ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ 1899 ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಇಂದು ಅದರ ಮೊದಲ ಹಂತವಾಗಿ, ಸಾಂಕೇತಿಕವಾಗಿ 21 ಜನರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಇಂದು ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಸಭಾಂಗಣದಲ್ಲಿ ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಿ ಮಾತನಾಡಿದರು.
ಕೆಪಿಟಿಸಿಎಲ್ ನ 1899 ಹುದ್ದೆಗಳಿಗೆ 2019ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ನೇಮಕಾತಿ ಪ್ರಕ್ರಿಯೆ ನಾನಾ ಕಾರಣಗಳಿಗಾಗಿ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಅನೇಕರು ನನ್ನ ಗಮನ ಸೆಳೆದಾಗ ನಾನು ಕೂಡಲೇ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಆದೇಶ ಪತ್ರ ನೀಡುವಂತೆ ಸೂಚನೆ ನೀಡಿದ್ದೆ. ಅದರಂತೆ ಇಂದು 21 ಜನ ಕಿರಿಯ ಪವರ್ ಮ್ಯಾನ್ಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅತ್ಯಂತ ಶೀಘ್ರದಲ್ಲೇ ಉಳಿದ 1878 ಜನರಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಬಂದ ನಂತರ ಅತಿ ದೊಡ್ಡ ಪ್ರಮಾಣದಲ್ಲಿ ಈ ನೇಮಕ ಪ್ರಕ್ರಿಯೆ ನಡೆದಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ ಎಂದರು. ಕೆಪಿಟಿಸಿಎಲ್ನಲ್ಲಿ ಖಾಲಿ ಇರುವ ಇತರ ಹುದ್ದೆಗಳ ಭರ್ತಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.