ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆ ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವಸತಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇವುಗಳಲ್ಲಿ ರಾಜ್ಯದ ವಸತಿ ಯೋಜನೆಗಳಡಿ ನಿರ್ಮಿಸುವ 5 ಲಕ್ಷ ಮನೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆ ಸೇರಿವೆ. ಮನೆ ನಿರ್ಮಿಸಲು ಪರಿಶಿಷ್ಟ ಫಲಾನುಭವಿಗಳಿಗೆ 1.75 ಲಕ್ಷ ಮತ್ತು ಇತರರಿಗೆ 1.20 ಲಕ್ಷ ರೂ. ಸಹಾಯಧನ ದೊರೆಯಲಿದೆ.
ಕೇಂದ್ರದ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳಿಗೆ ಫಲಾನುಭವಿಗಳಿಗೆ ಶೇ.60 ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ 48,000 ರೂ. ಸಹಾಯಧನ ಲಭ್ಯವಿದೆ. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 100 ಮನೆಗಳನ್ನು ಹಂಚಿಕೆ ಮಾಡಲಾಗುವುದು.
ಪ್ರಸ್ತುತ ನಿರ್ಮಾಣದ ವಿವಿಧ ಹಂತಗಳಲ್ಲಿರುವ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ಡಾ: ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜು ಅರಸು ವಸತಿ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗಳಡಿ ಮನೆಗಳನ್ನು ಪೂರ್ಣ ಮಾಡಲು 6,200 ಕೋಟಿ ರೂ.ಗಳ ಅಗತ್ಯವಿದೆ. ಹಂತ ಹಂತವಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ಬಹು ಮಹಡಿ ಯೋಜನೆಯಡಿ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 5 ಸಾವಿರ ಮನೆಗಳ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.