ಮಂಗಳೂರು : ಸಿ.ಎಮ್.ಡಿ.ಎಮ್.ಆರ್.ಜಿ ಗ್ರೊಪ್ನ ಕೆ. ಪ್ರಕಾಶ್ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ, ತಲಪಾಡಿ ದೊಡ್ಡಮನೆ ಕ್ಯಾಪ್ಟನ್ ಬೃಜೇಶ್ ಚೌಟ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ವತಿಯಿಂದ 5ನೇ ವರ್ಷದ ಹೊನಲು ಬೆಳಕಿನ ಈ ಮಂಗಳೂರು ಕಂಬಳವು ಬಂಗ್ರಕೂಳೂರಿನ ಗೋಲ್ಡ್ಫಿಂಚ್ ಸಿಟಿಯಲ್ಲಿ 26-03-2022 ರ ಶನಿವಾರ ಬೆಳಗ್ಗೆ 8.30 ಕ್ಕೆ ಉದ್ಘಾಟನಾ ಕಾರ್ಯಕ್ರಮದ ಮೂಲಕ ಆರಂಭಗೊಂಡು ಅದೇ ದಿನ ಸಂಜೆ 6 ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮರುದಿನ ದಿನಾಂಕ 27-03-2022 ರ ಭಾನುವಾರ ಬೆಳಗ್ಗೆ ಬಹುಮಾನ ವಿತರಣಾ ಸಮಾರಂಭದ ಮೂಲಕ ಸಂಪನ್ನಗೊಳ್ಳಲಿದೆ.
ಪರಂಪರೆ ಮತ್ತು ಆಧುನಿಕತೆಗಳು ಒಂದರ ಕೈಯನ್ನು ಇನ್ನೊಂದು ಹಿಡಿದುಕೊಂಡು ಮುಂದಕ್ಕೆ ಹೆಜ್ಜೆಯಿಡಬೇಕು. ಆದರೆ ದುರದೃಷ್ಟವಶಾತ್ ನಮ್ಮ ಕಾಲದಲ್ಲಿ ಆಧುನಿಕತೆ ಎಂಬುದು ಪರಂಪರೆಯನ್ನು ವಿರೋಧದ ಭಾವದಿಂದ, ಅನುಮಾನದಿಂದ ನೋಡುತ್ತಾ ಧಿಕ್ಕರಿಸುತ್ತಾ ಸಾಗುವುದನ್ನು ನಾವು ಕಾಣುತ್ತೇವೆ. ಇದರ ಪರಿಣಾಮವಾಗಿ ಸಾವಿರಾರು ವರುಷಗಳ ಜೀವನಾನುಭವದಿಂದ ರೂಪುಗೊಂಡ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಗಳ ಕಡೆಗೆ ತಿರಸ್ಕಾರ, ಸಿನಿಕತನದ ಮನೋಭಾವಗಳು ರೂಪುಗೊಳ್ಳುತ್ತಾ ಅದನ್ನೇ ವೈಚಾರಿಕತೆಯೆಂದು ಬಿಂಬಿಸುವ ಪ್ರಯತ್ನಗಳು ನಮ್ಮ ನಡುವೆ ನಡೆಯುತ್ತಿದೆ. ಆದರೆ ಇವುಗಳ ನಡುವೆಯೂ ಆಶಾಕಿರಣವೆಂಬಂತೆ ಕೆಲವು ಧನಾತ್ಮಕ ಚಿಂತನೆಯ ಹಳೆಬೇರು- ಹೊಸಚಿಗುರು ಸೇರಿಕೊಂಡ ವಿದ್ಯಮಾನಗಳೂ ನಮ್ಮ ನಡುವೆ ನಡೆಯುವುದುಂಟು. ಅಂತಹ ಒಂದು ಪ್ರಶಂಸಾರ್ಹ ಪ್ರಸಂಗ ಮಂಗಳೂರಿನ ಬಂಗ್ರಕೂಳೂರಿನಲ್ಲಿ ನಡೆಯಲಿರುವ ಮಂಗಳೂರು ಕಂಬಳ.
ಕಂಬಳ ತುಳುನಾಡಿನ ಜನರ ಆಚರಣೆಯೂ ಹೌದು. ಕ್ರೀಡೆಯೂ ಹೌದು. ಸಾಂಸ್ಕೃತಿಕ ಹಬ್ಬವೂ ಹೌದು. ಈ ಕಂಬಳದೊಂದಿಗೆ ತುಳುನಾಡಿನ ಕೃಷಿ, ಧಾರ್ಮಿಕ ನಂಬಿಕೆ, ಸಾಮಾಜಿಕ ವ್ಯವಸ್ಥೆ, ಕ್ರೀಡಾ ಮನೋಭಾವ, ಸೌಂದರ್ಯ ಪ್ರಜ್ಞೆ, ವಾಕ್ಚಾತುರ್ಯ ವೈಭವ ಎಲ್ಲವೂ ಒಳಗೊಂಡಿದೆ. ಬಿತ್ತನೆಗೆ ಸಿದ್ಧವಾದ ಕೆಸರಿನ ಗದ್ದೆಯಲ್ಲಿ ಕೋಣಗಳನ್ನು ಓಲೈಸುವ ಜನಪದ ಕಲೆ ಈ ಕಂಬಳ. ಸೃಷ್ಟಿಕ್ರಿಯೆಯ ಫಲವಂತಿಕೆಯ ಸಂಕೇತವಾದ ಈ ಧಾರ್ಮಿಕ ಆಚರಣೆ ಲೌಕಿಕವಾಗಿ ಕ್ರೀಡೆಯ ಸ್ವರೂಪವನ್ನು ತಾಳಿ ಇಂದು ಜನಪ್ರಿಯವಾಗಿದೆ.
ಹಿಂದೆ ಊರೂರುಗಳಲ್ಲಿ, ಗ್ರಾಮ, ಸೀಮೆ, ಮಾಗಣೆಗಳಲ್ಲಿ, ಗುತ್ತಿನ ಮನೆಯ ಯಜಮಾನಿಕೆಯಲ್ಲಿ ನಿರಂತರ ನಡೆಯುತ್ತಿದ್ದ ಕಂಬಳಗಳು ಹಲವು ವೈವಿಧ್ಯಗಳನ್ನು ಹೊಂದಿದ್ದವು. ಬಾರೆ ಕಂಬಳ, ಪೂಕರೆ ಕಂಬಳ, ಅರಸು ಅಥವಾ ದೇವರ ಕಂಬಳ ಎಂದೆಲ್ಲಾ ಭಿನ್ನ ಭಿನ್ನ ನೆಲೆಗಳಲ್ಲಿ ನಡೆಯುತ್ತಿದ್ದ ಕಂಬಳಗಳು ಇಂದು ಆಧುನಿಕ ಸ್ಪರ್ಶವನ್ನು ಪಡೆದಿದೆ. ತಂತ್ರಜ್ಞಾನದ ಸಹಾಯದಿಂದ ಹೆಚ್ಚು ನಿಖರವಾದ ಫಲಿತಾಂಶಗಳನ್ನು ಹೊಂದುವುದಕ್ಕೆ ಸಾಧ್ಯವಾಗಿದೆ. ಹಗ್ಗದ ಓಟ, ಅಡ್ಡಹಲಗೆ, ನೇಗಿಲ ಓಟ ಹೀಗೆ ವಿವಿಧ ವಿಭಾಗಗಳಲ್ಲಿ ಈ ಕ್ರೀಡೆ ಮನೋರಂಜನೆಯನ್ನು ನೀಡುತ್ತಾ ಬಂದಿದೆ. ಕಣೆಹಲಗೆಯಲ್ಲಿ ಆರೂವರೆ ಅಥವಾ ಏಳೂವರೆ ಕೋಲು ಎತ್ತರದ ನಿಶಾನಿಗೆ ಕೆಸರನ್ನು ಚಿಮ್ಮಿಸುವ ರೋಮಾಂಚನಕಾರಿ ಕ್ಷಣಗಳನ್ನು ಕಂಬಳ ಹೊಂದಿದೆ. ಗೆಲುವಿನ ನಗು ಬೀರುತ್ತಾ ಮಂಜೊಟ್ಟಿ ಹತ್ತುವ ಕೋಣಗಳಿಗೆ ಬೆಲೆ ಬಾಳುವ ಬಹುಮಾನಗಳು ದೊರಕಿ, ಸಾಕಿದ, ಓಡಿಸಿದ, ಬೆಂಬಲಿಸಿದ ಎಲ್ಲರೂ ಸಂಭ್ರಮಪಡುವ ಕ್ಷಣಗಳು ನಿರ್ಮಾಣಗೊಳ್ಳುತ್ತದೆ.
ಇಂತಹ ಕಂಬಳಕ್ಕೆ ಇತ್ತೀಚೆಗೆ ಪ್ರಾಣಿದಯಾ ಸಂಘದವರು ಪ್ರಾಣಿಹಿಂಸೆಯ ನೆಪವೊಡ್ಡಿ ನಿಷೇಧದ ತೂಗುಕತ್ತಿಯಲ್ಲಿ ನೇತಾಡಿಸಿದಾಗ ಇಡೀ ಕರಾವಳಿ ನೊಂದಿತ್ತು. ಕುದುರೆ ರೇಸಿನಲ್ಲಿ ಜೂಜಾಡುವ ಶ್ರೀಮಂತರ ಆಟದ ಪ್ರಾಣಿಹಿಂಸೆ, ಆನೆಯ ಮೇಲೋ, ಕುದುರೆಯ ಮೇಲೋ ಕುಳಿತು ಸವಾರಿ ಮಾಡುತ್ತಾ ಮೋಜಿನ ಸೆಲ್ಫಿಗಳಲ್ಲಿ ಜನ ತೊಡಗಿರುವಾಗ ಆ ಪ್ರಾಣಿಗಳಿಗೆ ನೀಡುವ ನಿತ್ಯ ಹಿಂಸೆ ಇದಾವುದೂ ಕಾಣದ ಸಂಘದವರಿಗೆ ವರ್ಷದಲ್ಲಿ ಯಾವತ್ತೋ ಒಂದು ದಿನ ಕಂಬಳದಲ್ಲಿ ಓಡಿಸುವಾಗ ಬಡಿಯುವ ನಾಲ್ಕು ಪೆಟ್ಟು ಗಂಭೀರ ಹಿಂಸೆಯಾಗಿ ಕಂಡಿರುವುದು ವಿಚಿತ್ರವೇ ಸರಿ.
ಈ ಸವಾಲೇ ಬಹುಶಃ ಹೊಸತಲೆಮಾರನ್ನು ಕಂಬಳದ ಕಡೆಗೆ ಯೋಚಿಸುವಂತೆ ಮಾಡಿದೆ. ಆಧುನಿಕತೆಯಿಂದ ಕ್ಷಿಪ್ರವಾಗಿ ಬದಲಾಗುತ್ತಿರುವ ಮಾಯಾನಗರಿ ಮಂಗಳೂರಲ್ಲಿ ಬದುಕಿನಿಂದ ದೂರವಾಗುತ್ತಿರುವ ತುಳುನಾಡಿನ ಸಂಸ್ಕೃತಿ ಕಲೆಗಳ ಬಗೆಗೆ ಯುವಕರಲ್ಲಿ ಹೊಸ ಎಚ್ಚರ ಕಾಣಿಸುತಿರುವುದು ಒಳ್ಳೆಯ ಬೆಳವಣಿಗೆ. ಇದಕ್ಕಾಗಿ ಮಂಗಳೂರಲ್ಲಿ ರಾಮ ಲಕ್ಷ್ಮಣ ಎಂಬ ಜೋಡುಕೆರೆ ಕಂಬಳವನ್ನು ಆಯೋಜಿಸುತ್ತಿರುವುದು ಆಧುನಿಕತೆ ಮತ್ತು ಪರಂಪರೆಯನ್ನು ಗೌರವದಿಂದ ಕಾಣಬೇಕೆಂಬ ಆಶಯದ ದ್ಯೋತಕದಿಂದ, ನೇಗಿಲಯೋಗಿಯ ಹಲವು ವರ್ಷಗಳ ಪರಿಶ್ರಮದಿಂದ ಉಳಿದು ಬೆಳೆದು ಬಂದಿರುವ ಕಂಬಳವನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ ಕೊಡುವ ಸದುದ್ದೇಶವನ್ನು ಮಂಗಳೂರು ಕಂಬಳದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.