ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಮಳೆ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ ನೇತೃತ್ವದಲ್ಲಿ ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಬಳಿಕ ಸಿಎಂ ಮಾತನಾಡಿದ್ದು, ಕೃಷ್ಣಾ ಮತ್ತು ಭೀಮಾ ನದಿಯ ಜಲಾಯನ ಪ್ರದೇಶದಲ್ಲಿ ಪ್ರವಾಹದ ಪರಿಣಾಮಕಾರಿ ನಿರ್ವಹಣೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಎರಡೂ ರಾಜ್ಯಗಳ ಸಚಿವರು, ಕಾರ್ಯದರ್ಶಿಗಳ ಹಂತ, ಕೆಳಹಂತದ ಅಧಿಕಾರಿಗಳ ನಡುವೆ ಉತ್ತಮ ಸಂವಹನ, ಸಮನ್ವಯ ನಿರ್ವಹಿಸಲು ತೀರ್ಮಾನ ಕೈಗೊಂಡಿರುವುದಾಗಿ ಹೇಳಿದ್ದಾರೆ.
ಹಾಗೆಯೇ ಉಭಯ ರಾಜ್ಯಗಳ ಜಂಟಿ ಯೋಜನೆ ದೂಧ್ ಗಂಗಾ ಯೋಜನೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಮುಗಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ. ಇದರಿಂದ ಆ ಭಾಗದ ಜನರ ನೀರಾವರಿ ಸೌಲಭ್ಯ ಪಡೆಯುವ ಕನಸು ನನಸಾಗಲಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಬೇಸಿಗೆಯಲ್ಲಿ ಕರ್ನಾಟಕಕ್ಕೆ ಮಹಾರಾಷ್ಟ್ರ 4 ಟಿಎಂಸಿ ಅಡಿ ನೀರು ಮತ್ತು ಮಳೆಗಾಲದಲ್ಲಿ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಅಷ್ಟೇ ಪ್ರಮಾಣದಲ್ಲಿ ನೀರು ಒದಗಿಸುವ ಬಗ್ಗೆ ತಾಂತ್ರಿಕ ಸಮಿತಿ ರಚನೆಗೂ ಸಭೆಯಲ್ಲಿ ನಿರ್ಧರಿಸಿರುವುದಾಗಿ ಅವರು ಹೇಳಿದ್ದಾರೆ.
ಈ ಸಂಬಂಧ ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಕೃಷ್ಣ ಜಲಾಯನ ಪ್ರದೇಶಗಳಲ್ಲಿ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಉಭಯ ರಾಜ್ಯಗಳು ಚರ್ಚಿಸಿವೆ. ಈ ಸಂದರ್ಭದಲ್ಲಿ ಮಳೆಗಾಲದಲ್ಲಿ ಮಹಾರಾಷ್ಟ್ರ ಬಿಟ್ಟ ಮಳೆನೀರಿನ ಮಾಹಿತಿಯನ್ನು ಸಂಪೂರ್ಣವಾಗಿ ರಾಜ್ಯಕ್ಕೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.