ದುಬೈ: ಅರಬ್ ಸಂಯುಕ ಸಂಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿ ಅಭೂತಪೂರ್ವ ಸ್ವಾಗತವೇ ಸಿಕ್ಕಿದೆ. ಅದರಲ್ಲೂ ಸೋಮವಾರ ರಾತ್ರಿ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ‘ಮರ್ಹಬ ನಮೋ’ ಕಾರ್ಯಕ್ರಮದಲ್ಲಿ ೫೦ ಸಾವಿರ ಭಾರತೀಯರು ನೆರೆದು ಮಿನಿ ಇಂಡಿಯಾವನ್ನೇ ಸೃಷ್ಟಿಸಿದರು.
35 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಅರಬ್ ದೇಶಕ್ಕೆ ಆಗಮಿಸುತ್ತಿರುವುದನ್ನು ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹಬ್ಬದ ರೀತಿ ಆಚರಿಸಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಮೋದಿ, ‘ಇಲ್ಲಿ ಮಿನಿ ಇಂಡಿಯಾವನ್ನು ನಾನು ನೋಡುತ್ತಿದ್ದೇನೆ. ದುಬೈನಲ್ಲಿ ಭಾರತೀಯರು ಹಣವನ್ನು ಮಾತ್ರ ಗಳಿಸುತ್ತಿಲ್ಲ. ತಮ್ಮ ಸನ್ನಡತೆ, ಕಠಿಣ ಪರಿಶ್ರಮದಿಂದ ಭಾರತಕ್ಕೆ ಹೆಮ್ಮೆಯನ್ನು ತರುತ್ತಿದ್ದಾರೆ. ಭಾರತದಲ್ಲಿ ಮಳೆ ಬಂದರೆ ಇಲ್ಲಿ ನೆಲೆಸಿರುವ ಭಾರತೀಯರು ಕೊಡೆ ಬಿಡಿಸುತ್ತಾರೆ, ಭಾರತದಲ್ಲಿ ಪ್ರಾಕೃತಿಕ ವಿಪತ್ತು ಸಂಭವಿಸಿದರೆ ಇಲ್ಲಿರುವ ಭಾರತೀಯರು ನಿದ್ರಿಸದೆ ತನ್ನ ತಾಯ್ನಾಡಿನ ಬಗ್ಗೆ ಚಿಂತೆ ಮಾಡುತ್ತಾರೆ. ಇದು ಇಲ್ಲಿ ನೆಲೆಸಿರುವ ಭಾರತೀಯರು ತಮ್ಮ ಮಾತೃಭೂಮಿ ಬಗ್ಗೆ ಎಷ್ಟೊಂದು ಕಾಳಜಿ ಇಟ್ಟುಕೊಂಡಿದ್ದಾರೆ ಎಂಬುದನ್ನು ಸೂಚಿಸುತ್ತದೆ’ ಎಂದರು.
ಅರಬ್ ಮತ್ತು ಭಾರತದ ನಡುವೆ 700 ವಿಮಾನಗಳು ಹಾರಾಟ ನಡೆಸುತ್ತದೆ. ಆದರೆ ಭಾರತದ ಪ್ರಧಾನಿಯೊಬ್ಬರು ಇಲ್ಲಿಗೆ ಆಗಮಿಸಲು 35ವರ್ಷಗಳೇ ಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಪಾಕಿಸ್ಥಾನದ ಹೆಸರು ಸೂಚಿಸಿದೆಯೇ ಟಾಂಗ್ ನೀಡಿದ ಮೋದಿ, ಒಳ್ಳೆಯ ಭಯೋತ್ಪಾದಕರು, ಕೆಟ್ಟ ಭಯೋತ್ಪಾದಕರು ಎಂಬುದು ಇಲ್ಲ. ಭಯೋತ್ಪಾದಕರೆಲ್ಲಾ ಕೆಟ್ಟವರೇ. ಮಾನವೀಯತೆ ಮತ್ತು ಭಯೋತ್ಪಾದನೆಯ ನಡುವಿನ ಹೋರಾಟದಲ್ಲಿ ನಾವು ಮಾನವೀಯತೆಗೆ ಬೆಂಬಲ ನೀಡಬೇಕಾಗಿದೆ. ಯಾರನ್ನೂ ಕೇರ್ ಮಾಡದೆ ಭಾರತ ಮತ್ತು ಯುಎಇ ಜಂಟಿಯಾಗಿ ಭಯೋತ್ಪಾದನೆಯ ವಿರುದ್ಧ ಸಂದೇಶ ಸಾರಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದವರು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಕ್ರೀಡಾಂಗಣದಾದ್ಯಂತ ನೆರೆದಿದ್ದ ಜನ ಭಾವುಕರಾಗಿ ಮೋದಿ ಪ್ರತಿ ಮಾತಿಗೆ ಚಪ್ಪಾಳೆ ತಟ್ಟುತ್ತಾ ‘ಮೋದಿ ಮೋದಿ’ ಎಂದು ಹರ್ಷೋದ್ಗಾರ ಮಾಡಿದರು. ಭಾರತ್ ಮಾತ ಕೀ ಜೈ ಎಂಬ ಜೈಕಾರಗಳು ತೇಲಿ ಬಂದವು.
ಜನರ ಪ್ರೀತಿಗೆ, ಆತ್ಮೀಯತೆಗೆ ತಲೆಬಾಗಿದ ಮೋದಿ, ನಿಮ್ಮ ಈ ಆದರಸ ಸ್ವಾಗತವನ್ನು ಎಂದಿಗೂ ಮರೆಯೋದಿಲ್ಲ ಎಂದರು. ಅನಿವಾಸಿ ಭಾರತೀಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.