ನವದೆಹಲಿ : ಭಾರತ ಕ್ರೀಡಾ ಪ್ರಾಧಿಕಾರವು ಈ ವರ್ಷದಿಂದ 13,000 ಕ್ಕೂ ಹೆಚ್ಚು ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ವೈದ್ಯಕೀಯ ಮತ್ತು ಅಪಘಾತ ವಿಮಾ ರಕ್ಷಣೆಯನ್ನು ವಿಸ್ತರಿಸಲಿದೆ. ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಕಿರಣ್ ರಿಜಿಜು ಮಾತನಾಡಿ, “ನಮ್ಮ ಎಲ್ಲಾ ಕ್ರೀಡಾಪಟುಗಳು ಮತ್ತು ಗುತ್ತಿಗೆ ಸಿಬ್ಬಂದಿ ಈ ಸಂಕಷ್ಟದ ಸಮಯದಲ್ಲಿ ಮತ್ತು ನಂತರವೂ ಆರೋಗ್ಯ ರಕ್ಷಣೆಯನ್ನು ಹೊಂದಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ಅವರು ನಮ್ಮ ರಾಷ್ಟ್ರದ ಸ್ವತ್ತು” ಎಂದು ಹೇಳಿದರು.
ಎಸ್ ಎಐ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಎಲ್ಲಾ ರಾಷ್ಟ್ರೀಯ ಶಿಬಿರಾರ್ಥಿಗಳು, ಸಂಭಾವ್ಯ ರಾಷ್ಟ್ರೀಯ ಶಿಬಿರಾರ್ಥಿಗಳು, ಖೇಲೋ ಇಂಡಿಯಾ ಕ್ರೀಡಾಪಟುಗಳು ಮತ್ತು ಕಿರಿಯ ಶಿಬಿರಾರ್ಥಿಗಳಿಗೆ ತರಬೇತಿಯಲ್ಲಿರುವ ಎಲ್ಲರಿಗೂ ತಲಾ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆ ನೀಡಲಾಗುವುದು. ಆರೋಗ್ಯ ವಿಮೆಯು 5 ಲಕ್ಷ ರೂಪಾಯಿಗಳದ್ದಾಗಿದ್ದು ಇದರಲ್ಲಿ ಅಪಘಾತ ಅಥವಾ ಸಾವಿಗೆ 25 ಲಕ್ಷ ರೂಪಾಯಿಗಳ ವಿಮೆಯು ಸಹ ಸೇರಿದೆ.
“ಈ ಉಪಕ್ರಮದ ಮೂಲಕ, ಎಲ್ಲಾ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ರಾಷ್ಟ್ರೀಯ ಶಿಬಿರಗಳ ಅವಧಿಯಲ್ಲಿ ಮಾತ್ರವಲ್ಲದೆ ವರ್ಷದುದ್ದಕ್ಕೂ ವಿಮಾ ರಕ್ಷಣೆಯನ್ನು ಹೊಂದಿರುತ್ತಾರೆ ಎಂದು ನಾವು ಖಚಿತಪಡಿಸುತ್ತಿದ್ದೇವೆ. ಖೇಲೋ ಇಂಡಿಯಾ ಹಿರಿಯರು ಮತ್ತು ಕಿರಿಯ ಕ್ರೀಡಾಪಟುಗಳಿಗೆ ನಾವು ವಿಮಾ ರಕ್ಷಣೆಯನ್ನು ಗಮನಾರ್ಹವಾಗಿ ವಾರ್ಷಿಕ ಪ್ರತಿ ಕ್ರೀಡಾಪಟುವಿಗೆ 5 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಿದ್ದೇವೆ ”ಎಂದು ಶ್ರೀ ರಿಜಿಜು ಹೇಳಿದರು.
ಈ ವರ್ಷ ಇಲ್ಲಿಯವರೆಗೆ ಕೆಲವು ವಿಭಾಗಗಳಲ್ಲಿ ಇಂತಹ ಶಿಬಿರಗಳು ಕಾರ್ಯನಿರ್ವಹಿಸದಿದ್ದರೂ ರಾಷ್ಟ್ರೀಯ ಶಿಬಿರದ ದಿನಾಂಕಗಳನ್ನು ಗಣನೆಗೆ ತೆಗೆದುಕೊಳ್ಳದೆ ಇದು ಜಾರಿಗೆ ಬರಲಿದೆ. ಇದು ವಿಮೆಯಲ್ಲಿ ನಿರಂತರತೆಯನ್ನು ಖಚಿತಪಡಿಸುತ್ತದೆ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ತರಬೇತುದಾರರು ಮತ್ತು ರಾಷ್ಟ್ರೀಯ ಶಿಬಿರಗಳಿಗೆ ಸಂಬಂಧಿಸಿದ ಸಹಾಯಕ ಸಿಬ್ಬಂದಿಗೆ ಅಗತ್ಯವಾದ ಬೆಂಬಲವನ್ನು ನೀಡುತ್ತದೆ.
ವಿಮಾ ಯೋಜನೆಯಲ್ಲಿ ಸೇರ್ಪಡೆಗೊಳ್ಳಲು ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಯನ್ನು ಗುರುತಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರವು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ಮನವಿ ಮಾಡಿದೆ. ಈ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡುವವರ ದತ್ತಾಂಶವನ್ನು ರಾಷ್ಟ್ರೀಯ ಕ್ರೀಡಾ ಭಂಡಾರ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗುವುದು ಮತ್ತು ಪಾರದರ್ಶಕ, ಸುಲಭವಾಗಿ ಪ್ರವೇಶಿಸುವ ಪ್ರಕ್ರಿಯೆಯನ್ನು ರಚಿಸಲು ಇದನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬಹುದು.
ಪ್ರತಿ ರಾಷ್ಟ್ರೀಯ ಕ್ರೀಡಾ ಒಕ್ಕೂಟದ ತರಬೇತಿ ಮತ್ತು ಸ್ಪರ್ಧೆಯ ವಾರ್ಷಿಕ ಕ್ಯಾಲೆಂಡರ್ ಮೂಲಕ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಶಿಬಿರಗಳು, ವಿದೇಶಗಳಲ್ಲಿ ಸ್ಪರ್ಧಾತ್ಮಕ ಮಾನ್ಯತೆ, ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳನ್ನು ನಡೆಸುವುದಕ್ಕೆ ಮತ್ತು ಕಿರಿಯ ಕಾರ್ಯಕ್ರಮಗಳಿಗೆ ಹಣ ನೀಡುತ್ತದೆ. ಅಲ್ಲದೆ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ ಉತ್ತಮವಾದ ಕ್ರೀಡಾಪಟುಗಳಿಗೂ ಸಹ ನೆರವು ನೀಡುತ್ತದೆ.
ಅಲ್ಲದೆ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು 596 ಮಾಜಿ ಅಂತರರಾಷ್ಟ್ರೀಯ ಆಟಗಾರರಿಗೆ ಮಾಸಿಕ ಪಿಂಚಣಿ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.