಪರೀಕ್ಷೆ ಬರೆಯುತ್ತಿರುವವರಲ್ಲಿ ಹಾಜರಾತಿ ಪ್ರಮಾಣ ಶೇ. 98ಕ್ಕಿಂತ ಹೆಚ್ಚು ಇದೆ. ಆದರೆ, ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಗೈರು ಹಾಜರಾತಿ ಪ್ರಮಾಣ ಎಂದಿನಂತೆ ಮುಂದುವರೆದಿದೆ’ ಎಂದು ಸಚಿವರು ಮಾಹಿತಿ ನೀಡಿದರು.
‘ನಾಳೆಯಿಂದ (ಏ.12) ಕೀ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳು ಆರಂಭವಾಗುತ್ತವೆ. ಏಪ್ರಿಲ್ ಕೊನೆಯ ವಾರದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗುತ್ತದೆ. ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ. ಜೂನ್ 4ನೇ ವಾರದಲ್ಲಿ ಪೂರಕ ಪರೀಕ್ಷೆ ನಡೆಯಲಿದೆ’ ಎಂದು ಸಚಿವರು ಮಾಹಿತಿ ನೀಡಿದರು.
‘ಸಮವಸ್ತ್ರ ವಿಚಾರವಾಗಿ ಶಾಲೆಗಳಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಅನಾರೋಗ್ಯ ಲಕ್ಷಣಗಳು ಕಂಡು ಬಂದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಪರೀಕ್ಷೆಯ ಅವಧಿಯಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ’ ಎಂದು ಸಚಿವ ನಾಗೇಶ್ ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.