ಗಾಂಧೀನಗರ: ಜಪಾನಿನಲ್ಲಿ ನಡೆಯುತ್ತಿರುವ ಟೊಕಿಯೋ ಒಲಿಂಪಿಕ್ಸ್ 2020 ರಲ್ಲಿ ಹಾಕಿ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ತಂಡಕ್ಕೆ ಗುಜರಾತ್ನ ವಜ್ರದ ವ್ಯಾಪಾರಿಯೊಬ್ಬರು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.
ಗುಜರಾತ್ನ ಬಿಲಿಯನೇರ್ ವಜ್ರ ವ್ಯಾಪಾರಿ ಹರಿ ಕೃಷ್ಣ ಗ್ರೂಪ್ ಸಂಸ್ಥೆಯ ಸಾವ್ಜಿ ಧೊಲಾಕಿಯಾ ಅವರು, ಭಾರತದ ಮಹಿಳಾ ಹಾಕಿ ತಂಡ ಚಿನ್ನ ಗೆದ್ದರೆ ಆ ತಂಡದ ಸದಸ್ಯರಿಗೆ ಅದ್ದೂರಿ ಬಹುಮಾನಗಳನ್ನು ನೀಡುವುದಾಗಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದರು. ಹಾಗೆಯೇ ಆಟಗಾರರಿಗೆ ಅವರ ಕನಸಿನ ಮನೆಯ ನಿರ್ಮಾಣಕ್ಕೆ ತಲಾ 11 ಲಕ್ಷ ರೂ. ಗಳನ್ನು ನೀಡುವುದಾಗಿಯೂ ತಿಳಿಸಿದ್ದರು. ಅದರಂತೆ ಅವರು ಮಹಿಳಾ ಹಾಕಿ ತಂಡದ ಪ್ರತಿಯೊಬ್ಬ ಕ್ರೀಡಾಪಟುವಿಗೂ 11 ಲಕ್ಷ ರೂ., ಒಂದೊಂದು ಕಾರ್ ಉಡುಗೊರೆ ನೀಡುವುದಾಗಿ ಹೇಳಿದ್ದಾರೆ.
ಸಾವ್ಜಿ ಅವರು ಭಾರತೀಯ ಹಾಕಿ ತಂಡದ ಬಗ್ಗೆ ಟ್ವೀಟ್ ಮಾಡಿದ್ದು, ಒಲಿಂಪಿಕ್ಸ್ನಲ್ಲಿ ಭಾಗವಹಿಸಿರುವ ಭಾರತೀಯ ಮಹಿಳಾ ಹಾಕಿ ತಂಡವನ್ನು ಗೌರವಿಸಲು ಎಚ್ಕೆ ಗ್ರೂಪ್ ನಿರ್ಧರಿಸಿದೆ. ಈ ತಂಡದ ಆಟಗಾರರ ಬಗ್ಗೆ ನನ್ನ ಮನಸ್ಸಿನಲ್ಲಿ ಅಪಾರ ಅಭಿಮಾನವಿದೆ. ಈ ಅವಕಾಶವನ್ನು ಬಳಸಿಕೊಂಡು ನಾನು ಅವರಿಗೆ ಉಡುಗೊರೆಗಳನ್ನು ವಿತರಿಸಲು ಇಚ್ಛೆ ಪಡುತ್ತೇನೆ. ತಮ್ಮ ಕನಸಿನ ಮನೆಯ ನಿರ್ಮಾಣಕ್ಕೆ ತಂಡದ ಪ್ರತಿಯೊಬ್ಬ ಆಟಗಾರರಿಗೂ 11 ಲಕ್ಷ ರೂ. ನೀಡುತ್ತೇನೆ. ಟೊಕಿಯೋ ಒಲಿಂಪಿಕ್ಸ್ನಲ್ಲಿ ನಮ್ಮ ಹುಡುಗಿಯರು ಇತಿಹಾಸ ಬರೆಯುತ್ತಿದ್ದಾರೆ. ನಮ್ಮ ಆಟಗಾರರ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮದೊಂದು ಪ್ರಯತ್ನ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.