News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅವಮಾನಿಸಲು ಕರೆಸಿದವರು ಬಿರುದುಕೊಟ್ಟು ಕಳುಹಿಸಿದರು


1947 ಹಳೆಯ ದೆಹಲಿಯ ಪುರಾನಾ ಕಿಲಾ. ದೇಶಕ್ಕೆ ಸ್ವಾತಂತ್ರ್ಯ ಬಂದು ಅತ್ತ ಲಾಲ್ ಕಿಲಾದಲ್ಲಿ ತಿರಂಗಾ ಹಾರಿ ಜನರು ಕುಣಿಯುತ್ತಿದ್ದರೆ ಪುರಾನಾ ಕಿಲಾಕ್ಕೆ ಆ ಭಾಗ್ಯವಿರಲಿಲ್ಲ. ಏಕೆಂದರೆ ಅದೇ ಹೊತ್ತಿಗೆ ದೇಶವೂ ತುಂಡಾಗಿ, ಪಾಕಿಸ್ಥಾನದಿಂದ ರಾಶಿರಾಶಿ ಹೆಣಗಳೂ, ಹಿಂಡುಹಿಂಡಾಗಿ ನಿರ್ವಸಿತರೂ ದಿಕ್ಕಿಲ್ಲದೆ ಬರುತ್ತಿದ್ದರು. ಆಗ ಅವರಿಗೆಲ್ಲಾ ತಾತ್ಕಾಲಿಕ ನೆಲೆಯನ್ನು ಕೊಟ್ಟಿದ್ದು ಈ ಪುರಾನಾ ಕಿಲಾ. ಹಳೆಯ ಕೋಟೆ. ಧ್ವಜ ಹಾರದ ಕೋಟೆ. ಹಾರಿಸಿದರೂ ಯಾರೂ ಸಂತೋಷ ಪಡದಿರುವಂಥ ಕೋಟೆ. ದೂರದ ಮುಲ್ತಾನ್, ಸಿಂಧ್, ಪಂಜಾಬ್‌ಗಳಿಂದ ಬಂದವರೆಲ್ಲಾ ಅಲ್ಲಿ ನೆರೆದು ಬೇರೆಯೇ ಆದ ಒಂದು ಭಾರತ ಅಲ್ಲಿ ನಿರ್ಮಾಣವಾಗಿತ್ತು. ಪುನರ್ವಸತಿ ಆಗುವವರೆಗೆ ಅವರಿಗೆಲ್ಲಾ ಅದೇ ಮನೆ. ಅದೇ ನೆಲೆ. ಅಂಥ ಒಂದು ದಿನ ಸಂಘಟನೆಯೊಂದು ನಿರ್ವಸಿತರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿತ್ತು. ಅಲ್ಲಿ ಹನ್ನೆರಡು ವರ್ಷದ ಬಾಲಕ ಜನರ ನಡುವೆ ನುಸುಳುತ್ತಿದ್ದ. ದೊಡ್ಡ ಕೈಗಳ ಮಧ್ಯೆ ಸಣ್ಣ ಕೈಗೆ ಪೊಟ್ಟಣಗಳು ಎಟುಕುತ್ತಿರಲಿಲ್ಲ. ದೊಡ್ಡ ಕೈಗಳು ಸಂತೃಪ್ತವಾದ ಮೇಲೆ ಹಸಿದಿದ್ದ ಆ ಬಾಲಕನಿಗೂ ಆಹಾರದ ಪೊಟ್ಟಣ ಸಿಕ್ಕಿತ್ತು.

ಆ ಬಾಲಕ ಮುಂದೆ ಫ್ಲೈಯಿಂಗ್ ಸಿಖ್ಖ್ ಎಂದೇ ಹೆಸರಾದ ಖ್ಯಾತ ಅಥ್ಲೆಟ್ ಮಿಲ್ಖಾ ಸಿಂಗ್. ಪುರಾನಾ ಕಿಲಾದಲ್ಲಿ ಆಹಾರದ ಪೊಟ್ಟಣವನ್ನು ವಿತರಿಸಿದ ಆ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರೆಸ್ಸೆಸ್ಸ್. ಆ ಬಾಲಕ ಫ್ಲೈಯಿಂಗ್ ಸಿಖ್ಖ್ ಆಗುವಲ್ಲಿ ಆ ಆಹಾರ ಪೊಟ್ಟಣದ ಪಾತ್ರವೂ ಇದೆ. ಯಾರೂ ಹೇಳದಿದ್ದರೂ, ಯಾರೂ ಬರೆಯದಿದ್ದರೂ, ಯಾರೂ ತೋರಿಸದಿದ್ದರೂ ಅದರ ಪಾತ್ರವನ್ನು, ಅಂದಿನ ಸತ್ಯವನ್ನು ಅಲ್ಲಗೆಳೆಯಲಾಗದು. ದೇಶವಿಭಜನೆಯ ಮಹಾದುರಂತದ ಒಂದು ಉಳಿಕೆ, ಒಂದು ಚಿಹ್ನೆ, ಒಂದು ಜೀವಂತ ಸ್ಮಾರಕವಾದವರು ಸರ್ದಾರ್ ಮಿಲ್ಖಾ ಸಿಂಗ್. ದೇಶ ವಿಭಜನೆಯ ಹೊತ್ತಲ್ಲಿ ಪಾಕಿಸ್ಥಾನದಿಂದ ಓಡಿ ಭಾರತಕ್ಕೆ ಬಂದವರಿಗೆಲ್ಲಾ ಲಾಲ್ ಕೃಷ್ಣ ಅಧ್ವಾನಿ, ಸರ್ದಾರ್ ಮನಮೋಹನ ಸಿಂಗರಾಗುವ ಅದೃಷ್ಟವಿರಲಿಲ್ಲ. ಅಂಥವರಲ್ಲಿ ಮಿಲ್ಖಾ ಸಿಂಗ್‌ರಂಥವರೇ ಹೆಚ್ಚಿದ್ದರೆಂಬುದು ಇತಿಹಾಸದ ವಾಸ್ತವ. ಅದು ತಿಳಿಯುವುದು ಮಿಲ್ಖಾ ಸಿಂಗನ The Race of my life ನಂಥ ಆತ್ಮಕಥೆಗಳಿಂದ. ಅಂದು ದೆಹಲಿಯಲ್ಲಿ ಕೂತವರ ಒಂದು ಸಹಿ ಸಾವಿರಾರು ಕುಟುಂಬಗಳ ಜೀವನದ ಮೇಲೆ ಚೆಲ್ಲಾಟವಾಡಿಬಿಟ್ಟಿತು ಎಂಬುದಕ್ಕೆ ಒಂದು ಉದಾಹರಣೆ ಗೋವಿಂದಪುರದ ಸರ್ದಾರ್ಜಿಯ ಕುಟುಂಬ. ಮತೀಯ ಆಧಾರದಲ್ಲಿ ಹೊಸ ದೇಶ ಹುಟ್ಟಿದಾಗ ವಿನಾಕಾರಣ ಪ್ರಾಣ ಕಳೆದುಕೊಳ್ಳಬೇಕಾದ ಎಷ್ಟೋ ಹಿಂದೂ- ಸಿಖ್ಖ್ ಕುಟುಂಬಗಳಂತೆಯೇ ಆ ಕುಟುಂಬವೂ ಒಂದು. ಅದು 15 ಜನರಿದ್ದ ತುಂಬು ಕುಟುಂಬ. ಅವರಲ್ಲಿ ಎಂಟು ಜನರು ವಿಭಜನೆಯ ಸಮಯದಲ್ಲಿ ನಡೆದ ನರಮೇಧದಲ್ಲಿ ಸತ್ತಿದ್ದರು. ಅವರಲ್ಲಿ ಉಳಿದಿದ್ದವರ ಪೈಕಿ ಒಬ್ಬಾತನೇ ಈ ಮಿಲ್ಖಾ ಸಿಂಗ್. ಆ ಸಮಯದ ಹಿಂದೂ-ಸಿಖ್ಖ್ ಪರಿಪಾಟಲನ್ನು ಕೇವಲ ಬೋಳುವಾರು ಮಹಮದ್ ಕುಂಞ ಯಂಥವರು ಮಾತ್ರ “ಸ್ವಾತಂತ್ರ್ಯದ ಓಟ” ಎಂದು ಕರೆಯಬಹುದೇ ಹೊರತು ಪಾಲಕರನ್ನು ಕಳೆದುಕೊಂಡ ಮಿಲ್ಖಾನ ಆತ್ಮಕಥನವನ್ನು ಸ್ವಾತಂತ್ರ್ಯದ ಓಟ ಎಂದಂತೂ ಕರೆಯಲಾಗದು. ಅದು ಎಲ್ಲವನ್ನೂ ಕಳೆದುಕೊಂಡವನ ಓಟ, ಸ್ವಾತಂತ್ರ್ಯವನ್ನೂ ಕಳೆದುಕೊಂಡವನ ಓಟ, ಪ್ರಾಣಭೀತಿಯ ಓಟ. ಹೀಗೆ ತನ್ನ ನಿಲ್ಲದ ಓಟವನ್ನು ಮಿಲ್ಕಾ ಸಿಂಗ್ ಮತ್ತು ಅವರ ಮಗಳು ಸೋನಿ ಸಾನ್‌ವಲ್ಕಾ ಬರೆದಿರುವ ಆತ್ಮಕಥನ ಈ The Race of my life . ಇದೀಗ ರಾಕೇಶ್ ಓಂಪ್ರಕಾಶ್ ಮಿಶ್ರಾ ಮಾಡಿರುವ “ಭಾಗ್ ಮಿಲ್ಕಾ ಭಾಗ್” ಸಿನೆಮಾ ಈ ಆತ್ಮಕಥನ ಆಧಾರಿತವಾದುದು. ಸಿನೆಮಾದ ಮಿತಿಯಲ್ಲಿ ಸಿನೆಮಾ ಬಂದಿದೆ. ಆದರೆ ಮಿಲ್ಖಾನ ಜೀವನದ ಮತ್ತಷ್ಟು ವಿವರಗಳನ್ನು ತಿಳಿಯಬೇಕೆಂದರೆ ಆತ್ಮಕಥನದ ವೊರೆ ಹೋಗಲೇ ಬೇಕು. ಅದು ಸಿನೆಮಾ ಕಟ್ಟಿಕೊಡುವ ಚಿತ್ರಗಳಿಗಿಂತಲೂ ಹತ್ತಿರವೂ, ಆಪ್ತವೂ ಆಗಿವೆ. ಅದರಲ್ಲಿ ಮತ್ತೊಬ್ಬ ಹೀರೋನ ಹಂಗಿಲ್ಲದೆ ನೇರವಾಗಿ ಮಿಲ್ಖಾನನ್ನು ನೋಡಬಹುದು. ಅದರ ಜೊತೆಗೆ ಸಿನೆಮಾದ ಪಾತ್ರವನ್ನು ಕೂಡಾ ಮೆಚ್ಚಲೇಬೇಕು. ಏಕೆಂದರೆ ಇನ್ನೇನು ಮರೆತುಹೋಗಲಿದೆ ಎನ್ನುವ ಮಹಾನ್ ಸಾಧಕನ ಚಿತ್ರಣವನ್ನು ದೇಶದ ಮುಂದಿಟ್ಟ ಶ್ರೇಯ ಸಿನೆಮಾಕ್ಕೆ ಸಲ್ಲಬೇಕು. ಸ್ವಾತಂತ್ರ್ಯ ಬಂದು ಕೇವಲ 13 ವರ್ಷಗಳಲ್ಲಿಯೇ ಒಲಂಪಿಕ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಕ್ರೀಡಾಪಟುವೊಬ್ಬ ಕ್ರಮೇಣ ಮರೆಯಾಗುವ ಹಾದಿಯಲ್ಲಿದ್ದ. ಏಕೆಂದರೆ ಆಧುನಿಕ ಪೀಳಿಗೆ ಕಣ್ಣುಬಿಡುವ ಹೊತ್ತಿಗೆ ಕಪಿಲ್ ದೇವ್ ಬಂದುಬಿಟ್ಟಿದ್ದ. ಪಿ.ಟಿ. ಉಷಾ ಭರವಸೆಯ ಓಟಗಾರ್ತಿಯಾಗಿ ಕಂಡಿದ್ದಳು. ಆಲ್ ಇಂಡಿಯಾ ರೇಡಿಯೋ “ಫ್ಲೈಯಿಂಗ್ ಸಿಖ್ಖ್ ಭಾಗವಹಿಸಲಿದ್ದಾರೆ”, “ಫ್ಲೈಯಿಂಗ್ ಸಿಂಗ್ ಪದಕ ಗೆದ್ದರು” ಎಂಬುದನ್ನು ಆಧುನಿಕ ಪೀಳಿಗೆ ಕೇಳಿರಲಿಲ್ಲ. ಕೊನೆಗೂ ಅದನ್ನು ಕೇಳಿಸಲು ಸಿನೆಮಾ ಬರಬೇಕಾಯಿತು.

The Race of my life ನಲ್ಲಿ ಮಿಲ್ಖಾ ಸಿಂಗ್ “ನಾನು ಗ್ರಾಮೀಣ ಪ್ರದೇಶದಿಂದ ಬಂದವನು. ನನಗೆ ಓಟದ ಸ್ಪರ್ಧೆ ಗೊತ್ತಿರಲಿಲ್ಲ. ಒಲಂಪಿಕ್ ಎಂದರೆ ಮೊದಲೇ ಗೊತ್ತಿರಲಿಲ್ಲ” ಎಂದು ಹೇಳಿಕೊಂಡಿದ್ದಾರೆ. ಅಂಥಾ ಮಿಲ್ಕಾ ಓಟದ ಹುಚ್ಚನ್ನು ಯಾವ ಪರಿಯಲ್ಲಿ ಹಿಡಿಸಿಕೊಂಡರೆಂದರೆ ರಾತ್ರಿಯೂ ಅಭ್ಯಾಸ ಮಾಡುವಷ್ಟು. ಅತಿ ಭಯಂಕರವೆನ್ನುವಂತೆ ಅಭ್ಯಾಸ ಮಾಡುತ್ತಿದ್ದ ಮಿಲ್ಖಾ ಸಿಂಗ್ ಓಡುತ್ತಾ ಓಡುತ್ತಾ ಒಮ್ಮೊಮ್ಮೆ ಬಿದ್ದೇ ಬಿಡುತ್ತಿದ್ದರು. ಹಲವು ಬಾರಿ ಮೂತ್ರದಲ್ಲಿ ರಕ್ತ ಹೋಗುತ್ತಿತ್ತು. “ಹಲವು ಬಾರಿ ನಾನು ಸಾವಿನ ಸಮೀಪಕ್ಕೆ ಹೋಗಿ ಬಂದಿದ್ದೇನೆ. ಈಗ ನನಗೆ ಸಾವಿನ ಭಯ ಇಲ್ಲ” ಎನ್ನುವುದು ಅವು ಓಡಿ ಓಡಿ ಗಳಿಸಿಕೊಂಡ ತಾಕತ್ತಿನ ಮಾತುಗಳು. ಒಮ್ಮೆ ಮಿಲ್ಖಾ ಸಿಂಗ್ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರನ್ನು ಹೀಗೆ ಪ್ರಶ್ನಿಸಿದ್ದರಂತೆ: “ಮೇಜರ್ ನಿಮ್ಮನ್ನು ಹಾಕಿ ಮಾಂತ್ರಿಕ ಎಂದು ಕರೆಯುತ್ತಾರಲ್ಲಾ ಏಕೆ? ಹೇಗೆ ಸಾಧ್ಯವಾಯಿತು?” . ಧ್ಯಾನ್‌ಚಂದ್ ‌ “ನಾನು ಕಠಿಣ ಅಭ್ಯಾಸ ಮಾಡುತ್ತೇನೆ. ಗೋಲುಕಂಬದ ನಡುವೆ ರಬ್ಬರ್ ಟಯರುಗಳನ್ನು ಇಟ್ಟು ಸತತವಾಗಿ 500 ಬಾರಿ ಚೆಂಡುಗಳನ್ನು ಬಾರಿಸುತ್ತೇನೆ. ಇದರಿಂದ ನನಗೆ ಪಟ್ಟುಗಳು ತಿಳಿಯುತ್ತಾ ಹೋಗುತ್ತವೆ” ಎಂದಿದ್ದರಂತೆ. ಆ ಮಾತು ಮಿಲ್ಖಾನಲ್ಲಿ ನಾಟಿತು. ಮತ್ತಷ್ಟು ಪರಿಶ್ರಮಪಡತೊಡಗಿದರು. ಒಮ್ಮೊಮ್ಮೆ ಇವರ ಬಟ್ಟೆಯಿಂದ ಹಿಂಡಿದ ಬೆವರುಗಳೇ ಒಂದೊಂದು ಬಕೇಟುಗಳನ್ನು ತುಂಬಿಸಿಬಿಡುತ್ತಿದ್ದುವಂತೆ. “ಇಂದಿನ ಕ್ರೀಡಾಪಟುಗಳು ಒಂದು ವರ್ಷದ ತರಬೇತಿಯಿಂದ ಬೀಗುತ್ತಾರೆ. ನಾವು ಅದಕ್ಕಾಗಿ 12 ವರ್ಷ ಕಷ್ಟಪಟ್ಟಿದ್ದೇವೆ. ಒಂದು ವೇಳೆ ಇಂದಿನ ಕಾಲದಲ್ಲಿ ಮಿಲ್ಖಾ ಸಿಂಗ್ ಹುಟ್ಟಿದಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ಮುಂದಿನ 100 ವರ್ಷಗಳು ಯಾರೂ ಮಾಡದಂಥ ಸಾಧನೆಯನ್ನು ಮಾಡಿರುತ್ತಿದ್ದೆ” ಎನ್ನುವ ಮಿಲ್ಖಾ ಸಿಂಗನಲ್ಲಿ ಮಿಲಿಟರಿಯವನು ಗಳಿಸಿಕೊಂಡ ಪೊಗರುತನ ಎದ್ದುಕಾಣುತ್ತವೆ. ಅದೇ ಆತನ ಆಸ್ತಿ ಎಂದೂ ಅನಿಸುತ್ತದೆ.

1956 ರ ಮೆಲ್ಬೋರ್ನ್ ಒಲಂಪಿಕ್‌ನಲ್ಲಿ 400 ಮೀ. ಕ್ವಾಲಿಫೈ ರೌಂಡ್‌ನಲ್ಲಿ ಮಿಲ್ಖಾ ಸಿಂಗ್ ಒಲಂಪಿಕ್‌ನಿಂದ ಹೊರನಡೆದಿದ್ದರು. ಆ 400 ಮೀ. ಓಟದಲ್ಲಿ ಚಾರ್ಲ್ಸ್ ಜೆನ್‌ಕಿನ್ಸ್ ಎಂಬ ಓಟಗಾರ ಬಂಗಾರದ ಪದಕ ಗೆದ್ದಿದ್ದರು. ಆತನ ಓಟವನ್ನು ಮೂಕವಾಗಿ, ಅಚ್ಚರಿಯಿಂದ ನೋಡುತ್ತಿದ್ದ ಮಿಲ್ಖಾ ಸಿಂಗ್ ಮುಂದೊಂದು ದಿನ ಆತನ ದಾಖಲೆಯನ್ನೇ ಮುರಿದು ಹಾಕಿದ್ದ. 1960 ರ ರೋಮ್ ಒಲಂಪಿಕ್‌ನಲ್ಲಿ ಫೈನಲ್‌ವರೆಗೂ ತಲುಪಿದ್ದ ಮಿಲ್ಖಾ ಸಿಂಗ್ ದೇಶದ ಭರವಸೆಯ ಓಟಗಾರರಾಗಿದ್ದರು. ದೇಶಕ್ಕೆ ದೇಶವೇ ಪದಕಕ್ಕಾಗಿ ಕಾದು ಕುಳಿತಿತ್ತು. ಪ್ರಧಾನಮಂತ್ರಿಗಳೇ ಶುಭ ಹಾರೈಸಿದ್ದರು. ಅದು ಸ್ವಾತಂತ್ರ್ಯ ಬಂದ 13 ನೇ ವರ್ಷ. ಒಲಂಪಿಕ್‌ನಲ್ಲಿ ವೈಯಕ್ತಿಕ ಪದಕದ ಭರವಸೆಯೆಂದರೆ ಅದು ನಿಜಕ್ಕೂ ದೇಶದ ಪಾಲಿನ ಹಿತಾನುಭವವೇ. ಆದರೆ ಮಿಲ್ಖಾ ಸಿಂಗ್ ಕೂದಲೆಳೆಯ ಅಂತರದಿಂದ ಕಂಚಿನ ಪದಕವನ್ನು ತಪ್ಪಿಸಿಕೊಂಡಿದ್ದರು. ನಾಲ್ಕನೆಯ ಸ್ಥಾನವನ್ನು ಪಡೆದಿದ್ದರು. ಆ ನಾಲ್ವರೂ ಏಕಕಾಲಕ್ಕೆ ಅದುವರೆಗಿದ್ದ ವಿಶ್ವ ದಾಖಲೆಯನ್ನು ಮುರಿದಿದ್ದರು. ಆ ಓಟವನ್ನು ವಿಶ್ವವೇ ಕಾತರದಿಂದ ನೋಡಿತ್ತು. ಮತ್ತು ಮಿಲ್ಖಾನನ್ನು ಬೆಂಬಲಿಸಿತ್ತು. ಆ ಸಿಖ್ಖ್‌ನ ಮುಖದ ಮುಗ್ಧತೆಗೋ, ಆತನ ವೇಷಕ್ಕೋ ಅಥವಾ ಓಟದಲ್ಲಿ ಎದ್ದು ಕಾಣುತ್ತಿದ್ದ ಪರಿಶ್ರಮಕ್ಕೋ ಮಿಲ್ಖಾನನ್ನು ವಿಶ್ವಮಟ್ಟದಲ್ಲಿ ಜನ ಗುರುತಿಸಿದ್ದರು. ಮಿಲ್ಖಾ ಪದಕ ಗೆಲ್ಲದಿದ್ದರೂ ಜಗತ್ತಿನ ಜನರ ಮನಸ್ಸನ್ನು ಗೆದ್ದಿದ್ದರು. ಆದರೆ ಸ್ವತಃ ಮಿಲ್ಖಾ ಇದರಿಂದ ನೊಂದರು. ಹಲವು ದಿನಗಳವರೆಗೆ ತಮ್ಮ ಕೋಣೆ ಬಿಟ್ಟು ಹೊರಗೆ ಬರಲೇ ಇಲ್ಲ. ಯಾರೊಂದಿಗೂ ಮಾತಾಡಲೇ ಇಲ್ಲ. ದೇಶದ ನಿರೀಕ್ಷೆಗಳನ್ನು ಹುಸಿ ಮಾಡಿಬಿಟ್ಟೆ ಎಂಬ ಸಂಕಟದಿಂದ ಬಳಲಿದರು. “ನನ್ನ ಜೀವನದಲ್ಲಿ ನಡೆದ ಎರಡು ಸಂಗತಿಗಳನ್ನು ನಾನು ಜೀವ ಇರುವವರೆಗೆ ಮರೆಯುವುದಿಲ್ಲ. ಒಂದು ನನ್ನ ಕಣ್ಣ ಮುಂದೆ ನನ್ನ ಹೆತ್ತವರನ್ನು ಕಳಕೊಂಡಿದ್ದು. ಇನ್ನೊಂದು ರೋಮ್ ಒಲಂಪಿಕ್‌ನಲ್ಲಿ ದೇಶದ ಭರವಸೆಯನ್ನು ಈಡೇರಿಸಲಾಗದೇ ಹೋಗಿದ್ದು” ಎಂದು The Race of my life ನಲ್ಲಿ ಹೇಳಿಕೊಂಡಿದ್ದಾರೆ.

ಸರ್ದಾರ್ ಮಿಲ್ಖಾ ಸಿಂಗ್ ಜೀವನದಲ್ಲಿ 1958 ಮಹತ್ತ್ವದ ವರ್ಷ. ಆ ವರ್ಷ ಜಪಾನಿನ ಟೋಕಿಯೋದಲ್ಲಿ ನಡೆದ ಏಷ್ಯನ್ ಗೇಮ್ಸ್ ಪಂದ್ಯಾವಳಿಯ 100 ಮೀಟರ್ ಓಟವನ್ನು ಪಾಕಿಸ್ಥಾನದ ಖ್ಯಾತ ಓಟಗಾರ ಅಬ್ಧುಲ್ ಖಾಲಿಖ್ ಗೆದ್ದಿದ್ದ. 400 ಮೀಟರ್ ವಿಭಾಗದಲ್ಲಿ ಮಿಲ್ಖಾ ಸಿಂಗ್ ಗೆದ್ದಿದ್ದರು. ಅಬ್ಧುಲ್ ಖಾಲಿಖ್ ಅದಾಗಲೇ ಏಷ್ಯಾದ ತೋಫಾನ್ ಎಂದು ಖ್ಯಾತನಾಗಿದ್ದವನು. ಮಿಲ್ಕಾ ಉದಯೋನ್ಮುಖ, ಭರವಸೆಯ ಓಟಗಾರನಾಗಿ ಬೆಳೆಯುತ್ತಿದ್ದವನು. ಮಾರನೇ ದಿನ ಇವರಿಬ್ಬರೂ 200 ಮೀಟರ್ ವಿಭಾಗದಲ್ಲಿ ಮುಖಾಮುಖಿಯಾಗುವವರಿದ್ದರು. ಅದೊಂದು ಜಿದ್ದಾಜಿದ್ದಿನ ಸ್ಪರ್ಧೆ. ಸಮಸ್ತ ಏಷ್ಯಾವೇ ಅದಕ್ಕಾಗಿ ಕಾದುಕುಳಿತಿತ್ತು. ಸಮಬಲದ ಓಟ ಕೊನೆಯವರೆಗೂ ಸಾಗಿತ್ತು. ಓಟ ಕೊನೆಗೊಂಡಾಗ ಪ್ರೇಕ್ಷಕರಿಗೆ ಇಬ್ಬರೂ ಒಟ್ಟೊಟ್ಟಿಗೆ ಗುರಿ ಮುಟ್ಟಿದಂತೆ ಕಾಣಿಸಿತು. ಆದರೆ ಆಯೋಜಕರು ಫೋಟೋ ಶೂಟ್‌ನಲ್ಲಿ ಪರಿಶೀಲಿಸಿದಾಗ ಮಿಲ್ಖಾ ಸಿಂಗ್ ಕೂದಲೆಳೆಯ ಅಂತರದಲ್ಲಿ ವೊದಲ ಸ್ಥಾನ ಪಡೆದಿದ್ದರು.

ಅದಾಗಲೇ ಪಾಕಿಸ್ಥಾನ ಮಿಲ್ಖಾ ಸಿಂಗ್‌ನತ್ತ ಒಂದು ಕಣ್ಣಿಟ್ಟಿತ್ತು.

1960. ರೋಮ್ ಒಲಂಪಿಕ್ ಮುಗಿದಿತ್ತು. 58 ರ ಏಷ್ಯನ್ ಗೇಮ್ಸ್ ಹೀರೋಗಳಾದ ಮಿಲ್ಖಾ ಸಿಂಗ್ ಮತ್ತು ಅಬ್ಧುಲ್ ಖಾಲಿಖ್ ಹೆಸರನ್ನಿಟ್ಟುಕೊಂಡು ಪಾಕಿಸ್ಥಾನ ಭಾರತದೊಂದಿಗೆ ಸ್ನೇಹಾಚಾರದ ಮಾತನ್ನಾಡತೊಡಗಿತು. ಪಾಕಿಸ್ಥಾನದ ಮಿಲಟರಿ ನಾಯಕ ಜನರಲ್ ಅಯೂಬ್ ಖಾನ್ ಲಾಹೋರಿನಲ್ಲಿ ಒಂದು ಕ್ರೀಡಾಕೂಟವನ್ನು ಆಯೋಜಿಸುವ ಪ್ರಸ್ಥಾಪವನ್ನು ಮುಂದಿಟ್ಟರು. ಆರಂಭದಲ್ಲಿ ಮಿಲ್ಖಾ ತಾನು ಪಾಕಿಸ್ಥಾನಕ್ಕೆ ಕಾಲಿಡಲಾರೆ ಎಂದು ಪಟ್ಟು ಹಿಡಿದು ಕೂತರು. “ಆ ನೆಲದಲ್ಲಿ ನನ್ನವರ ರಕ್ತದ ವಾಸನೆಯಿದೆ. ನಾನು ಅದನ್ನು ಸೇವಿಸಲಾರೆ” ಎಂದು ನೇರವಾಗಿ ಹೇಳಿದ್ದರು. ಆದರೆ ಪ್ರಧಾನಿ ನೆಹರೂ ಒತ್ತಾಯಕ್ಕೆ ಮಣಿದ ಮಿಲ್ಖಾ ಲಾಹೋರಿಗೆ ಹೋಗಲು ಒಪ್ಪಿದರು. ಆ ನೆನಪನ್ನು ಮಿಲ್ಖಾ ಹೀಗೆ ಉಲ್ಲೇಖಿಸಿದ್ದಾರೆ.‌ “ನಾವು ವಾಘಾ ಗಡಿಯ ಮೂಲಕ ಪಾಕಿಸ್ಥಾನಕ್ಕೆ ಪ್ರವೇಶಿಸಿದೆವು. ಎಲ್ಲೆಡೆ ಭವ್ಯ ಸ್ವಾಗತ ಸಿಕ್ಕಿತು. ಜನರು ಪಾಕಿಸ್ಥಾನ ಮತ್ತು ಭಾರತದ ಧ್ವಜಗಳನ್ನು ಹಿಡಿದಿದ್ದರು. ನಾನು ಅವರೆಲ್ಲರಿಗೆ ಕೈಯಾಡಿಸುತ್ತಾ ತೆರೆದ ಜೀಪಿನಲ್ಲಿ ಹೋಗುತ್ತಿದ್ದೆ. ದಾರಿಯುದ್ದಕ್ಕೂ ನನಗೆ ಫಲಕಗಳು ಕಂಡವು. ಅವುಗಳಲ್ಲಿ “ಮಿಲ್ಖಾ-ಖಾಲಿಖ್ ಕೀ ಟಕ್ಕರ್”, “ಇಂಡಿಯಾ-ಪಾಕಿಸ್ಥಾನ್ ಕೀ ಟಕ್ಕರ್” ಎಂಬ ಬರಹಗಳಿದ್ದವು. ಅದನ್ನು ನೋಡುತ್ತಾ ರೂಮಿಗೆ ಹೋಗಿ ಸೇರಿಕೊಂಡೆ. ಅಲ್ಲಿನ ಉರ್ದು ಪತ್ರಿಕೆಗಳೂ ಹಾಗೆಯೇ ಬರೆದಿತ್ತು. ಅಷ್ಟರಲ್ಲೇ ನನಗೆ ಎಲ್ಲವೂ ಅರ್ಥವಾಗಿತ್ತು. ಪಾಕಿಸ್ಥಾನ ಟೋಕಿಯೋದಲ್ಲಿನ ಸೋಲಿನ ಸೇಡನ್ನು ತೀರಿಸಿಕೊಳ್ಳಲು ನನ್ನನ್ನು ಇಲ್ಲಿಗೆ ಆಮಂತ್ರಿಸಿತ್ತು. ಪಾಕಿಸ್ಥಾನಕ್ಕೆ ಭಾರತದೊಂದಿಗಿನ ಸ್ನೇಹಕ್ಕಿಂತ ನಾನು ಅಬ್ದುಲ್ ಖಾಲಿಖ್‌ಗಿಂತ ಶಕ್ತನೇ, ಅಶಕ್ತನೇ ಎಂದು ನೋಡುವುದು ಪಾಕಿಸ್ಥಾನದ ಅಸಲು ಉದ್ದೇಶವಾಗಿತ್ತು”.

ಲಾಹೋರಿನ ಆ ಸ್ಟೇಡಿಯಂನಲ್ಲಿ ಅಂದು 7000 ಜನರು ಕಿಕ್ಕಿರಿದು ಸೇರಿದ್ದರು. ಅಯೂಬ್ ಖಾನನೇ ಪಂದ್ಯಾವಳಿ ಕ್ಷಿಸಲು ಬಂದಿದ್ದ. ಓಟ ಪ್ರಾರಂಭವಾಯಿತು. ಅಬ್ದುಲ್ ಖಾಲಿಖ್ ಆರಂಭದಿಂದಲೂ ಮುನ್ನಡೆಯನ್ನು ಕಾಯ್ದುಕೊಂಡು ಓಡತೊಡಗಿದ. ಆದರೆ ಕೊನೆಯ 50 ಮೀಟರ್ ಅಂತರದಲ್ಲಿ ಗತಿಯೇ ಬದಲಾಯಿತು. ಮಿಲ್ಕಾ ಚಿರತೆಯಂತೆ ಒಮ್ಮೆಲೆ ವೇಗವನ್ನು ಹೆಚ್ಚಿಸಿಕೊಂಡರು. ಖಾಲಿಖ್ ಹಿಂದಕ್ಕೆ ಬಿದ್ದ. ಭಾರತದ ಮತ್ತೊಬ್ಬ ಓಟಗಾರ ಮಾಖನ್ ಸಿಂಗ್ ಕೂಡ ಆತನನ್ನು ಹಿಂದಕ್ಕೆ ತಳ್ಳಿ ಗುರಿ ಮುಟ್ಟಿದರು. ಪಾಕಿಗೆ ಗರ್ವಭಂಗವಾಗಿತ್ತು. ಆಯೂಬ್ ಖಾನ್ ಮಿಲ್ಕಾನತ್ತ ಬಂದು “ನೀನಿವತ್ತು ಓಡಲಿಲ್ಲ. ಹಾರಾಟ ನಡೆಸಿದೆ” ಎಂದ. ಅವಮಾನಿಸಲು ಕರೆಸಿದವರು ಬಿರುದುಕೊಟ್ಟು ಕಳುಹಿಸಿದರು. ಅಂದಿನಿಂದ ಮಿಲ್ಖಾ “ಫ್ಲೈಯಿಂಗ್ ಸಿಖ್ಖ್” ಆದ. ಅಂಥ ಫ್ಲೈಯಿಂಗ್ ‌ಸಿಖ್ಖ್‌ನನ್ನು ದೇಶ ಮರೆತುಹೋಗುವ ಹಂತದಲ್ಲಿದ್ದಾಗ ಅವರನ್ನು ನೆನಪಿಸಲು ಯಶಸ್ವಿಯಾದ “ಭಾಗ್ ಮಿಲ್ಕಾ ಭಾಗ್” ಸಿನೆಮಾದಲ್ಲಿಲ್ಲದ ಎಷ್ಟೋ ಸಂಗತಿಗಳನ್ನು The Race of my life ಪುಸ್ತಕದಲ್ಲಿ ನೋಡಬಹುದು.

✍️ ಸಂತೋಷ್‌ ತಮ್ಮಯ್ಯ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top