ಚೆನ್ನೈ: ನಮ್ಮ ಕಿಸೆಯಿಂದ ಹಣ ತೆಗೆದು ಎಷ್ಟು ಬಾರಿ ನಾವು ಬಡವರಿಗೆ ದಾನವಾಗಿ ನೀಡುತ್ತೇವೆ? ಯಾರೇ ಆದರೂ ನಮ್ಮ ಬಳಿ ಸಹಾಯ ಬೇಡಿ ಬಂದರೆ ಎರಡು ಮೂರು ಯೋಚಿಸಿ ಬಳಿಕ ಹಣ ನೀಡುತ್ತೇವೆ ಅಥವಾ ನೀಡದೇ ಇರುತ್ತೇವೆ. ಕೆಲವೊಮ್ಮೆ ಸಮಾಜ ಸೇವಾ ಸಂಸ್ಥೆಗಳಿಗೆ ಹೋಗಿ ಅಷ್ಟೋ ಇಷ್ಟೋ ದಾನ ಮಾಡುತ್ತೇವೆ.
ಆದರೆ ಇಲ್ಲೊಬ್ಬ ವ್ಯಕ್ತಿ ಪ್ರತಿ ತಿಂಗಳ ತಮ್ಮ ಸಂಪಾದನೆಯನ್ನು ಬಡವರಿಗಾಗಿಯೇ ಮೀಸಲಿಟ್ಟಿದ್ದಾರೆ. ಕಷ್ಟದಲ್ಲಿರುವವರನ್ನು ಉದ್ಧರಿಸುವುದೇ ಇವರ ಏಕಮಾತ್ರ ಗುರಿ.
ತಮಿಳುನಾಡಿನ ಮೆಲಕರಿವೆಲಂಕುಲಂನಲ್ಲಿ ಜನಿಸಿದ ಕಲ್ಯಾಣಸುಂದರಂ ಅವರಿಗೆ ಈಗ 73 ವರ್ಷ. ಲೈಬ್ರೇರಿಯನ್ ಆಗಿ ಸೇವೆ ಸಲ್ಲಿಸಿದ ಇವರೀಗ ನಿವೃತ್ತರಾಗಿದ್ದಾರೆ. ಸೇವಾವಧಿಯ 30 ವರ್ಷಗಳ ಸಂಬಳದ ಹಣವನ್ನು ಬಡವರಿಗೆ ದಾನ ಮಾಡಿದ್ದಾರೆ. ನಿವೃತ್ತಿಯಾದಾಗ ದೊರೆತ 10 ಲಕ್ಷ ರೂಪಾಯಿಯನ್ನೂ ಬಡವರಿಗೆ ನೀಡಿದ್ದಾರೆ. ತಮ್ಮ ಉಳಿತಾಯವನ್ನೂ ಕಷ್ಟದಲ್ಲಿರುವವರಿಗಾಗಿ ನೀಡಿದ್ದಾರೆ.
ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ ಇವರು, ಬಡವರ ಕಷ್ಟದ ಅನುಭವ ಪಡೆಯುದಕ್ಕಾಗಿ ರೈಲ್ವೇ ಸ್ಟೇಶನ್ನಿನಲ್ಲೂ ಮಲಗಿದ್ದಾರೆ. ಒಪ್ಪೊತ್ತಿನ ಊಟ ಮಾಡಿದ್ದಾರೆ. ಸಂಬಳದ ಹಣವನ್ನು ದಾನ ಮಾಡಿದ ಇವರು, ತನ್ನ ಜೀವನವನ್ನು ನಿರ್ವಹಿಸುವುದಕ್ಕಾಗಿ ಪಾರ್ಟ್ ಟೈಂ ಕೆಲಸ ಮಾಡಿದ್ದಾರೆ.
ಒಂದು ವರ್ಷದವರಿದ್ದಾಗಲೇ ತಂದೆಯನ್ನು ಕಳೆದು ಇವರನ್ನು ತಾಯಿಯೇ ಪೋಷಿಸಿದರು, ತಾಯಿಯೇ ಬಡವರ ಬಗ್ಗೆ ಕಾಳಜಿ ಮೂಡುವಂತೆ ಮಾಡಿದರು. ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ದೇಣಿಗೆ ಸಂಗ್ರಹಿಸುವಂತೆ ಇಡೀ ದೇಶಕ್ಕೆ ಕರೆ ನೀಡಲಾಗಿತ್ತು, ಈ ಕರೆಯೂ ಅವರನ್ನು ಸಮಾಜಸೇವೆಯತ್ತ ಮುಖ ಮಾಡುವಂತೆ ಮಾಡಿತು.
ಪಲಾಮ್ ಎಂಬ ಸಂಸ್ಥೆಯನ್ನು ಕಟ್ಟಿರುವ ಅವರು, ಅದರ ಮೂಲಕ ಬಡವರಿಗೆ, ದೀನ ದಲಿತರ ಬದುಕನ್ನು ಹಸನಾಗಿಸುವ ಕಾಯಕವನ್ನು ಮಾಡುತ್ತಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಾರೆ, ಮನೆಗಳನ್ನು ಕಟ್ಟಿಸಿಕೊಡುತ್ತಾರೆ, ಅವರ ಹಸಿವನ್ನು ನೀಗಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಾರೆ.
ನಾವೆಲ್ಲಾ ಸುಖಮಯ ಜೀವನಕ್ಕಾಗಿ ದುಡಿಯುತ್ತೇವೆ ಆದರೆ ಕಲ್ಯಾಣಸುಂದರಂ ಬಡವರಿಗಾಗಿ ದುಡಿಯುತ್ತಾರೆ, ನಾವು ನಮ್ಮ ಕುಟುಂಬಕ್ಕಾಗಿ ಬದುಕುತ್ತೇವೆ ಆದರೆ ಅವರು ಬಡವರಿಗಾಗಿ ಬದುಕುತ್ತಿದ್ದಾರೆ, ತನ್ನೆಲ್ಲಾ ಸಂಪಾದನೆಯನ್ನು ಬಡವರಿಗೆ ನೀಡ ಬಯಸಿದ್ದ ಅವರು ಅವಿವಾಹಿತರಾಗಿಯೇ ಉಳಿದಿದ್ದಾರೆ. ಅವರ ಈ ಸೇವಾಮಯ ಜೀವನಕ್ಕೆ ನಮ್ಮದೊಂದು ಸಲಾಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.