ಬಳ್ಳಾರಿ: ಸಂಭಾವ್ಯ ಕೊರೋನಾ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾಡಳಿತ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ‘ಬಾಲ ಚೈತನ್ಯ ಯೋಜನೆ’ ಜಾರಿಗೆ ತಂದಿದೆ.
ಆರಂಭಿಕ ಹಂತದಲ್ಲಿ ಈ ಯೋಜನೆಯನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ, ಹೊಸಪೇಟೆ, ಹಡಗಲಿ ತಾಲೂಕುಗಳಲ್ಲಿ ಜೂ. 8 ರಿಂದ ತೊಡಗಿಸಿದಂತೆ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ. ಆ ಬಳಿಕ ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಯೋಜನೆಯ ಮೂಲಕ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿ, ಅವರ ಮೇಲೆ ನಿಗಾ ವಹಿಸಲಾಗುತ್ತದೆ. ಇದನ್ನು ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಡಿಎಂಎಫ್ ನಿಧಿಯ ಹಣವನ್ನು ಬಳಸಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ.
ಇದರಲ್ಲಿ 0- 18 ವರ್ಷದೊಳಗಿನ ಮಕ್ಕಳಲ್ಲಿ ಮೂರು ವಲಯಗಳನ್ನು ಮಾಡಲಾಗಿದೆ. ರೆಡ್ ಝೋನ್ ಗೆ ಸಂಬಂಧಿಸಿದಂತೆ ಇರುವ ಮಕ್ಕಳ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಮತ್ತು ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ಸುಮಾರು 45 ಸಾವಿರ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರಲ್ಲಿ 852 ಮಕ್ಕಳನ್ನು ಪ್ರತ್ಯೇಕ ಕ್ವಾರಂಟೈನ್ಗೆ ಒಳಪಡಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮೂರನೇ ಅಲೆಗೂ ಮುನ್ನ ಅವಳಿ ಜಿಲ್ಲೆಗಳಲ್ಲಿ ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಪಟ್ಟಿ ತಯಾರಿಸಲಾಗುತ್ತದೆ. ಮಕ್ಕಳ ಹಿನ್ನೆಲೆ, ಹೆತ್ತವರು, ಪಾಲಕರ ಮಾಹಿತಿ ಕಲೆ ಹಾಕಲಾಗುತ್ತದೆ. ಕೊರೋನಾ ಸೋಂಕು ತಗುಲಿದ ಮಕ್ಕಳಿಗೆ ಚಿಕಿತ್ಸೆ, ಮಕ್ಕಳಿಗೆ ಸೋಂಕು ತಗುಲದಂತೆ ವಹಿಸಬಹುದಾದ ಎಚ್ಚರಿಕೆ ಮೊದಲಾದವುಗಳ ಬಗೆಗೂ ಈ ಯೋಜನೆ ಗಮನ ಹರಿಸಲಿದೆ. ಮಕ್ಕಳಿಗೆ, ತಾಯಂದಿರಿಗೆ ಪೌಷ್ಟಿಕ ಆಹಾರ, ಮಕ್ಕಳಲ್ಲಿ ಉತ್ಸಾಹ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಮಕ್ಕಳನ್ನು ಸೇರ್ಪಡೆ ಮಾಡಲು ವಸತಿ ನಿಲಯಗಳ ಸ್ಥಿತಿಗತಿ ಅಧ್ಯಯನ ಮೊದಲಾದವುಗಳನ್ನೂ ಈ ಯೋಜನೆಯಡಿ ಅಧಿಕಾರಿಗಳು ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.