ಬೆಂಗಳೂರು: ರಾಜ್ಯದ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣ ಸಂಬಂಧ, ಹಳ್ಳಿಗಳ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ವೈದ್ಯರ ನಡೆ ಹಳ್ಳಿ ಕಡೆ ಎಂಬ ಮೊಬೈಲ್ ಕ್ಲಿನಿಕ್ ಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಸಹ ಹೊರಡಿಸಿದ್ದು, ಗ್ರಾಮೀಣ ಪ್ರದೇಶಗಳಿಗೆ ತೆರಳುವ ವೈದ್ಯರ ತಂಡದ ಜೊತೆಗೆ ತರಬೇತಿ ಹೊಂದುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿದೆ. ಈ ಸಂಬಂಧ ಈ ಮೊಬೈಲ್ ಕ್ಲಿನಿಕ್ಗಳು ಹಳ್ಳಿಗೆ ತಲುಪುವ ಎರಡು ದಿನ ಮೊದಲೇ ಈ ವಿಚಾರವನ್ನು ಜನರಿಗೆ ತಲುಪಿಸುವಂತೆಯೂ ಗ್ರಾಮ ಪಂಚಾಯತ್ಗೆ ಸರ್ಕಾರ ಈಗಾಗಲೇ ಸೂಚಿಸಿದೆ.
ಇನ್ನು ವೈದ್ಯರ ತಂಡ ಒಂದು ವಾರದಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡತಕ್ಕದ್ದು. ನಿತ್ಯ ಮೂರರಿಂದ ನಾಲ್ಕು ಹಳ್ಳಿಗಳಿಗೆ ತೆರಳಿ ಸೋಂಕಿನ ಲಕ್ಷಣಗಳನ್ನು ಹೊಂದಿರುವವರ ತಪಾಸಣೆ ನಡೆಸುವಂತೆ ಸರ್ಕಾರ ತಿಳಿಸಿದೆ. ಸೋಂಕಿತರ ಟ್ರಯಾಜಿಂಗ್, ರೋಗ ಲಕ್ಷಣಗಳ ಆಧಾರದಲ್ಲಿ ಅವರನ್ನು ಕೊರೋನಾ ಕೇರ್ ಸೆಂಟರ್ಗೆ ಸೇರಿಸುವುದೋ ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದೋ ಎಂಬುದರ ಕುರಿತು ತೀರ್ಮಾನ ತೆಗೆದುಕೊಳ್ಳುವಂತೆಯೂ ಸರ್ಕಾರ ಹೇಳಿದೆ.
ಹಾಗೆಯೇ ತಂಡಗಳ ನಿತ್ಯದ ವರದಿಯನ್ನು ಆಯಾ ತಾಲೂಕಿನ ಆರೋಗ್ಯ ಅಧಿಕಾರಿಗೆ ನೀಡಬೇಕು. ಹೀಗೆ ಕಾರ್ಯ ನಿರ್ವಹಿಸುವ ತಂಡಕ್ಕೆ ಅಗತ್ಯ ಕೊರೋನಾ ನಿಯಂತ್ರಕ ವಸ್ತುಗಳನ್ನು ಸರ್ಕಾರವೇ ನೀಡುತ್ತದೆ. ಮನೆ ಮನೆಗೆ ತೆರಳಿ ಈ ತಪಾಸಣೆ ನಡೆಸಬೇಕು. ಸೋಂಕಿತರನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ಅಥವಾ ಬೇರೆ ವಾಹನಗಳನ್ನು ಸಿದ್ಧಪಡಿಸುವಂತೆಯೂ ಸರ್ಕಾರ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.