ಮಹಾತ್ಮ ಗಾಂಧೀಜಿ ಒಬ್ಬ ಅಪ್ಪಟ ಧಾರ್ಮಿಕ ವ್ಯಕ್ತಿ. ಆಧ್ಯಾತ್ಮವನ್ನು ತಮ್ಮ ಉಸಿರಾಗಿಸಿಕೊಂಡಿದ್ದವರು, ಒಂದು ಅರೆಕ್ಷಣವೂ ಧಾರ್ಮಿಕತೆಯನ್ನು ಬಿಡಲು ನನಗೆ ಸಾಧ್ಯವಿಲ್ಲ ಎಂದು ಘೋಷಿಸಿಕೊಂಡಿದ್ದವರು. ಧಾರ್ಮಿಕ ಮತಾಂತರವನ್ನು ಕಟುವಾಗಿ ವಿರೋಧಿಸಿದವರು ಮತ್ತು ಮತಾಂತರ ಎಂಬುದು ದೇವರು ಮತ್ತು ಮಾನವೀಯತೆಯ ವಿರುದ್ಧ ನಡೆಸಲಾಗುತ್ತಿರುವ ಅಪರಾಧ ಎಂದೇ ಪರಿಗಣಿಸಿದವರು. ಅವರ ಕಾಲದಲ್ಲಿ ಪ್ರವಾದಿ ಆಧಾರಿತ ಧರ್ಮಗಳು ಬೃಹತ್ ಮಟ್ಟದಲ್ಲಿ ಮತಾಂತರದಲ್ಲಿ ತೊಡಗಿದ್ದವು. ಧಾರ್ಮಿಕ ಮತಾಂತರ ಬ್ರಿಟಿಷ್ ಆಡಳಿತದ ಘೋಷಿತ ಮಿಷನ್ ಕೂಡ ಆಗಿತ್ತು. ಒಂದು ಕೈಯಲ್ಲಿ ಶಸ್ತ್ರಾಸ್ತ್ರ ಮತ್ತು ಇನ್ನೊಂದು ಕೈಯಲ್ಲಿ ಬೈಬಲ್ ಹಿಡಿದು ಧರ್ಮವನ್ನು ವಿಸ್ತರಿಸುವ ಕಾರ್ಯದಲ್ಲಿ ಧಾರ್ಮಿಕ ಮತ ಪ್ರಚಾರಕರು ತೊಡಗಿದ್ದರು. ಇವರು ವಸಾಹತು ಆಡಳಿತದಿಂದ ಧರ್ಮ ವಿಸ್ತರಿಸುವ ಅಧಿಕಾರವನ್ನು ಪಡೆದುಕೊಂಡಿದ್ದರು ಮತ್ತು ಇದಕ್ಕಾಗಿ ಪೋಪ್ ಅವರ ಬೆಂಬಲ ಗಿಟ್ಟಿಸಿಕೊಂಡಿದ್ದರು.
ಬ್ರಿಟಿಷ್ ಆಡಳಿತಕ್ಕೂ ಮುನ್ನ ಇಸ್ಲಾಮಿಕ್ ಆಡಳಿತಗಾರರು ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಕಾರ್ಯವನ್ನು ವ್ಯಾಪಕವಾಗಿ ನಡೆಸಿದ್ದರು. ಹಿಂದುಗಳ ಮೇಲೆ ಧಾರ್ಮಿಕ ತೆರಿಗೆಯನ್ನು ವಿಧಿಸಿದ್ದು ಕೂಡ ಮತಾಂತರವನ್ನು ಉತ್ತೇಜಿಸುವ ಒಂದು ಭಾಗವಾಗಿತ್ತು. ಖಡ್ಗ ಹಿಡಿದು ಮತಾಂತರ ಮಾಡುವ ಪ್ರಕ್ರಿಯೆ ನಿರಂತರವಾಗಿತ್ತು. ಬ್ರಿಟಿಷ್ ಆಡಳಿತದಲ್ಲಿ ಈ ಪ್ರಕ್ರಿಯೆ ಮುಂದುವರೆಯಿತು ಮತ್ತು ಇಲ್ಲಿ ಮಿಷನರಿಗಳು ಅತ್ತಂತ ವ್ಯವಸ್ಥಿತವಾದ ರೀತಿಯಲ್ಲಿ ಮತಾಂತರವನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಪ್ರವಾದಿ ಆಧರಿತ ಧರ್ಮಗಳಲ್ಲಿ ಮತಾಂತರ ಮಾಡುವುದು ಒಂದು ನ್ಯಾಯ ಸಮ್ಮತವಾದ ಕಾರ್ಯ ಮತ್ತು ಇಂತಹ ಕಾರ್ಯ ನಡೆಸುವವರು ಸ್ವರ್ಗವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ತಮ್ಮ ದೇವರೇ ಸರ್ವಶ್ರೇಷ್ಠ ಮತ್ತು ಉಳಿದ ನಂಬಿಕೆಗಳ ದೇವರು ಸುಳ್ಳು ಎಂಬುದು ಇವರ ಮೂಲ ನಂಬಿಕೆ.
ಗಾಂಧೀಜಿಯವರು ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ಅನೇಕ ಆಪ್ತ ಸ್ನೇಹಿತರನ್ನು ಹೊಂದಿದ್ದರು. ಅವರ ಧರ್ಮಗಳನ್ನು ಅತೀವವಾಗಿ ಗೌರವಿಸುತ್ತಿದ್ದರು. ಹೀಗಾಗಿ ಗಾಂಧೀಜಿಯವರನ್ನು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಅನೇಕ ಪ್ರಯತ್ನಗಳು ನಡೆದಿದ್ದವು. ಆದರೆ ಅವರನ್ನು ಮನವೊಲಿಸುವ ಕಾರ್ಯ ಕೈಗೂಡಲಿಲ್ಲ. ಗಾಂಧೀಜಿ ತಮ್ಮ ಆಧ್ಯಾತ್ಮಿಕ ನಂಬಿಕೆಗಳನ್ನು ಬಿಟ್ಟುಕೊಡಲು ನಿರಾಕರಿಸಿದರು. ತಾನು ಸನಾತನ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಜೀವನದುದ್ದಕ್ಕೂ ತನ್ನ ನಂಬಿಕೆಯ ಸಾರವನ್ನು ಅರಿತುಕೊಂಡು ಅವರು ಜೀವಿಸಿದರು. ಸನಾತನ ಹಿಂದೂ ಎಂದರೆ ಸತ್ಯ ಮತ್ತು ಅಹಿಂಸೆ ಯನ್ನು ಪದಗಳಲ್ಲಿ, ಕಾರ್ಯಗಳಲ್ಲಿ ಮತ್ತು ಮನಸ್ಸಿನಲ್ಲಿ ಪಾಲಿಸಿಕೊಂಡು ಬದುಕುವವನು. ಸತ್ಯ ಮತ್ತು ಅಹಿಂಸೆಯೇ ತನ್ನ ಧರ್ಮದ ಸಾರ ಎಂದು ಗಾಂಧೀಜಿ ನಂಬಿದ್ದರು. ಆಧ್ಯಾತ್ಮಿಕತೆಯ ಮೂಲಕ ಗಾಂಧೀಜಿ ಜನರ ಜೀವನದಲ್ಲಿ ಸತ್ಯ ಮತ್ತು ಅಹಿಂಸೆಯನ್ನು ಪಾಲಿಸುವ ಅರಿವು ಮೂಡಿಸಿದರು. ಸತ್ಯ ಮತ್ತು ಅಹಿಂಸೆ ಪ್ರತಿ ಧರ್ಮದ ಸಾರವಾಗಿದೆ ಎಂಬುದು ಅವರ ನಂಬಿಕೆಯಾಗಿತ್ತು. ಹೀಗಾಗಿ ಅವರು ತನ್ನ ಧರ್ಮ ಇತರ ಧರ್ಮಗಳಿಗೆ ಗೌರವ ನೀಡುತ್ತದೆ ಎಂಬುದನ್ನು ಅರಿತು ಕೊಂಡಿದ್ದರು. ಕ್ರಿಶ್ಚಿಯನ್, ಇಸ್ಲಾಂ, ಜೋರಾಸ್ಟ್ರಿಯನಿಸಂ ಇತ್ಯಾದಿಗಳು ಹಿಂದೂ ಧರ್ಮದ ಸಾರವನ್ನು ಒಳಗೊಂಡಿದೆ ಎಂದು ಅವರು ಹೇಳುತ್ತಿದ್ದರು. ಮೂಲಭೂತವಾಗಿಯೇ ಒಂದು ಧರ್ಮ ಇನ್ನೊಂದು ಧರ್ಮಕ್ಕೆ ಸಮಾನವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. ಗಾಂಧೀಜಿ ಎಂದಿಗೂ ಧರ್ಮವನ್ನು ಆಚರಣೆಗಳು ಮತ್ತು ಪದ್ಧತಿಗಳ ಮೂಲಕ ಗುರುತಿಸುತ್ತಿರಲಿಲ್ಲ, ಆಚರಣೆ ಮತ್ತು ಪದ್ಧತಿಗಳು ಧರ್ಮದ ಒಂದು ಭಾಗ ಮಾತ್ರ ಎಂದು ಅವರು ನಂಬಿದ್ದರು. ಒಬ್ಬ ನೈಜ ಧಾರ್ಮಿಕ ವ್ಯಕ್ತಿ ಜೀವನದ ಕೊನೆಯವರೆಗೂ ಸೇವೆಯಲ್ಲೇ ಸಾಕ್ಷಾತ್ಕಾರವನ್ನು ಕಂಡುಕೊಳ್ಳುತ್ತಾನೆ, ಯಾವುದೇ ಕಾರ್ಯ ಮಾಡಿದರೂ ಅದು ದೇವರಿಗೆ ಮಾಡುವ ಕಾರ್ಯವಾಗುತ್ತದೆ ಎಂದು ಗಾಂಧಿ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಪ್ರತಿಪಾದಿಸುತ್ತಿದ್ದರು.
ಧರ್ಮಗಳಿಗೆ ಸಂಬಂಧಿಸಿದ ಆಚರಣೆಗಳು ಮತ್ತು ಸಂಪ್ರದಾಯಗಳು ಆ ಧರ್ಮವನ್ನು ಆಚರಿಸುವ ಜನರ ಸಂದರ್ಭದ ಆಧಾರದ ಮೇಲೆ ವಿಕಸನಗೊಂಡಿವೆ. ಸಂದರ್ಭವೂ ಸ್ಥಳದಿಂದ ಸ್ಥಳಕ್ಕೆ ಮತ್ತು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಧಾರ್ಮಿಕ ನಂಬಿಕೆಗಳಿಗೆ ತರ್ಕಬದ್ಧ ಆಧಾರವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಧರ್ಮಗಳು ಜ್ಞಾನ ಶಾಸ್ತ್ರದ ಮೇಲೆ ಅವಲಂಬಿತವಾಗಿವೆ. ಎಲ್ಲೆಲ್ಲಿ ಕಾರಣ ಮತ್ತು ನಂಬಿಕೆಯ ನಡುವೆ ಸಂಘರ್ಷವಿದೆಯೋ ಅಲ್ಲಿ ನಿಜವಾದ ನಂಬಿಕೆಯು ಕಾರಣಕ್ಕಿಂತ ಹೆಚ್ಚಾಗಿ ಬೇರೂರಿರುತ್ತದೆ. ತರ್ಕಬದ್ಧ ವಲ್ಲದ ನಂಬಿಕೆಗಳು ತಾರ್ಕಿಕ ಚರ್ಚೆಯ ವಿಷಯವಾಗಿರುವುದಿಲ್ಲ ಮತ್ತು ತರ್ಕಬದ್ಧವಲ್ಲದ್ದನ್ನು ಚರ್ಚೆಸುವುದು ಕೂಡ ಅಸಂಬದ್ಧವಾಗಿದೆ. ಹೀಗಾಗಿ ಒಂದು ಧರ್ಮ ಇನ್ನೊಂದು ಧರ್ಮಕ್ಕಿಂತ ಶ್ರೇಷ್ಠ ಎಂದು ವಾದಿಸುವುದೇ ಅರ್ಥಹೀನ. ಹೀಗಾಗಿಯೇ ಗಾಂಧೀಜಿ ಒಂದು ಧರ್ಮವನ್ನು ಇನ್ನೊಂದು ಧರ್ಮದೊಂದಿಗೆ ಹೋಲಿಸುವ ಕಲ್ಪನೆಯನ್ನೇ ತಿರಸ್ಕರಿಸಿದರು. ಸಂಪ್ರದಾಯಗಳು ಮತ್ತು ಆಚರಣೆಗಳು ಧರ್ಮದ ಬಾಹ್ಯ ಹೊದಿಕೆ ಎಂದು ಗಾಂಧೀಜಿ ನಂಬಿದ್ದರು. ಬಾಹ್ಯ ಉಡುಗೆ-ತೊಡುಗೆಗಳು ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿ ಧರ್ಮ ಹುಟ್ಟುವ ಸಂದರ್ಭಕ್ಕೆ ಅನುಗುಣವಾಗಿ ಇರುತ್ತವೆ. ಆದರೆ ಎಲ್ಲಾ ಧರ್ಮಗಳ ಆಧ್ಯಾತ್ಮಿಕತೆಯು ಒಂದೇ ಆಗಿರುತ್ತದೆ. ಸಂಪ್ರದಾಯಗಳು ಮತ್ತು ಆಚರಣೆಗಳು ಧರ್ಮದ ಭಾಗವಾಗಿದ್ದರೂ, ಆಚರಣೆಗಳು ಮತ್ತು ಪದ್ಧತಿಗಳು ಆಧ್ಯಾತ್ಮಿಕತೆಯನ್ನು ಅನುಭವಿಸಲು ಸಾಕಾಗುವುದಿಲ್ಲ. ಎಲ್ಲದಕ್ಕೂ ಮಿಗಿಲಾಗಿ, ಪ್ರತಿಯೊಂದು ಧರ್ಮ ಕೂಡ ಬಡವನಿಗೆ ಸೇವೆ ಸಲ್ಲಿಸುವುದನ್ನು ಪರಮ ಗುರಿ ಎಂದು ಸಾರುತ್ತವೆ. ಆಧ್ಯಾತ್ಮಿಕತೆಯು ಧಾರ್ಮಿಕ ವ್ಯಕ್ತಿಯ ಪ್ರತಿಯೊಂದು ಕಾರ್ಯಕ್ಕೂ ಮಾರ್ಗದರ್ಶನ ನೀಡಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು. ಮನುಷ್ಯನ ಕಾರ್ಯ ಸ್ವಾರ್ಥದಿಂದ ಕೂಡಿರಬಾರದು, ಸ್ವಾರ್ಥ ಆಧ್ಯಾತ್ಮಿಕತೆಗೆ ವಿರುದ್ಧವಾಗಿದೆ ಎಂದು ನಂಬಿದ್ದರು. ಇದೇ ಅರ್ಥದಲ್ಲಿ ಅವರು, ಧರ್ಮವಿಲ್ಲದ ರಾಜಕೀಯ ಹಾನಿಕಾರಕ, ರಾಜಕೀಯವು ಸಮಾಜದ ದೀನದಲಿತರ ಹಿತಕ್ಕಾಗಿ ಇರಬೇಕು ಎಂದಿದ್ದರು. ಆಧ್ಯಾತ್ಮಿಕತೆ ಎಲ್ಲಾ ಧರ್ಮಗಳ ಮೂಲ ಅಂಶವಾಗಿದೆ ಮತ್ತು ಪ್ರತಿಯೊಂದು ಧರ್ಮವೂ ಆಧ್ಯಾತ್ಮಿಕತೆಯ ಸಾಕ್ಷಾತ್ಕಾರವನ್ನು ಗುರಿಯಾಗಿಸಿಕೊಂಡಿದೆ, ಹೀಗಿರುವಾಗ ಧಾರ್ಮಿಕ ಮತಾಂತರದಲ್ಲಿ ಯಾವುದೇ ಅರ್ಥವಿಲ್ಲ ಎಂದು ಅವರು ನಂಬಿದ್ದರು. ಒಬ್ಬ ವ್ಯಕ್ತಿ ತನ್ನ ಧಾರ್ಮಿಕ ನಂಬಿಕೆಗೆ ಅನುಗುಣವಾಗಿಯೇ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬಹುದು, ಇದಕ್ಕಾಗಿ ಒಂದು ಧರ್ಮವನ್ನು ತ್ಯಜಿಸಿ ಇನ್ನೊಂದನ್ನು ಸ್ವೀಕರಿಸುವ ಅಗತ್ಯವೇ ಇಲ್ಲ. ಸ್ವರ್ಗ ಮತ್ತು ಮೋಕ್ಷಕ್ಕಾಗಿ ಇನ್ನೊಂದು ಧರ್ಮವನ್ನು ಸ್ವೀಕರಿಸುವ ವ್ಯಕ್ತಿ ತನ್ನ ಧರ್ಮದ ಸಾರವನ್ನು ತಿಳಿಯದ ಮೂರ್ಖ. ಸ್ವಾರ್ಥ ಮತ್ತು ಕ್ರೂರತೆಯ ಮೂಲಕ ಇನ್ನೊಂದು ಧರ್ಮದ ವ್ಯಕ್ತಿಗಳನ್ನು ಧರ್ಮಕ್ಕೆ ಸೇರಿಸಿಕೊಂಡು ಧರ್ಮವನ್ನು ವಿಸ್ತರಿಸುವ ಮನೋಭಾವದವರು ಕೂಡ ಮೂರ್ಖರು. ಹೀಗಾಗಿಯೇ ಕಾನೂನಿನ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸಲು ಗಾಂಧೀಜಿ ಸೂಚಿಸಿದರು.
ಕಲೆ, ವಿಜ್ಞಾನ ಮತ್ತು ರಾಜಕೀಯ ಧರ್ಮದಿಂದ ಮುಕ್ತವಾಗಿರಬೇಕು ಎಂಬ ಕಲ್ಪನೆಯನ್ನು ಗಾಂಧೀಜಿ ವಿರೋಧಿಸುತ್ತಿದ್ದರು. ಯಾಕೆಂದರೆ ಧರ್ಮ ಎಂಬುದು ಉತ್ತಮ ಕಾರ್ಯದ ಅಸ್ತ್ರ ಎಂದು ಗಾಂಧೀಜಿ ನಂಬಿದ್ದರು. ಆಧ್ಯಾತ್ಮಿಕತೆ ರಾಜಕೀಯ ಚಟುವಟಿಕೆ ಸೇರಿದಂತೆ ಎಲ್ಲ ಮಾನವ ಕಾರ್ಯಗಳ ಭಾಗವಾಗಿರಬೇಕು ಎಂದು ಗಾಂಧಿ ವಾದಿಸಿದರು. ತಮ್ಮ ತಾಯಿನಾಡಿನ ಸ್ವಾತಂತ್ರ್ಯದ ಹೋರಾಟದಲ್ಲಿ ಆಧ್ಯಾತ್ಮಿಕತೆಯನ್ನು ಮಾರ್ಗದರ್ಶಕ ಶಕ್ತಿಯಾಗಿ ಬಳಸಿಕೊಂಡ ಕೆಲವೇ ನಾಯಕರಲ್ಲಿ ಗಾಂಧೀಜಿ ಒಬ್ಬರು.
ತಮ್ಮ ಧರ್ಮ ಸರ್ವಶ್ರೇಷ್ಠ, ತಮ್ಮ ದೇವರು ಮಾತ್ರ ಸತ್ಯ ಉಳಿದೆಲ್ಲವೂ ಸುಳ್ಳು ಎಂದು ಪ್ರತಿಪಾದಿಸುತ್ತಾ, ತಮ್ಮ ಧರ್ಮವನ್ನು ಸ್ವೀಕರಿಸಿದರು ಜೀವನದ ಎಲ್ಲಾ ಸಮಸ್ಯೆಗಳಿಂದ ಹೊರ ಬರುತ್ತಾರೆ ಎನ್ನುವ ಭ್ರಮೆಯನ್ನು ಬಿತ್ತಿ ತಮ್ಮ ಧರ್ಮದ ವಿಸ್ತರಣೆಯಲ್ಲಿ ತೊಡಗಿರುವವರು ಗಾಂಧೀಜಿಯ ತತ್ವಗಳನ್ನು ಅರಿತುಕೊಂಡರೆ ಬಹುಶಃ ಅವರ ಮನಸ್ಸು ಪರಿವರ್ತನೆಯಾಗಬಹುದು.
✍️ ಶರಣ್ಯ ಶೆಟ್ಟಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.