ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೇರಿದಂತೆ ಇನ್ನಿತರ ಸೋಂಕುಗಳ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಸೋಂಕು ನಿವಾರಕ ದ್ರಾವಣಗಳನ್ನು ಬಳಕೆ ಮಾಡಿ ಒಳಾಂಗಣಗಳನ್ನು ಸ್ವಚ್ಛ ಮಾಡುವುದು, ಆ ಮೂಲಕ ಬ್ಯಾಕ್ಟೀರಿಯಾ, ಶಿಲೀಂಧ್ರ ಸೋಂಕು ಹೆಚ್ಚಾಗಿರುವುದನ್ನು ನಿಯಂತ್ರಣಕ್ಕೆ ತರಲು ಆಸ್ಪತ್ರೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರ ಪ್ರಮಾಣ ಕಂಡು ಬಂದಿದೆ. ಬ್ಲ್ಯಾಕ್ ಫಂಗಸ್ ಹೆಚ್ಚಿನ ಹಾನಿ ಮಾಡುತ್ತಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸೋಂಕು ನಿವಾರಣೆಗೆ ರಾಜ್ಯದ ಎಲ್ಲಾ ಸರ್ಕಾರ, ಖಾಸಗಿ ಆಸ್ಪತ್ರೆಗಳು ಗಮನ ಹರಿಸಬೇಕು ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ರಚಿಸಲಾಗಿರುವ ಸೋಂಕು ನಿಯಂತ್ರಣ ಮತ್ತು ಸ್ವಚ್ಛತಾ ಸಮಿತಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಸೋಂಕು ನಿಯಂತ್ರಣ ಮತ್ತು ತಡೆಗೆ ಅಧಿಕಾರಿಯನ್ನಾಗಿ ಆಸ್ಪತ್ರೆಯ ಜೀವಾಣು ಶಾಸ್ತ್ರ ಅಥವಾ ನಿವಾಸಿ ವೈದ್ಯಕೀಯ ಅಧಿಕಾರಿಯನ್ನು ನಿಯೋಜಿಸಬೇಕು. ಏರ್ ಕಂಡೀಷನ್ ಇರದಲ್ಲಿ ನೈಸರ್ಗಿಕ ಗಾಳಿಗೆ ವ್ಯವಸ್ಥೆ ಮಾಡಬೇಕು. ರೋಗಿಗಳಿಗೆ ಸುರಕ್ಷಿತ ಆಹಾರ ಮತ್ತು ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದೆ.
ಹಾಗೆಯೇ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು, ಐಸಿಯುಗಳಲ್ಲಿ ಬಳಸುವ ಉಪಕರಣಗಳಿಂದ ಸೋಂಕು ಹರಡುವುದನ್ನು ತಡೆಯಲು ಕ್ರಮ, ಪ್ರಯೋಗಾಲಯಗಳಲ್ಲಿ ಸೋಂಕು ತಡೆಯುವುದಕ್ಕೂ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಬೇರೆ ಸೋಂಕು ಬಾರದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಈ ಸಂಬಂಧ ಸಿಬ್ಬಂದಿಗೆ ಅಗತ್ಯ ತರಬೇತಿ ಒದಗಿಸುವಂತೆಯೂ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.