ನವದೆಹಲಿ: ದೇಶದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡಿರುವ ಹೊಸ ವ್ಯವಸ್ಥೆ ʼಇ ರುಪಿʼಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ.
ನಗದು ರಹಿತ, ಸಂಪರ್ಕ ರಹಿತ ಡಿಜಿಟಲ್ ಪಾವತಿ, ಸೇವಾ ಪ್ರಾಯೋಜಕರು ಹಾಗೂ ಫಲಾನುಭವಿಗಳನ್ನು ಡಿಜಿಟಲ್ ರೂಪದಲ್ಲಿ ಸಂಪರ್ಕಿಸಲು, ವಿವಿಧ ಕಲ್ಯಾಣ ಸೇವೆಗಳು ಸೋರಿಕೆ ರಹಿತವಾಗಿ ಫಲಾನುಭವಿಗಳಿಗೆ ತಲುಪುವ ನಿಟ್ಟಿನಲ್ಲಿ ಈ ವ್ಯವಸ್ಥೆ ಪ್ರಯೋಜನಕಾರಿ ಎಂದು ಮೋದಿ ಹೇಳಿದ್ದಾರೆ.
ಈ ವ್ಯವಸ್ಥೆಯು ಡಿಬಿಟಿ ಯೋಜನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಬ್ಸಿಡಿಗಳನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿಯೂ ಈ ವ್ಯವಸ್ಥೆ ಪೂರಕವಾಗಿರಲಿದೆ. ಪ್ರಸ್ತುತ ದೇಶವು ಡಿಜಿಟಲ್ ಆಡಳಿತಕ್ಕೆ ಹೊಸ ಆಯಾಮಗಳನ್ನು ನೀಡುತ್ತಿದ್ದು ಇದು ಉದ್ದೇಶಿತ ವ್ಯವಸ್ಥೆಯಲ್ಲಿ ಪಾರದರ್ಶಕ, ಸೋರಿಕೆಮುಕ್ತ ವಿತರಣೆಯಲ್ಲಿ ಹೆಚ್ಚು ಪೂರಕವಾಗಲಿದೆ. 21 ನೇ ಶತಮಾನದಲ್ಲಿ ತಂತ್ರಜ್ಞಾನ ಸಹಾಯದಿಂದ ಭಾರತ ಹೇಗೆ ಮುಂದುವರಿಯುತ್ತಿದೆ ಎಂಬುದಕ್ಕೆ ಇ ರುಪಿ ಸಾಕ್ಷಿಯಾಗಿದೆ. ಭಾರತದ 75 ನೇ ಸ್ವಾತಂತ್ರ್ಯ ಸಂದರ್ಭದಲ್ಲಿ ಈ ವ್ಯವಸ್ಥೆ ಆರಂಭವಾಗಿರುವುದು ಸಂತಸದಾಯಕ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ಇಂದು ತಂತ್ರಜ್ಞಾನದ ಮೂಲಕ ದೇಶದ ಬಡ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ತಂತ್ರಜ್ಞಾನ ಎಂಬುದು ದೇಶದ ಪ್ರಗತಿಯ ವಿಚಾರವಾಗಿ ಮಾರ್ಪಟ್ಟಿದೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಇ-ರುಪಿಯು ನಗದು ರಹಿತ, ಸಂಪರ್ಕ ರಹಿತ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಕ್ಯುಆರ್ ಕೋಡ್ ಅಥವಾ ಎಸ್ಎಂಎಸ್ ಆಧಾರಿತ ಇ-ವೋಚರ್ ಇದಾಗಿದೆ. ಇದನ್ನು ಫಲಾನುಭವಿಗಳ ಮೊಬೈಲ್ಗೆ ಕಳುಹಿಸಲಾಗುತ್ತದೆ. ಬಳಕೆದಾರರು ಇದನ್ನು ಒನ್ ಟೈಮ್ ಪಾವತಿ ಕಾರ್ಯ ವಿಧಾನದ ಮೂಲಕ ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ, ಇಂಟರ್ನೆಟ್ ಬ್ಯಾಂಕಿಗ್ ಬಳಸದೆಯೇ, ಸೇವಾ ಪೂರೈಕೆದಾರರಿಂದ ವೋಚರ್ ರಿಡೀಮ್ ಮಾಡಬಹುದು. ರಾಷ್ಟ್ರೀಯ ಪಾವತಿ ನಿಗಮವು ತನ್ನ ಯುಪಿಐ ವ್ಯವಸ್ಥೆಯಲ್ಲಿ ಇದನ್ನು ಅಭಿವೃದ್ಧಿ ಮಾಡಿದೆ. ಈ ವ್ಯವಸ್ಥೆಯಲ್ಲಿ ಮಾಹಿತಿ ಸೋರಿಕೆಯಾಗದಂತೆ ಗೌಪ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಈ ವ್ಯವಸ್ಥೆಯನ್ನು ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.