ನವದೆಹಲಿ: ಪಾಕಿಸ್ಥಾನದ ತಾಲಿಬಾನ್ ಸ್ನೇಹಿ ನಡೆಯಿಂದಾಗಿ ಸೆಪ್ಟೆಂಬರ್ 25ರಂದು ನ್ಯೂಯಾರ್ಕ್ನಲ್ಲಿ ನಡೆಯಬೇಕಾಗಿದ್ದ ಸಾರ್ಕ್ ವಿದೇಶಾಂಗ ಸಚಿವರ ಔಪಚಾರಿಕ ಸಭೆಯು ರದ್ದಾಗಿದೆ.
“ಎಲ್ಲಾ ರಾಷ್ಟ್ರಗಳ ನಡುವೆ ಒಮ್ಮತದ ಕೊರತೆಯಿಂದಾಗಿ ಸೆಪ್ಟೆಂಬರ್ 25ರಂದು ನಡೆಯಬೇಕಾಗಿದ್ದ ಸಾರ್ಕ್ ಸಚಿವ ಮಂಡಳಿಯ ಔಪಚಾರಿಕ ಸಭೆಯು ರದ್ದಾಗಿದೆ” ಎಂದು ಮೂಲಗಳು ವರದಿ ಮಾಡಿವೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76ನೇ ಅಧಿವೇಶನದ ಭಾಗವಾಗಿ ಸಾರ್ಕ್ ಸಚಿವರ ಸಭೆ ನಡೆಯಬೇಕಾಗಿತ್ತು. ಆದರೆ ಈ ಸಭೆಯಲ್ಲಿ ಅಪಘಾನಿಸ್ಥಾನದ ಪರವಾಗಿ ತಾಲಿಬಾನ್ ಮುಖಂಡರು ಭಾಗವಹಿಸಬೇಕು ಎಂದು ಪಾಕಿಸ್ತಾನ ಪಟ್ಟು ಹಿಡಿದ ಪರಿಣಾಮ ಸಭೆಯನ್ನು ರದ್ದುಗೊಳಿಸಲಾಗಿದೆ.
ಸಾರ್ಕ್ 8 ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಪಘಾನಿಸ್ತಾನವನ್ನು ಒಳಗೊಂಡಿದೆ. ಸಾರ್ಕ್ ಸಭೆಯಲ್ಲಿ ಅಪಘಾನಿಸ್ತಾನದ ಹಿಂದಿನ ಅಶ್ರಫ್ ಘನಿ ಸರಕಾರದ ಪ್ರತಿನಿಧಿ ಪಾಲ್ಗೊಳ್ಳುವುದರಲ್ಲಿದ್ದರು. ಇದನ್ನು ಪಾಕಿಸ್ತಾನ ವಿರೋಧಿಸಿದೆ.
ಪಾಕಿಸ್ತಾನ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಅಸ್ತಿತ್ವದಲ್ಲಿರುವ ತಾಲಿಬಾನ್ ಆಡಳಿತವನ್ನು ವಿದೇಶಾಂಗ ಸಚಿವರ ಸಭೆಯಲ್ಲಿ ಪ್ರತಿನಿಧಿಯನ್ನು ಕಳುಹಿಸಲು ಅನುಮತಿ ನೀಡುವಂತೆ ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸಿದೆ. ಆದರೆ ಇದನ್ನು ಸದಸ್ಯ ರಾಷ್ಟ್ರಗಳು ವಿರೋಧಿಸಿವೆ. ಹೀಗಾಗಿ ಎಲ್ಲ ರಾಷ್ಟ್ರಗಳ ನಡುವೆ ಒಮ್ಮತವಿಲ್ಲದ ಕಾರಣ ಸಭೆಯನ್ನು ರದ್ದುಗೊಳಿಸಲಾಗಿದೆ. ಪ್ರಪಂಚದಾದ್ಯಂತದ ಸರ್ಕಾರಗಳು ಹೊಸ ತಾಲಿಬಾನ್ ಆಡಳಿತವನ್ನು ಇನ್ನೂ ಗುರುತಿಸಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.