
ನವದೆಹಲಿ: ಗಡಿ ಭದ್ರತಾ ಪಡೆ, ಬಿಎಸ್ಎಫ್ ಇಂದು ತನ್ನ 57 ನೇ ರೈಸಿಂಗ್ (ಸ್ಥಾಪನಾ) ದಿನವನ್ನು ಆಚರಿಸುತ್ತಿದೆ.
ಸ್ಥಾಪನಾ ದಿನದ ಅಂಗವಾಗಿ ಮಾತನಾಡಿರುವ ಬಿಎಸ್ಎಫ್ ಮಹಾನಿರ್ದೇಶಕ ಪಂಕಜ್ ಕುಮಾರ್ ಸಿಂಗ್ ಅವರು, ಗಡಿಗಳನ್ನು ಸುರಕ್ಷಿತವಾಗಿರಿಸಲು ಇತರ ದೇಶಗಳಲ್ಲಿ ಲಭ್ಯವಿರುವ ತಂತ್ರಜ್ಞಾನಕ್ಕೆ ಸಮನಾದ ಸ್ಥಳೀಯ ಅಭಿವೃದ್ಧಿ ಹೊಂದಿದ ಗಡಿ ಭದ್ರತಾ ತಂತ್ರಜ್ಞಾನವನ್ನು ಬಿಎಸ್ಎಫ್ ಬಳಸುತ್ತಿದೆ ಎಂದಿದ್ದಾರೆ.
“ಕಟ್ಟುನಿಟ್ಟಾದ ಗಡಿ ಗಸ್ತು ಮತ್ತು ಕಣ್ಗಾವಲು ಸಾಧನಗಳ ನಿಯೋಜನೆಯು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಜಾನುವಾರು ಕಳ್ಳಸಾಗಣೆ ಪ್ರಕರಣಗಳನ್ನು ತೀವ್ರವಾಗಿ ಕಡಿಮೆ ಮಾಡಿದೆ” ಎಂದು ಹೇಳಿದರು.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಂಗ್, “ಎರಡು-ಮೂರು ವರ್ಷಗಳ ಹಿಂದೆ ವರ್ಷಕ್ಕೆ ಸುಮಾರು 1.7 ಲಕ್ಷ ಜಾನುವಾರುಗಳನ್ನು ಕಳ್ಳ ಸಾಗಾಣೆದಾರರಿಂದ ಹಿಡಿಯಲಾಗುತ್ತಿತ್ತು, ಇದಕ್ಕೆ ಹೋಲಿಸಿದರೆ ಈ ವರ್ಷ ಕೇವಲ 18 ಸಾವಿರ ಜಾನುವಾರುಗಳನ್ನು ಕಳ್ಳ ಸಾಗಾಣೆದಾರರಿಂದ ಹಿಡಿಯಲಾಗಿದೆ. ಬಾಂಗ್ಲಾದೇಶದ ಗಡಿಯ ಹೆಚ್ಚಿನ ಪ್ರದೇಶವು ಬೇಲಿಯಿಂದ ಸುತ್ತುವರಿದಿದೆ ಮತ್ತು ಕಷ್ಟಕರವಾದ ಭೂಪ್ರದೇಶದ ಕಾರಣದಿಂದಾಗಿ ಸುಮಾರು 10 ರಿಂದ 12 ಪ್ರತಿಶತದಷ್ಟು ಪ್ರದೇಶದಲ್ಲಿ ಬೇಲಿ ಹಾಕಲಾಗಿಲ್ಲ” ಎಂದಿದ್ದಾರೆ.
ಪಂಜಾಬ್ ಮತ್ತು ಜಮ್ಮು ಗಡಿಗೆ ಸಂಬಂಧಿಸಿದಂತೆ, ಡ್ರೋನ್ ವಿಮಾನಗಳ ಹಾರಾಟ ಆತಂಕಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು. ಈ ವರ್ಷ ನಾವು ಕನಿಷ್ಠ 67 ಡ್ರೋನ್ ಹಾರಾಟ ಪತ್ತೆ ಮಾಡಿದ್ದೇವೆ. ಇವುಗಳು ಡ್ರಗ್ಸ್ ಸಾಗಾಣೆ ಮಾಡುತ್ತಿವೆ, ಮುಖ್ಯವಾಗಿ ಹೆರಾಯಿನ್ ಸಾಗಿಸುತ್ತದೆ. ನಾವು ಎರಡು ಬಾರಿ ಡ್ರೋನ್ಗಳನ್ನು ಹೊಡೆದುರುಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಬಿಎಸ್ಎಫ್ ಪಡೆ ಡ್ರೋನ್ ವಿರೋಧಿ ಸಾಧನಗಳನ್ನು ಸ್ಥಾಪಿಸುತ್ತಿದೆ ಮತ್ತು ಈಗಾಗಲೇ ಕೆಲವು ಸಾಧನಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಬಿಎಸ್ಎಫ್ ಇಂತಹ ಇನ್ನಷ್ಟು ಸಾಧನಗಳನ್ನು ಅಳವಡಿಸಲಿದೆ ಎಂದರು.
ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯು ಸ್ಥಳೀಯ ಪೋಲೀಸಿಂಗ್ನಲ್ಲಿ ಹಸ್ತಕ್ಷೇಪ ಮಾಡಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಿಂಗ್, ಬಿಎಸ್ಎಫ್ ಪೊಲೀಸರಿಗೆ ಸಮಾನಾಂತರವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿಲ್ಲ ಮತ್ತು ತನಿಖೆ ಮತ್ತು ಚಾರ್ಜ್ ಶೀಟ್ಗಳನ್ನು ಸಲ್ಲಿಸುವ ಅಧಿಕಾರವು ರಾಜ್ಯಕ್ಕೆ ಮುಂದುವರಿಯುತ್ತದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


