ಬೆಂಗಳೂರು: ಕೊರೋನಾ ಸೋಂಕು ತಡೆಗಟ್ಟುವ ಸಂಬಂಧ ಸಿಎಂ ಯಡಿಯೂರಪ್ಪ ಅವರು ಇಂದು ಮೈಸೂರು, ಹಾಸನ, ಬೆಳಗಾವಿ, ಕಲಬುರ್ಗಿ, ಹಾಸನ ಜಿಲ್ಲೆಗಳ ಸಂಸದರು, ಶಾಸಕರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಜಿಲ್ಲೆಗಳಲ್ಲಿ ಕೊರೋನಾ ತಡೆಗೆ ಎದುರಾಗುತ್ತಿರುವ ಸವಾಲುಗಳು, ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಅಲ್ಲದೆ ಸೂಕ್ತ ಕ್ರಮಗಳನ್ನು ಅನುಸರಿಸುವ ಮೂಲಕ ಕೊರೋನಾ ಪಾಸಿಟಿವಿಟಿ ದರವನ್ನು 10% ಗಿಂತ ಕಡಿಮೆ ಮಾಡುವಂತೆ ಸಿಎಂ ಸೂಚಿಸಿದರು. ಮರಣ ಪ್ರಮಾಣ ಸಹ ಕಡಿಮೆ.ಮಾಡುವಂತೆ ಅವರು ತಿಳಿಸಿದರು.
ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಶಾ ಕಾರ್ಯಕರ್ತೆಯರ ಬಾಕಿ ವೇತನ ಬಿಡುಗಡೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಎರಡು ಮೂರು ದಿನಗಳಲ್ಲೇ ವೇತನ ಪಾವತಿ ಮಾಡಲಾಗುವುದು . ರಾಜ್ಯದಲ್ಲಿ ವರದಿಯಾಗುತ್ತಿರುವ ಒಟ್ಟಾರೆ ಪ್ರಕರಣಗಳ ಪೈಕಿ, ಶೇಕಡ 60ರಷ್ಟು ಪ್ರಕರಣಗಳು ಬೆಂಗಳೂರು, ಮೈಸೂರು, ತುಮಕೂರು, ಹಾಸನ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವರದಿಯಾಗುತ್ತಿವೆ. ಅದೇ ರೀತಿ ಮರಣ ಪ್ರಮಾಣವೂ ಈ ಜಿಲ್ಲೆಗಳಲ್ಲೇ ಹೆಚ್ಚಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ , ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಕೋವಿಡ್ 2ನೇ ಅಲೆ ವೇಳೆ , ಗ್ರಾಮೀಣ ಪ್ರದೇಶಗಳಲ್ಲಿ ಪ್ರಕರಣಗಳು ಹೆಚ್ಚಿದ್ದು, ಆ ಭಾಗದಲ್ಲಿ ಹೋಂ ಐಸೋಲೇಷನ್ ಬದಲು, ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳಬೇಕಿದೆ. ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು, ಸೋಂಕಿತರನ್ನು ಪತ್ತೆ ಹಚ್ಚಿ , ಸಕಾಲದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ರಾಜ್ಯದಲ್ಲಿ ಔಷಧ, ವೈದ್ಯಕೀಯ ಸೌಲಭ್ಯ , ಆಮ್ಲಜನಕ ಸೇರಿ ಆರೋಗ್ಯ ಪರಿಕರಗಳು ಅಗತ್ಯಕ್ಕೆ ಅನುಗುಣವಾಗಿ ಸಮರ್ಪಕವಾಗಿ ಹಂಚಿಕೆಯಾಗಬೇಕು ಹಾಗೂ ಸಮಸ್ಯೆಯಾಗದಂತೆ ಸಂಪನ್ಮೂಲಗಳ ಸದ್ಬಳಕೆ ಖಾತರಿಪಡಿಸಬೇಕು ಎಂದು ತಿಳಿಸಿದರು.
ಈಗಾಗಲೇ ಸರ್ಕಾರ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ , ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಲಕ್ಷ ರೂಪಾಯಿಗಳನ್ನು ಕೋವಿಡ್ ನಿರ್ವಹಣೆಗೆ ಬಳಕೆ ಮಾಡಲು ಅನುಮತಿಸಿದೆ. ಅಲ್ಲದೆ, ಗ್ರಾಮ ಪಂಚಾಯಿತಿಗಳಿಗೆ ತಲಾ 50 ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.