ಬೆಂಗಳೂರು: ರಾಜ್ಯದಲ್ಲಿನ 18 – 44 ವರ್ಷಗಳ ವರೆಗಿನ ಮುಂಚೂಣಿ ಕಾರ್ಯಕರ್ತರು ಮತ್ತು ಆದ್ಯತಾ ವಲಯವನ್ನು ಗುರುತಿಸಿ ಅವರಿಗೆ ಕೊರೋನಾ ಲಸಿಕೆ ನೀಡುವ ಸಂಬಂಧ ಗಮನ ಹರಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ. ನಾಳೆ (ಮೇ 22) ಯಿಂದಲೇ ಲಸಿಕೆ ನೀಡುವಂತೆಯೂ ಇಲಾಖೆ ತಿಳಿಸಿದೆ.
ಲಸಿಕೆ ಅಭಾವದಿಂದ 18 – 44 ನಡುವಿನ ವಯಸ್ಕರಿಗೆ ಲಸಿಕೆ ನೀಡಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಈ ವಯಸ್ಸಿನ ಆದ್ಯತಾ ವಲಯಗಳಿಗೆ ಲಸಿಕೆ ನೀಡಬೇಕು ಎಂದು ಮೇ 15 ರಂದು ನಡೆದ ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೋಡಲ್ ಅಧಿಕಾರಿಗಳ ನೇಮಕ, ಆದ್ಯತಾ ವಲಯ ಗುರುತಿಸುವಿಕೆ, ಪ್ರಮಾಣ ಪತ್ರ ನೀಡುವುದು, ಲಸಿಕಾ ಸ್ಥಳ ಗುರುತಿಸುವಿಕೆ ಮೊದಲಾದ ಉಸ್ತುವಾರಿ ನೋಡಿಕೊಳ್ಳುವಂತೆಯೂ ಜಿಲ್ಲಾಧಿಕಾರಿಗಳಿಗೆ ಇಲಾಖೆ ಸೂಚಿಸಿದೆ.
ಆದ್ಯತಾ ವಲಯದಲ್ಲಿ ಬರುವ ವಿಕಲಚೇತನರಿಗೆ ಮತ್ತು ಅವರ ಆರೈಕೆದಾರರಿಗೆ, ಚಿತಾಗಾರಗಳಲ್ಲಿ ಕೆಲಸ ನಿರ್ವಹಿಸುವವರಿಗೆ, ಕೋವಿಡ್ ಕರ್ತವ್ಯದಲ್ಲಿರುವ ಶಿಕ್ಷಕರಿಗೆ, ಕೈದಿಗಳು, ಆರೋಗ್ಯ ಕಾರ್ಯಕರ್ತರ ಕುಟುಂಬಸ್ಥರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ , ಕ್ಯಾಬ್ ಚಾಲಕರು, ವಿದ್ಯುತ್, ನೀರು ಸರಬರಾಜುದಾರರು, ನ್ಯಾಯಾಂಗ ಅಧಿಕಾರಿಗಳು, ಹೌಸ್ ಕೀಪಿಂಗ್, ರೋಗಿಗಳು ಮತ್ತು ವೃದ್ಧರ ಆರೈಕೆದಾರರು, ಮಹಿಳಾ ಮತ್ತು ಮಕ್ಕಳ ಇಲಾಖೆ, ಪೆಟ್ರೋಲ್ ಬಂಕ್ ಸಿಬ್ಬಂದಿ, ಗ್ಯಾಸ್ ಸಿಬ್ಬಂದಿ, ಆಸ್ಪತ್ರೆಗಳಿಗೆ ಸರಕು ಸರಬರಾಜು ಮಾಡುವವರು, ಔಷಧ ಕಂಪೆನಿ ಸಿಬ್ಬಂದಿ, ನಿರ್ಗತಿಕರು, ವೃದ್ಧಾಶ್ರಮ ವಾಸಿಗಳು, ಎಪಿಎಂಸಿ ಕೆಲಸಗಾರರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಹಾಗೆಯೇ ಕಟ್ಟಡ ಕಾರ್ಮಿಕರು, ಟೆಲಿಕಾಂ ಇಂಟರ್ನೆಟ್ ಸೇವಾದಾರರು, ವಿಮಾನ ಸಂಸ್ಥೆ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ವಕೀಲರು, ಚಿತ್ರರಂಗದ ಸಿಬ್ಬಂದಿ, ಹೊಟೇಲ್ ಸಿಬ್ಬಂದಿ, ಕೆಎಂಎಫ್ ಸಿಬ್ಬಂದಿ, ಗಾರ್ಮೆಂಟ್ಸ್ ನೌಕರರು, ರೈಲ್ವೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವ ಆಟಗಾರರು, ಗೇಲ್, ಎಚ್ಎಎಲ್ ಸಿಬ್ಬಂದಿಗೂ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.